ಮಂಗಳೂರು: ಛತ್ತೀಸ್‌ಗಢದಲ್ಲಿ ಕ್ರೈಸ್ತ ಸನ್ಯಾಸಿನಿಯರನ್ನು ಮತಾಂತರ ಆರೋಪ ಹೊರಿಸಿ ಬಂಧಿಸಿರುವುದು ಖಂಡನೀಯ. ಅವರನ್ನು ಕೂಡಲೇ ಬಂಧನದಿಂದ ಬಿಡುಗಡೆ ಮಾಡುವಂತೆ ಒತ್ತಾಯಿಸಿ ಆ.4 ರಂದು ಮಂಗಳೂರಿನಲ್ಲಿ ಕಥೋಲಿಕ್ ಸಭಾ ಮಂಗಳೂರು ಪ್ರದೇಶ್ (ರಿ) ಇದರ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಸಂಘಟನೆ ಅಧ್ಯಕ್ಷ ಸಂತೋಷ್ ಡಿಸೋಜಾ ಹೇಳಿದ್ದಾರೆ.
ಈ ಬಗ್ಗೆ ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾರತ ದೇಶಾದ್ಯಂತ ಕ್ರೈಸ್ತ ಧರ್ಮಗುರುಗಳು, ಧರ್ಮ ಭಗಿನಿಯರು ಹಾಗೂ ಕ್ರೈಸ್ತ ಸಮುದಾಯದವರು ಶಾಂತಿ ಪ್ರಿಯರಾಗಿದ್ದು ದೇಶ ಭಕ್ತಿಯನ್ನು ಹೊಂದಿದವರಾಗಿರುತ್ತಾರೆ. ನಾವು ದೇಶಾದ್ಯಂತ ಕೇವಲ 3% ಜನಸಂಖ್ಯೆಯನ್ನು ಹೊಂದಿದ್ದು ಈ ದೇಶಕ್ಕಾಗಿ ವೈದ್ಯಕೀಯ, ಶೈಕ್ಷಣಿಕ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಅತ್ಯಂತ ಉನ್ನತ ಮಟ್ಟದ ಸೇವೆಯನ್ನು ನೀಡುತ್ತಾ ಬಂದಿರುತ್ತೇವೆ.
ಕಳೆದ ಕೆಲವು ವರ್ಷಗಳಿಂದೀಚೆಗೆ ಮಣಿಪುರ, ಒರಿಸ್ಸಾ ಮುಂತಾದ ರಾಜ್ಯಗಳಲ್ಲಿ ನಿರಪರಾಧಿಗಳಾದ ಕ್ರೈಸ್ತ ಜನಾಂಗದ ಮೇಲೆ ನಿರಂತರವಾಗಿ ದೌರ್ಜನ್ಯ ಹಾಗೂ ಹಲ್ಲೆ ನಡೆಯುತ್ತಿದ್ದು ಕ್ರೈಸ್ತ ಧರ್ಮದವರು ಭಯಭೀತರಾಗಿದ್ದು ಜೀವನ ನಡೆಸುವುದೇ ಕಷ್ಟಸಾಧ್ಯವಾಗಿರುತ್ತದೆ.
ಜು.25 ರಂದು ಛತ್ತೀಸ್‌ಗಢದಲ್ಲಿ ಕೇರಳದ ಸಿಸ್ಟರ್ ಆಫ್ ಮೇರಿ ಇಮ್ಯಾಕ್ಯುಲೇಟ್ ಆಫ್ ಅಪ್ಪಿಸಿಯ ಸದಸ್ಯರಾದ ತಲಕ್ಕೇರಿಯ ಸಿಸ್ಟರ್ ವಂದನಾ ಫ್ರಾನ್ಸಿಸ್ ಮತ್ತು ಅಂಗಮಾಲಿಯ ಸಿಸ್ಟರ್ ಪ್ರೀತಿ మేర్రి ఎంబ ಇಬ್ಬರು ಮಲಯಾಳಿ ಕಥೋಲಿಕ್ ಸನ್ಯಾಸಿನಿಯರನ್ನು ಹಾಗೂ ಛತ್ತೀಸ್ ಘಡದ ನಾರಾಯಣಪುರ ಜಿಲ್ಲೆಯ 18ರಿಂದ 19 ವರ್ಷದೊಳಗಿನ ಮೂವರು ಮಹಿಳೆಯರನ್ನು ರೈಲು ನಿಲ್ದಾಣದ ಬಳಿ ಹೋಗುತ್ತಿದ್ದಾಗ ಬಂಧಿಸಿ ಅವರ ಮೇಲೆ ಭಾರತೀಯ ನ್ಯಾಯ ಸಂಹಿತೆ ಮತ್ತು ಛತ್ತೀಸ್‌ಗಢ ಧಾರ್ಮಿಕ ಮತಾಂತರದ ಆರೋಪ ಹೊರಿಸಿರುವುದು ಆಘಾತಕಾರಿ ಸಂಗತಿಯಾಗಿದೆ.
ಮನೆ ಕೆಲಸಕ್ಕಾಗಿ ಮಹಿಳೆಯರನ್ನು ಕರಿದೊಯ್ಯುತ್ತಿದ್ದಾಗ ತಡೆಯೊಡ್ಡಿ ಮತಾಂತರ ಆರೋಪ ಹೊರಿಸಿ ಬಂಧಿಸಿರುವುದು ಖಂಡನೀಯ. ಈ ಕ್ರೈಸ್ತ ಸನ್ಯಾಸಿನಿಯರನ್ನು ಕೂಡಲೇ ಬಂಧನದಿಂದ ಬಿಡುಗಡೆ ಮಾಡಬೇಕು ಹಾಗೂ ಅವರನ್ನು ಬಂಧಿಸಲು ಕಾರಣರಾದವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸುತ್ತೇವೆ ಎಂದು ಹೇಳಿದರು.
ನಂತರ ಮಾತನಾಡಿದ ಸಂಘಟನೆಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಪೌಲ್ ರೋಸ್ ಡಿಕೋಸ್ತಾ, ಮಾನವ ಹಕ್ಕುಗಳ ಉಲ್ಲಂಘನೆ ಮಾಡುವಂತಹ ಈ ಭಯಾನಕ ಕೃತ್ಯಗಳನ್ನು ವಿರೋಧಿಸಿ ಆ.4ರ ಸೋಮವಾರದಂದು ಅಪರಾಹ್ನ 4.00 ಗಂಟೆಗೆ ಮಂಗಳೂರು ಮಿನಿವಿಧಾನಸೌಧದ ಎದುರು ಕಥೋಲಿಕ್ ಸಭಾ ಮಂಗಳೂರು ಪ್ರದೇಶ್ (ರಿ) ಇದರ ನೇತೃತ್ವದಲ್ಲಿ ಸಾರ್ವಜನಿಕ ಪ್ರತಿಭಟನಾ ಸಭೆಯನ್ನು ಹಮ್ಮಿಕೊಂಡಿರುತ್ತೇವೆ ಎಂದರು.
ಈ ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಕಥೊಲಿಕ್ ಸಭಾದ ಅಧ್ಯಕ್ಷರಾದ ಸಂತೋಷ್ ಡಿಸೋಜಾ, ಸಾರ್ವಜನಿಕ ಸಂಪರ್ಕಧಿಕಾರಿ ಪೌಲ್ ರೋಸ್ ಡಿಕೋಸ್ತಾ, ಮಂಗಳೂರು ಧರ್ಮಪ್ರಾಂತ್ಯದ ಸಾರ್ವಜನಿಕ ಸಂಪರ್ಕಾಧಿಕಾರಿ ರೋಯ್ ಕ್ಯಾಸ್ಟಲಿನೊ, ಸಿಆರ್‌ಐ ಅಧ್ಯಕ್ಷರಾದ ವಂದನೀಯ ಡೊಮಿನಿಕ್ ವಾಸ್ ಒಸಿಡಿ, ಸಿಸ್ಟರ್ ಸೆನ್ ಮಿನೇಜಸ್, ಎಸ್ಎ ಪಿ, ಕಥೋಲಿಕ್ ಸಭಾ ನಿಕಟಪೂರ್ವ ಅಧ್ಯಕ್ಷರಾದ ಓಲ್ವಿನ್ ಡಿಸೋಜಾ ಹಾಗೂ ಮಾಜಿ ಅಧ್ಯಕ್ಷರಾದ ಶ್ರೀ ಸ್ಟೇನಿ ಲೋಬೊರವರು ಮಾತನಾಡಲಿರುವರು ಎಂದು ಮಾಹಿತಿ ನೀಡಿದರು.