ವಿಟ್ಲ: ಬಂಟ್ವಾಳ ತಾಲೂಕಿನ ವಿಟ್ಲ ಮುಡ್ನೂರು ಗ್ರಾಮದ ಗುಂಪಲಡ್ಕ 4ನೇ ವಾರ್ಡಿನಲ್ಲಿ ಕಳೆದ 15 ದಿನಗಳಿಂದ ಎದುರಾಗಿದ್ದ ತೀವ್ರ ಕುಡಿಯುವ ನೀರಿನ ಸಮಸ್ಯೆಗೆ ಪುತ್ತೂರು ಶಾಸಕರಾದ ಶ್ರೀ ಅಶೋಕ್ ಕುಮಾರ್ ರೈ ಅವರು ತಕ್ಷಣ ಸ್ಪಂದಿಸುವ ಮೂಲಕ ಪರಿಹಾರ ಒದಗಿಸಿದ್ದಾರೆ.
ಸ್ಥಳೀಯ ನಿವಾಸಿಗಳು ಎದುರಿಸುತ್ತಿದ್ದ ನೀರಿನ ಅಭಾವದ ಬಗ್ಗೆ ಶಾಸಕರ ಗಮನಕ್ಕೆ ತಂದ ತಕ್ಷಣ, ಶಾಸಕರು ಸಾರ್ವಜನಿಕರ ಹಿತದೃಷ್ಟಿಯಿಂದ ನೀರಿನ ವ್ಯವಸ್ಥೆ ಮಾಡುವಂತೆ ಸೂಚಿಸಿದರು. ಅವರ ಮಾರ್ಗದರ್ಶನದಂತೆ, ಎನ್.ಎಸ್. ಕ್ರಷರ್‌ನ ಟ್ಯಾಂಕರ್ ಮೂಲಕ ದಡ್ಡಲಡ್ಕದ ಪ್ರೇಮಾ ಅವರ ಮನೆಯಿಂದ ಕುಡಿಯುವ ನೀರನ್ನು ಸರಬರಾಜು ಮಾಡಿ ಜನರಿಗೆ ಅನುಕೂಲ ಮಾಡಿಕೊಡಲಾಯಿತು.
ಪುತ್ತೂರು ಅಕ್ರಮ-ಸಕ್ರಮ ಸಮಿತಿಯ ಸದಸ್ಯರಾದ ರಾಮಣ್ಣ ಪಿಲಿಂಜ ಅವರ ವಿಶೇಷ ಮುತುವರ್ಜಿ ಹಾಗೂ ಗ್ರಾಮ ಪಂಚಾಯತ್ ಸಹಕಾರದಿಂದ ಈ ಕಾರ್ಯ ಯಶಸ್ವಿಯಾಗಿ ನೆರವೇರಿತು.
ತಮ್ಮ ಸಂಕಷ್ಟದ ಸಮಯದಲ್ಲಿ ತುರ್ತಾಗಿ ಸ್ಪಂದಿಸಿ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಿದ ಶಾಸಕ ಅಶೋಕ್ ಕುಮಾರ್ ರೈ, ಮುತುವರ್ಜಿ ವಹಿಸಿದ ರಾಮಣ್ಣ ಪಿಲಿಂಜ, ಟ್ಯಾಂಕರ್ ವ್ಯವಸ್ಥೆ ಮಾಡಿದ ಎನ್.ಎಸ್. ಕ್ರಷರ್ ಹಾಗೂ ತಮ್ಮ ಮನೆಯಿಂದ ನೀರು ನೀಡಿದ ಟ್ರಸ್ಟ್ ಸದಸ್ಯರಾದ ಪ್ರೇಮಾ ಅವರಿಗೆ ಗುಂಪಲಡ್ಕ ನಿವಾಸಿಗಳು ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸಿದ್ದಾರೆ




