ಮಂಗಳೂರು : ಹೊಸದಿಲ್ಲಿಯ ಕೇಂದ್ರ ಸಾಹಿತ್ಯ ಅಕಾಡೆಮಿಯ ಪಶ್ಚಿಮ ವಲಯ ಪ್ರಾದೇಶಿಕ ಭಾಷಾ ಸಮಿತಿ ಮುಖ್ಯಸ್ಥರಾಗಿ ಕವಿ, ಸಾಹಿತಿ ಮೆಲ್ವಿನ್ ರೊಡ್ರಿಗಸ್ ನೇಮಕಗೊಂಡಿದ್ದಾರೆ.
24 ರಾಷ್ಟ್ರೀಯ ಭಾಷೆಗಳ ಸಾಹಿತ್ಯದ ಶ್ರೇಯೋಭಿವೃದ್ದಿಗಾಗಿ1954 ರಿಂದ ಭಾರತ ಸರಕಾರದ ಸಂಸ್ಕೃತಿ ಸಚಿವಾಲಯದಡಿ ಶ್ರಮಿಸುತ್ತಿರುವ ಸ್ವಾಯತ್ತ ಸಂಸ್ಥೆ ಸಾಹಿತ್ಯ ಅಕಾಡೆಮಿಯಾಗಿದೆ. ಇದರ ಪಶ್ಚಿಮ ಪ್ರಾದೇಶಿಕ ವಲಯದಲ್ಲಿ ಗುಜರಾತಿ, ಮರಾಠಿ, ಸಿಂಧಿ ಮತ್ತು ಕೊಂಕಣಿ ಭಾಷೆಗಳಿದ್ದು, ಪ್ರಸ್ತುತ ಮೆಲ್ವಿನ್ ರೊಡ್ರಿಗಸ್ ಕೊಂಕಣಿ ಭಾಷಾ ಸಲಹಾ ಸಮಿತಿಯ ಮುಖ್ಯಸ್ಥರಾಗಿದ್ದಾರೆ.
ಪಶ್ಚಿಮ ವಲಯ ಪ್ರಾದೇಶಿಕ ಭಾಷಾ ಸಲಹಾ ಸಮಿತಿಯ ಮುಖ್ಯಸ್ಥರಾಗಿ – ಕೊಂಕಣಿ, ಗುಜರಾತಿ, ಮರಾಠಿ ಮತ್ತು ಸಿಂಧಿ ಭಾಷೆಗಳ ಯೋಜನೆಗಳನ್ನು ಕಾರ್ಯಗತಗೊಳಿಸುವ ಅವಕಾಶ ಲಭಿಸಿದ್ದು, ಈಗಾಗಲೇ ಒಂದು ದಿನದ ಕಾರ್ಯಕ್ರಮ ಸಂಪನ್ನವಾಗಿದ್ದು ಮುಂದಿನ ದಿನಗಳಲ್ಲಿ ಪಶ್ಚಿಮ – ಪೂರ್ವ ವಲಯ ಲೇಖಕರ ಎರಡು ದಿನಗಳ ಸಮ್ಮೇಳನ, ಕೊಂಕಣಿ, ಗುಜರಾತಿ, ಸಿಂಧಿ ಮತ್ತು ಮರಾಠಿ ಭಾಶೆಗಳಲ್ಲಿನ ಕ್ಲಾಸಿಕ್ ಸಾಹಿತ್ಯವನ್ನು ಇಂಗ್ಲಿಷ್ ಮತ್ತು ಹಿಂದೀ ಭಾಷೆಗಳಿಗೆ ಅನುವಾದ ಮಾಡುವ ಯೋಜನೆಗಳಿದ್ದು, ಕೊಂಕಣಿ ಭಾಷೆಯಿಂದ ವರಕವಿ ಲೂವಿಸ್ ಮಸ್ಕರೇನ್ಹಸ್ ಇವರ ‘ಆಬ್ರಾಂವ್ಚೆಂ ಯಜೣದಾನ್’ ಮಹಾಕಾವ್ಯವನ್ನು ಅನುವಾದಕ್ಕಾಗಿ ಆಯ್ಕೆ ಮಾಡಲಾಗಿದೆ.