ಮಂಗಳೂರು: ನಗರದ ಪ್ರತಿಷ್ಠಿತ ಸೇವಾಂಜಲಿ ಚಾರಿಟೇಬಲ್ ಟ್ರಸ್ಟ್ ಹಾಗೂ ಕೆಎಂಸಿ ಆಸ್ಪತ್ರೆಯ ಜಂಟಿ ಆಶ್ರಯದಲ್ಲಿ ಭಾನುವಾರ ಬಜಿಲಕೇರಿಯ ‘ಸೇವಾಂಜಲಿ ಏರೆನಾ’ದಲ್ಲಿ ರಕ್ತದಾನ ಶಿಬಿರವನ್ನು ಯಶಸ್ವಿಯಾಗಿ ಹಮ್ಮಿಕೊಳ್ಳಲಾಯಿತು.

ಕಾರ್ಯಕ್ರಮದಲ್ಲಿ ಟ್ರಸ್ಟ್‌ನ ಪ್ರಮುಖರಾದ ಹನುಮಂತ ಕಾಮತ್ ಅವರು ಮಾತನಾಡಿ, “ಮಂಗಳೂರಿನಲ್ಲಿ ತುರ್ತು ಪರಿಸ್ಥಿತಿಗಳಲ್ಲಿ ರಕ್ತದ ಕೊರತೆ ಇರುವುದು ನಮ್ಮ ಗಮನಕ್ಕೆ ಬಂದ ಕೂಡಲೇ ಈ ಶಿಬಿರವನ್ನು ಆಯೋಜಿಸಲು ನಿರ್ಧರಿಸಿದೆವು. ಅತೀ ಕಡಿಮೆ ಅವಧಿಯಲ್ಲಿ ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡರೂ, ಯುವಜನತೆ ಮತ್ತು ದಾನಿಗಳಿಂದ ಅಭೂತಪೂರ್ವ ಸ್ಪಂದನೆ ದೊರೆತಿದೆ,” ಎಂದರು.
ರಕ್ತದಾನದ ಮಹತ್ವವನ್ನು ವಿವರಿಸಿದ ಅವರು, “ಒಬ್ಬ ವ್ಯಕ್ತಿ ರಕ್ತದಾನ ಮಾಡುವುದರಿಂದ ಮೂರು ಜೀವಗಳನ್ನು ಉಳಿಸಲು ಸಾಧ್ಯವಿದೆ. ದಾನ ಮಾಡುವ ವ್ಯಕ್ತಿಗೆ ಇದರಿಂದ ಯಾವುದೇ ದೈಹಿಕ ತೊಂದರೆಗಳಾಗುವುದಿಲ್ಲ. ಆದ್ದರಿಂದ ಯುವ ಜನಾಂಗವು ಹೆಚ್ಚಿನ ಸಂಖ್ಯೆಯಲ್ಲಿ ಇಂತಹ ಮಾನವೀಯ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು. ಕಳೆದ 25 ವರ್ಷಗಳಿಂದ ಸೇವಾಂಜಲಿ ಟ್ರಸ್ಟ್ ಸತತವಾಗಿ ರಕ್ತದಾನ ಶಿಬಿರಗಳನ್ನು ನಡೆಸುತ್ತಾ ಬಂದಿದ್ದು, ಇದುವರೆಗೆ 50ಕ್ಕೂ ಅಧಿಕ ಶಿಬಿರಗಳನ್ನು ಯಶಸ್ವಿಯಾಗಿ ಪೂರೈಸಿದ ತೃಪ್ತಿ ನಮಗಿದೆ,” ಎಂದು ತಿಳಿಸಿದರು.
ಶಿಬಿರದಲ್ಲಿ ಕೆಎಂಸಿ ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿ ವರ್ಗದವರು ರಕ್ತ ಸಂಗ್ರಹಣಾ ಪ್ರಕ್ರಿಯೆಯಲ್ಲಿ ಸಹಕರಿಸಿದರು. ಸೇವಾಂಜಲಿ ಚಾರಿಟೇಬಲ್ ಟ್ರಸ್ಟ್‌ನ ಪದಾಧಿಕಾರಿಗಳು ಹಾಗೂ ಸ್ಥಳೀಯ ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.