canaratvnews

ನೂತನ ಪೋಪ್ ಆಯ್ಕೆಗೆ ಕರ್ನಾಟಕದವರಿಗಿಲ್ಲ ಅವಕಾಶ! ಭಾರತದಿಂದ ನಾಲ್ವರು ಭಾಗಿ

ವಾಷಿಂಗ್ಟನ್‌: l ನಿಧನರಾದ ರೋಮನ್ ಕ್ಯಾಥೋಲಿಕ್‌ ಚರ್ಚ್‌ನ ಪ್ರಧಾನ ಧರ್ಮಗುರು ಪೋಪ್‌ ಫ್ರಾನ್ಸಿಸ್‌ ಅವರ ಉತ್ತರಾಧಿಕಾರಿಯ ಆಯ್ಕೆ ಪ್ರಕ್ರಿಯೆಯಲ್ಲಿ ಭಾರತದಿಂದ ನಾಲ್ವರು ಕಾರ್ಡಿನಲ್‌ಗಳು ಭಾಗವಹಿಸಲಿದ್ದಾರೆ. ಇದರಲ್ಲಿ ಕೇರಳ ಮೂಲದವರಿದ್ದು, ಕರ್ನಾಟಕದವರಿಗೆ ಅವಕಾಶ ಸಿಕ್ಕಿಲ್ಲ ಎನ್ನಲಾಗಿದೆ.
ಈಸ್ಟರ್ ಭಾನುವಾರದಂದು ಕೊನೆಯ ಭಾಷಣ ಮಾಡಿದ್ದ ಪೋಪ್‌ ಫ್ರಾನ್ಸಿಸ್‌ ಅನಾರೋಗ್ಯದಿಂದ ಸೋಮವಾರ ನಿಧನ ಹೊಂದಿದರು.

ಸಂಪ್ರದಾಯದ ಪ್ರಕಾರ ಮತದಾನಕ್ಕೆ ಅರ್ಹತೆ ಪಡೆದಿರುವ 138 ಕಾರ್ಡಿನಲ್‌ಗಳು ವ್ಯಾಟಿಕನ್‌ ಸಿಟಿಯ ಸಿಸ್ಟಿನ್‌ ಚಾಪೆಲ್‌ನಲ್ಲಿ ಸಮಾವೇಶ ನಡೆಸಲಿದ್ದಾರೆ. ಅಲ್ಲಿ ಅವರು ರಹಸ್ಯ ಮತದಾನ ಮಾಡುವ ಮೂಲಕ ಪೋಪ್‌ ಫ್ರಾನ್ಸಿಸ್‌ ಅವರ ಉತ್ತರಾಧಿಕಾರಿಯನ್ನು ಆಯ್ಕೆ ಮಾಡಲಿದ್ದಾರೆ.

80 ವರ್ಷ ಮೇಲ್ಪಟ್ಟ ಕಾರ್ಡಿನಲ್‌ಗಳಿಗೆ ಮತ ಚಲಾಯಿಸುವ ಹಕ್ಕು ಇಲ್ಲ.

‘ಭಾರತದ ಆರು ಕಾರ್ಡಿನಲ್‌ಗಳ ಪೈಕಿ ಇಬ್ಬರು ನಿಗದಿತ ವಯಸ್ಸಿನ ಮಿತಿಯನ್ನು ದಾಟಿದ್ದು, ನಾಲ್ವರು ಮತ ಚಲಾಯಿಸುವ ಅರ್ಹತೆ ಪಡೆದಿದ್ದಾರೆ’ ಎಂದು ಮಾಧ್ಯಮಗಳು ವರದಿ ಮಾಡಿವೆ.
51 ವರ್ಷದ ಕಾರ್ಡಿನಲ್ ಜಾರ್ಜ್ ಅವರು ಭಾರತೀಯ ಕಾರ್ಡಿನಲ್‌ಗಳ ಪೈಕಿ ಅತ್ಯಂತ ಕಿರಿಯ ವಯಸ್ಸಿನವರಾಗಿದ್ದಾರೆ. ಕೇರಳದ ಸಿರೋ–ಮಲಬಾರ್ ಚರ್ಚ್‌ನಲ್ಲಿ ಆರ್ಚ್‌ಬಿಷಪ್‌ ಆಗಿರುವ ಇವರು ವ್ಯಾಟಿಕನ್ ರಾಜತಾಂತ್ರಿಕರಾಗಿದ್ದಾಗ ಪೋಪ್ ಫ್ರಾನ್ಸಿಸ್ ಅವರ ವಿದೇಶ ಪ್ರವಾಸಗಳನ್ನು ಆಯೋಜಿಸಿದ್ದರು. 2004ರಲ್ಲಿ ಪಾದ್ರಿ ಆಗಿ ಆಯ್ಕೆಯಾದ ಇವರು 2024ರಲ್ಲಿ ಕಾಲೇಜ್‌ ಆಫ್‌ ಕಾರ್ಡಿನಲ್ಸ್‌ ಸದಸ್ಯರಾಗಿ ಬಡ್ತಿ ಪಡೆದಿದ್ದರು.
63 ವರ್ಷದ ಕಾರ್ಡಿನಲ್ ಆಂಥೋನಿ ಪೂಲಾ ಅವರು ಭಾರತದ ಮೊದಲ ದಲಿತ ಕಾರ್ಡಿನಲ್‌ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಸಾಮಾಜಿಕ ಸುಧಾರಣೆಯಲ್ಲಿ ತೊಡಗಿದ್ದ ಇವರು 2022ರಲ್ಲಿ ಕಾರ್ಡಿನಲ್‌ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.
64 ವರ್ಷ ವಯಸ್ಸಿನ ಕಾರ್ಡಿನಲ್ ಕ್ಲೀಮಿಸ್ ಬಸೇಲಿಯೋಸ್ ಅವರು ತಿರುವನಂತಪುರದ ಮೇಜರ್ ಆರ್ಚ್‌ಬಿಷಪ್ ಮತ್ತು ಸಿರೋ-ಮಲಂಕರ ಕ್ಯಾಥೋಲಿಕ್ ಚರ್ಚ್‌ನ ಮೇಜರ್ ಆರ್ಚ್‌ಬಿಷಪ್-ಕ್ಯಾಥೋಲಿಕೋಸ್ ಆಗಿದ್ದಾರೆ. 1986ರಲ್ಲಿ ಪಾದ್ರಿಯಾಗಿ ಆಯ್ಕೆಯಾದ ಇವರು 2012ರಲ್ಲಿ ಕಾರ್ಡಿನಲ್ಸ್ ಕಾಲೇಜಿಗೆ ಆಯ್ಕೆಯಾಗಿದ್ದರು.
72 ವರ್ಷದ ಕಾರ್ಡಿನಲ್ ಫಿಲಿಪ್ ನೆರಿ ಫೆರಾವ್ ಅವರು ಹೊಸ ಪೋಪ್ ಆಯ್ಕೆ ಮಾಡಲು ಅರ್ಹರಾದ ಭಾರತೀಯ ಕಾರ್ಡಿನಲ್ಸ್‌ಗಳಲ್ಲಿ ಅತಿ ಹಿರಿಯರು. ಸಾಮಾಜಿಕ ನ್ಯಾಯ ಮತ್ತು ಹವಾಮಾನ ಬದಲಾವಣೆ ಕುರಿತು ಕಾಳಜಿ ಹೊಂದಿದ್ದ ಇವರು 1979ರಲ್ಲಿ ಪಾದ್ರಿಯಾಗಿ ಆಯ್ಕೆಯಾಗಿದ್ದರು. 2022ರಲ್ಲಿ ಕಾರ್ಡಿನಲ್ಸ್ ಕಾಲೇಜಿನ ಸದಸ್ಯರಾದರು.

Share News
Exit mobile version