ತೆಂಕುತಿಟ್ಟಿನ ಯಕ್ಷಗಾನ ವೇಷಧಾರಿ ಮುಂಡಾಜೆ ಸದಾಶಿವ ಶೆಟ್ಟಿ (67) ಅವರು ಶನಿವಾರ ರಾತ್ರಿ ಹೃದಯಾಘಾತದಿಂದ ನಿಧನ ಹೊಂದಿದರು. ಸದಾಶಿವ ಶೆಟ್ಟಿಯವರು ಕಟೀಲು ಮೇಳದಲ್ಲಿ ಕಳೆದ 23 ವರ್ಷಗಳಿಂದ ವೇಷಧಾರಿಯಾಗಿ ಹಾಗೂ 3ನೇ ಮೇಳದ ಪ್ರಬಂಧಕರಾಗಿ ಸೇವೆ ಸಲ್ಲಿಸಿದ್ದು, ಒಟ್ಟಾರೆಯಾಗಿ ಯಕ್ಷಗಾನ ಕ್ಷೇತ್ರದಲ್ಲಿ ಸುಮಾರು 56 ವರ್ಷಗಳ ಸುಧೀರ್ಘ ಅನುಭವ ಹೊಂದಿದವರಾಗಿದ್ದಾರೆ. 11ನೇ ವರ್ಷಕ್ಕೆ ಧರ್ಮಸ್ಥಳ ಮೇಳದಲ್ಲಿ ಸ್ತ್ರೀ ವೇಷದ ಮೂಲಕ ವೃತ್ತಿ ಜೀವನ ಆರಂಭಿಸಿದ್ದ ಸದಾಶಿವ ಶೆಟ್ಟಿಯವರು ಬಳಿಕ ಕರ್ನಾಟಕ, ಕುಂಬ್ಲೆ, ಸಸಿಹಿತ್ಲು ಸೇರಿದಂತೆ ಹಲವು ಮೇಳಗಳಲ್ಲಿ ತುಳು- ಕನ್ನಡ ಪ್ರಸಂಗಗಳಲ್ಲಿ ಎಲ್ಲ ಸ್ವರೂಪದ ಪಾತ್ರಗಳನ್ನು ನಿರ್ವಹಿಸಿದ್ದರು. ಪಟ್ಲ ಸತೀಶ್ ಶೆಟ್ಟಿ ಭಾಗವತಿಕೆಯಲ್ಲಿ ಯಕ್ಷ ಪ್ರಿಯರಿಂದ ಬಹುಬೇಡಿಕೆ ಹೊಂದಿದ್ದ ಕಟೀಲಿನ ಮೂರನೇ ಮೇಳದಲ್ಲಿ ಸದಾಶಿವ ಶೆಟ್ಟಿಯವರು ಪ್ರಬಂಧಕರಾಗಿ, ಎಲ್ಲಾ ಕಲಾವಿದರೊಂದಿಗೆ ಉತ್ತಮ ಬಾಂಧವ್ಯ ಹೊಂದಿ, ಮೇಳವನ್ನು ಉತ್ತಮ ರೀತಿಯಲ್ಲಿ ನಡೆಸಿಕೊಂಡು ಹೋಗಿದ್ದರು. ವಿದ್ಯುನ್ಮತಿ ಕಲ್ಯಾಣ ಪ್ರಸಂಗ ಪುಸ್ತಕದಲ್ಲಿ ಮುಂಡಾಜೆ ಅವರ ಸ್ತ್ರೀ ವೇಷದ ಚಿತ್ರ ಮುಖಪುಟದಲ್ಲಿದ್ದು ಅವರ ವೇಷದ ಸರಣಿಯ ದಾಖಲಾತಿ ಒದಗಿಸುತ್ತದೆ. ಪುಂಡು, ರಾಜವೇಶ, ನಾಟಕೀಯ ವೇಷಗಳಲ್ಲಿ ನುರಿತ ಕಲಾವಿದರಾಗಿದ್ದರು. ಕಳೆದ ವರ್ಷವಷ್ಟೇ ಸದಾಶಿವ ಶೆಟ್ಟಿಯವರಿಗೆ ಕದ್ರಿ ಕಂಬಳ ಬಾಲಕೃಷ್ಣ ಶೆಟ್ಟಿ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ಹೃದಯ ಸಂಬಂಧಿ ಅನಾರೋಗ್ಯ ನಿಮಿತ್ತ ಕೆಲ ದಿನಗಳ ಹಿಂದಷ್ಟೇ ಅವರಿಗೆ ಆಂಜಿಯೋಪ್ಲ್ಯಾಸ್ಟಿ ಚಿಕಿತ್ಸೆ ನಡೆದು ಚೇತರಿಸಿ ಮನೆಗೆ ಮರಳಿದ್ದರು ಎಂದು ತಿಳಿದು ಬಂದಿದೆ. ಅವರು ಪತ್ನಿ, ಇಬ್ಬರು ಪುತ್ರರು, ಓರ್ವ ಪುತ್ರಿಯನ್ನು ಅಗಲಿದ್ದಾರೆ.

ಸಹೋದರರ ಕಮಾಲ್
ಮುಂಡಾಜೆ ಸದಾಶಿವ ಶೆಟ್ಟಿ ಹಾಗೂ ಮುಂಡಾಜೆ ಬಾಲಕೃಷ್ಣ ಶೆಟ್ಟಿ ಸಹೋದರರಾಗಿದ್ದು, ಇಬ್ಬರೂ ಯಕ್ಷಗಾನ ಕ್ಷೇತ್ರದಲ್ಲಿ ಅಮೋಘ ವಾಕ್ ಚಾತುರ್ಯ ಹಾಗೂ ನಟನೆಯ ಮೂಲಕ ಗುರುತಿಸಿಕೊಂಡಿದ್ದರು. ಅದರಲ್ಲೂ ಕೋಟಿ ಚೆನ್ನಯ ಪಾತ್ರಗಳಲ್ಲಿ ಮಿಂಚಿ, ಅದ್ಬುತ ನಟನೆಯ ಮೂಲಕ ಇಬ್ಬರೂ ಸಹೋದರರು ಕಥೆಗೆ ಜೀವ ತುಂಬಿದ್ದರು. ಅದರಲ್ಲೂ ಸಹೋದರ ಬಾಲಕೃಷ್ಣ ಶೆಟ್ಟಿಯವರು ಗಿರಕಿ ವೀರನೆಂಬ ಬಿರುದನ್ನು ಹೊಂದಿದ್ದು, ಒಟ್ಟಿನಲ್ಲಿ ಸಹೋದರರು ಯಕ್ಷಗಾನ ರಂಗದಲ್ಲಿ ಕಮಾಲ್ ಮಾಡಿದವರು ಎಂದರೆ ಅತಿಶಯೋಕ್ತಿ ಆಗಲಾರದು.
11 ವರ್ಷಕ್ಕೆ ಧರ್ಮಸ್ಥಳ ಮೇಳಕ್ಕೆ ಎಂಟ್ರಿ !
ಸದಾಶಿವ ಶೆಟ್ಟಿಯವರು ಕೇವಲ 11 ವರ್ಷಕ್ಕೆ ಶ್ರೀ ಧರ್ಮಸ್ಥಳ ಯಕ್ಷಗಾನ ಕೇಂದ್ರದ ಪ್ರಥಮ ತಂಡದ ಕಲಾವಿದನಾಗಿ ಯಕ್ಷ ನಾಟ್ಯ ಕಲಿತು, ಧರ್ಮಸ್ಥಳ ಮೇಳದಲ್ಲಿ ಹಂತ ಹಂತ ವಾಗಿ ಬೆಳೆದು ಪುಂಡು, ಸ್ತ್ರೀ, ರಾಜವೇಶ, ಎದುರು ವೇಶಗಳಲ್ಲಿ ಪ್ರಬುದ್ಧತೆ ಸಾಧಿಸಿ, ಕದ್ರಿ, ಕುಂಬ್ಳೆ, ಮಧೂರು, ಸಸಿಹಿತ್ತು, ಬಪ್ಪನಾಡು ಮೇಳಗಳಲ್ಲಿ ತುಳು ಕನ್ನಡ ಪ್ರಸಂಗ ಗಳಲ್ಲಿ ವೈವಿದ್ಯ ಪಾತ್ರ ಗಳಲ್ಲಿ ಮೆರೆದು, ಕಳೆದ 23 ವರ್ಷಗಳಿಂದ ಕಟೀಲು ಮೇಳದಲ್ಲಿ ಸೇವೆ ಸಲ್ಲಿಸುತ್ತಿರುವ ಮುಂಡಾಜೆ ಅವರು ಮೇಳದ ಪ್ರಬಂಧಕರಾಗಿಯೂ ಜನಪ್ರಿಯತೆ ಗಳಿಸಿದ್ದರು.