ಮಂಗಳೂರು: ಗಲ್ಫ್ ದೇಶಗಳಲ್ಲಿ ದೀರ್ಘಕಾಲ ಉದ್ಯೋಗ ನಿರ್ವಹಿಸಿ ನಂತರ ಉದ್ಯೋಗ ನಷ್ಟ, ವಯೋಮಿತಿ ಹಾಗೂ ಆರೋಗ್ಯ ಸಮಸ್ಯೆಗಳ ಕಾರಣದಿಂದ ಸ್ವದೇಶಕ್ಕೆ ಮರಳಿರುವ ನಿವೃತ್ತ ಕಾರ್ಮಿಕರ ಕಲ್ಯಾಣಕ್ಕಾಗಿ ರಾಜ್ಯ ಸರ್ಕಾರವು ಸಮಗ್ರ ಯೋಜನೆ ರೂಪಿಸಬೇಕೆಂದು ಗಲ್ಫ್ ರಿಟಾಯರೀಸ್ ಅಸೋಸಿಯೇಶನ್ (GRA) ಮನವಿ ಮಾಡಿದೆ.

ಈ ಸಂಬಂಧ ಫೆ.12ರಂದು ಸಂಘದ ಪದಾಧಿಕಾರಿಗಳು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿದರು. ಗಲ್ಫ್ ದೇಶಗಳಲ್ಲಿ ಸೇವೆ ಸಲ್ಲಿಸಿದ ಅವಧಿಯಲ್ಲಿ ಈ ಕಾರ್ಮಿಕರು ಗಳಿಸಿದ ವಿದೇಶಿ ವಿನಿಮಯವು ದೇಶದ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡಿದೆ.
ಆದರೆ ಸ್ವದೇಶಕ್ಕೆ ಮರಳಿದ ನಂತರ ಹಲವರು ನಿರುದ್ಯೋಗ, ಆರೋಗ್ಯ ಸಮಸ್ಯೆ ಹಾಗೂ ಮಕ್ಕಳ ಶಿಕ್ಷಣ ಸಂಬಂಧಿತ ಸವಾಲುಗಳನ್ನು ಎದುರಿಸುತ್ತಿದ್ದಾರೆ ಎಂದು ಮನವಿಯಲ್ಲಿ ವಿವರಿಸಲಾಗಿದೆ. 2023ರಲ್ಲಿ ಮಂಗಳೂರಿನಲ್ಲಿ ಸ್ಥಾಪನೆಯಾದ ಗಲ್ಫ್ ರಿಟಾಯರೀಸ್ ಅಸೋಸಿಯೇಶನ್ ಸದಸ್ಯರ ಆರೋಗ್ಯ ನೆರವು, ಉದ್ಯೋಗ ಮಾರ್ಗದರ್ಶನ, ವಿದ್ಯಾರ್ಥಿವೇತನ ಹಾಗೂ ಜಾಗೃತಿ ಕಾರ್ಯಕ್ರಮಗಳನ್ನು ಕೈಗೊಳ್ಳುತ್ತಿದೆ.
ಕೇರಳ ರಾಜ್ಯದಲ್ಲಿ ಜಾರಿಯಲ್ಲಿರುವ ‘ನೋರ್ಕಾ’ ಮಾದರಿಯಂತೆ ಕರ್ನಾಟಕದಲ್ಲಿಯೂ ಪಿಂಚಣಿ, ವಿದ್ಯಾರ್ಥಿವೇತನ ಮತ್ತು ಇತರೆ ಸೌಲಭ್ಯಗಳನ್ನು ಒಳಗೊಂಡ ವಿಶೇಷ ಯೋಜನೆ ರೂಪಿಸಬೇಕು ಎಂದು ಸಂಘವು ಒತ್ತಾಯಿಸಿದೆ. ಗಲ್ಫ್ ನಿವೃತ್ತರಿಗಾಗಿ ಪ್ರತ್ಯೇಕ ಸಚಿವಾಲಯ ಸ್ಥಾಪಿಸಿ ಬಜೆಟ್‌ನಲ್ಲಿ ವಿಶೇಷ ಅನುದಾನ ಮೀಸಲಿಡಬೇಕು, ಅಲ್ಪಸಂಖ್ಯಾತರ ಇಲಾಖೆಯ ಹಿಂದಿನ ಬಡ್ಡಿರಹಿತ ಸಾಲ ಹಾಗೂ ಸಬ್ಸಿಡಿ ಯೋಜನೆಯನ್ನು ಪುನರಾರಂಭಿಸಬೇಕು.
ಅವಲಂಬಿತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡಬೇಕು ಹಾಗೂ ಆರೋಗ್ಯ ಸಮಸ್ಯೆಗಳ ನಿರ್ವಹಣೆಗೆ ವಿಶೇಷ ಕಾರ್ಯಕ್ರಮಗಳನ್ನು ಜಾರಿಗೊಳಿಸಬೇಕು ಎಂಬ ಬೇಡಿಕೆಗಳನ್ನು ಮನವಿಯಲ್ಲಿ ಉಲ್ಲೇಖಿಸಲಾಗಿದೆ.
ಮನವಿ ಸಲ್ಲಿಸುವ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಶಾಹುಲ್ ಹಮೀದ್, ಉಪಾಧ್ಯಕ್ಷರಾದ ಮೊಹಮ್ಮದ್ ಹುಸೇನ್ ಅರಕಿ ಮತ್ತು ಅಬ್ದುಲ್ ಹಮೀದ್ ಉಚ್ಚಿಲ್, ಕಾರ್ಯದರ್ಶಿ ಮೆಲ್ವಿನ್ ಲೋಬೋ, ಲೆಕ್ಕ ಪರಿಶೋಧಕ ಅಬ್ದುಲ್ ಹಮೀದ್ ಸೇರಿದಂತೆ ಪದಾಧಿಕಾರಿಗಳು ಉಪಸ್ಥಿತರಿದ್ದರು.

