ಪುತ್ತೂರು, ಅ. 14: ಮಗುವಿನ ಗಂಟಲಲ್ಲಿದ್ದ ಕಾಡಿಗೆ ಡಬ್ಬವನ್ನು ಇಎನ್‌ಟಿ ತಜ್ಞ ಡಾ। ರಾಮಮೋಹನ್ ಅವರು ಶಸ್ತ್ರಚಿಕಿತ್ಸೆಯಿಲ್ಲದೆ ಹೊರ ತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ.

ನೆಹರುನಗರ ನಿವಾಸಿಯಾಗಿದ್ದು, ಪ್ರಸ್ತುತ ಬೆಂಗಳೂರಿನಲ್ಲಿ ವಾಸ್ತವ್ಯವಿರುವ ಮಂಜು ಹಾಗೂ ವಿಶಾಲಾಕ್ಷಿ ದಂಪತಿಯ ಒಂದೂವರೆ ವರ್ಷದ ಗಂಡು ಮಗು ಆರ್ಯನ್ ವರ್ಷದ ಹಿಂದೆ ಜುಲೈಯಲ್ಲಿ ಸಣ್ಣದಾದ ಕಾಡಿಗೆ ಡಬ್ಬವನ್ನು ನುಂಗಿತ್ತು. ಬೆಂಗಳೂರು ಸಹಿತ ಹಲವು ಕಡೆ ವೈದ್ಯರಿಗೆ ತೋರಿಸಿದರೂ ಮಗುವಿನ ಸಮಸ್ಯೆಗೆ ಯಾವುದೇ ಪರಿಹಾರ ದೊರಕಿರಲಿಲ್ಲ.
ಪುತ್ತೂರಿನ ನೆಹರು ನಗರದಲ್ಲಿರುವ ತನ್ನ ಅಕ್ಕನ ಮನೆಗೆ ಬಂದಿದ್ದ ಮಗುವಿನ ತಾಯಿ ಅ. 13ರಂದು ಮಗುವಿನ ಕಫ, ಕೆಮ್ಮುವಿಗೆ ಚಿಕಿತ್ಸೆಗೆಂದು ಮಕ್ಕಳ ತಜ್ಞೆಡಾ। ಅರ್ಚನಾ ಕರಿಕ್ಕಳ ಬಳಿ ಬಂದಿದ್ದರು. ಅವರು ಪರೀಕ್ಷಿಸಿ ಸಂಶಯದಲ್ಲಿ ಇಎನ್‌ಟಿ ತಜ್ಞಡಾ। ರಾಮಮೋಹನ ಅವರ ಬಳಿಗೆ ಕಳುಹಿಸಿದ್ದರು. ಮಗುವನ್ನು ಪರೀಕ್ಷಿಸಿದ ಡಾ| ರಾಮಮೋಹನ್ ಅವರಿಗೆ ಮಗುವಿನ ಗಂಟಲಿನಲ್ಲಿ ಯಾವುದೋ ವಸ್ತು ಸಿಲುಕಿರುವುದು ಗೊತ್ತಾಗಿ ಗಂಟಲಿಲ್ಲಿ ಸಿಲುಕಿಕೊಂಡಿರುವ ವಸ್ತುವನ್ನು ಕೈಯಿಂದಲೇ ಹೊರೆ ತೆಗೆದಾಗ, ಮುಚ್ಚಳ ಸಹಿತವಾಗಿದ್ದ ಶೃಂಗಾರ ಕಾಡಿಗೆ ಡಬ್ಬವಾಗಿತ್ತು.