ಮಂಗಳೂರು, ಡಿ.31: ಹೊಸ ವರುಷ ಹಾಗೂ ದೇವಮಾತೆಯ ಹಬ್ಬವನ್ನು ಮಂಗಳೂರಿನ ಕ್ರೈಸ್ತರು ಇಂದು ಆಚರಿಸುತ್ತಿದ್ದು, ಈ ಹಿನ್ನೆಲೆ ಬುಧವಾರ ರಾತ್ರಿ ಚರ್ಚ್ ಗಳಲ್ಲಿ ವಿಶೇಷ ಬಲಿಪೂಜೆಗಳು ನಡೆದವು. ಹಳೆಯ ವರ್ಷದಲ್ಲಿ ದೇವರು ಕರುಣಿಸಿದ ವರಗಳಿಗೆ ಕೃತಜ್ಞತೆ ಸಲ್ಲಿಸುವ ಜತೆಗೆ ಹೊಸ ವರುಷ ಜಗತ್ತಿಗೆ ಹರುಷ ತರಲಿ ಎಂದು ಪ್ರಾರ್ಥಿಸಲಾಯಿತು.

ಮಂಗಳೂರಿನ ರೊಸಾರಿಯೋ ಕ್ಯಾಥೆಡ್ರಲ್, ಮಿಲಾಗ್ರಿಸ್, ಕೊರ್ಡೆಲ್, ಬೆಂದೂರು, ಕೂಳೂರು, ಬಿಜೈ, ಅಶೋಕ ನಗರ, ಆಂಜೇಲೋರ್, ಬೊಂದೇಲ್, ವಾಮಂಜೂರು, ಫಳ್ನೀರ್, ಕಾಸಿಯಾ, ಬಜಾಲ್, ಪಾಲ್ದನೆ, ದೇರೆಬೈಲ್, ಶಕ್ತಿನಗರ, ಕೆಲರೈ ಚರ್ಚ್ ಗಳು ಹಾಗೂ ಬಿಕರ್ನಕಟ್ಟೆ ಪುಣ್ಯಕ್ಷೇತ್ರ ಸಹಿತ ವಿವಿಧ ಚರ್ಚ್ ಗಳಲ್ಲಿ ವಿಶೇಷ ಪರಮಪ್ರಸಾದದ ಆರಾಧನೆ, ಪ್ರಾರ್ಥನೆ ಹಾಗೂ ಬಲಿಪೂಜೆ ನಡೆಯಿತು. ಶಾಂತಿ, ನೆಮ್ಮದಿಗಾಗಿ ಪ್ರಾರ್ಥಿಸಲಾಯಿತು.
ಹೊಸ ವರುಷ ಹರುಷ ತರಲಿ: ವಂ| ಬೊನವೆಂಚರ್ ನಝ್ರೆತ್ ಹೊಸ ವರ್ಷ ಹಾಗೂ ದೇವಮಾತೆಯ ಹಬ್ಬದ ಸಂದರ್ಭದಲ್ಲಿ ಮಿಲಾಗ್ರಿಸ್ ಚರ್ಚ್ ನಲ್ಲಿ ನಡೆದ ವಿಶೇಷ ಬಲಿಪೂಜೆಯ ನೇತೃತ್ವ ವಹಿಸಿ ಸಂದೇಶ ನೀಡಿದ ಪ್ರಧಾನ ಧರ್ಮಗುರು ವಂ| ಬೊನವೆಂಚರ್ ನಝ್ರೆತ್ ಅವರು, ಹಳೆಯ ವರ್ಷಕ್ಕೆ ವಿದಾಯ ಹೇಳುವ ಜತೆಗೆ ದೇವರು ಕರುಣಿಸಿದ ಕೃಪಾವರಗಳಿಗೆ ಕೃತಜ್ಞತೆ ಸಲ್ಲಿಸಲಾಗುತ್ತಿದೆ. ಹೊಸ ವರ್ಷ ಎಲ್ಲರಿಗೂ ಹರುಷವನ್ನು ತರಲಿ ಎಂದು ಹಾರೈಸಿದರು. ಬಲಿಪೂಜೆಯಲ್ಲಿ ಧರ್ಮಗುರುಗಳಾದ ವಂ| ಮ್ಯಾಕ್ಸಿಮ್ ರೊಸಾರಿಯೋ, ವಂ| ಐವನ್ ಡಿಸೋಜಾ, ವಂ| ಅವಿತ್ ಪಾಯಿಸ್, ವಂ| ಉದಯ್ ಫೆರ್ನಾಡಿಸ್, ವಂ| ಜೆರಾಲ್ಡ್ ಪಿಂಟೊ, ವಂ| ಆಲ್ವಿನ್ ಸೆರಾವೊ ಉಪಸ್ಥಿತರಿದ್ದರು.