canaratvnews

ನಮ್ಮಕುಡ್ಲ 25 ನೇ ವರ್ಷದ ಗೂಡುದೀಪ ಸ್ಪರ್ಧೆ

ಮಂಗಳೂರು: ಜಿಲ್ಲೆಯ ಪ್ರಪ್ರಥಮ ತುಳು ವಾರ್ತಾ ವಾಹಿನಿ ನಮ್ಮಕುಡ್ಲ ವತಿಯಿಂದ ದೀಪಾವಳಿ ಹಬ್ಬದ ಪ್ರಯುಕ್ತ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ 25 ನೇ ವರ್ಷದ ‘ನಮ್ಮಕುಡ್ಲ ಗೂಡುದೀಪ ಸ್ಪರ್ಧೆ’ ಅಕ್ಟೋಬರ್ 19 ರಂದು ಭಾನುವಾರ ನಡೆಯಿತು.ಸ್ಪರ್ಧೆಯು ಯಾವುದೇ ವಯೋಮಾನದ ನಿರ್ಬಂಧವಿಲ್ಲದೆ ಸಾಂಪ್ರದಾಯಿಕ, ಆಧುನಿಕ ಹಾಗೂ ಪ್ರತಿಕೃತಿ ಎಂಬ ಮೂರು ವಿಭಾಗಗಳಲ್ಲಿ ನಡೆದಿದ್ದು, ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಭಾಗಗಳಿಂದ ನೂರಾರು ಮಂದಿ ಸ್ಪರ್ಧಿಗಳು ಭಾಗವಹಿಸಿದ್ದರು. ಸ್ಪರ್ಧಿಗಳು ತಮ್ಮ ಮನೆಗಳಲ್ಲಿ ತಯಾರಿಸಿ ತಂದು ಪ್ರದರ್ಶಿಸಿದ ವಿಭಿನ್ನ ವಿನ್ಯಾಸದ, ವರ್ಣ ರಂಜಿತ ಗೂಡುದೀಪಗಳು ಮುಸ್ಸಂಜೆಯ ವಾತಾವರಣದಲ್ಲಿ ವಿದ್ಯುತ್‌ ದೀಪಗಳ ಬೆಳಕಿನಲ್ಲಿ ಆಕರ್ಷಕವಾಗಿ ಕಂಗೊಳಿಸಿ ಕುದ್ರೋಳಿ ಕ್ಷೇತ್ರದ ಆವರಣದಲ್ಲಿ ಹೊಸತೊಂದು ಲೋಕವನ್ನೇ ಸೃಷ್ಟಿಸಿದವು.ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಆಡಳಿತ ಮಂಡಳಿಯ ಉಪಾಧ್ಯಕ್ಷರಾದ ಊರ್ಮಿಳಾ ರಮೇಶ್ ಅವರು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಮಾಜಿ ಸಚಿವ ಕೃಷ್ಣ ಜೆ. ಪಾಲೇಮಾರ್ ಅವರು ಗೂಡು ದೀಪ ಏರಿಸುವ ಮೂಲಕ ಸ್ಪರ್ಧೆಗೆ ಚಾಲನೆ ನೀಡಿದರು.
ಸಾಧಕರು ಎಂಬ ನೆಲೆಯಲ್ಲಿ ಕೃಷ್ಣ ಜೆ ಪಾಲೆಮಾರ್ ಅವರಿಗೆ ಗೌರವ ಸನ್ಮಾನ ನೀಡಲಾಯಿತು.ಸನ್ಮಾನಕ್ಕೆ ಕೃತಜ್ಞತೆ ಸಲ್ಲಿಸಿದ ಪಾಲೆಮಾರ್, ಈ ಸ್ಪರ್ಧೆಯ ಮೂಲಕ ನಮ್ಮ ಕುಡ್ಲ ಸಂಸ್ಥೆ ಗೂಡು ದೀಪ ಪರಂಪರೆಯನ್ನು, ಸಂಸ್ಕೃತಿಯನ್ನು ಉಳಿಸಲು ಮುಂದೆ ಬಂದಿರುವುದು ಶ್ಲಾಘನೀಯ ಎಂದು ಹೇಳಿ ಶುಭ ಹಾರೈಸಿದರು.
ಮುಖ್ಯ ಅತಿಥಿಯಾಗಿದ್ದ ಶ್ರೀನಿವಾಸ ವಿಶ್ವ ವಿದ್ಯಾನಿಲಯದ ಸಹ ಕುಲಾಧಿಪತಿ ಡಾ. ಎ. ಶ್ರೀನಿವಾಸ ರಾವ್ ಮಾತನಾಡಿ, ತುಳುನಾಡಿನ ಸಂಸ್ಕೃತಿ ಉಳಿಸಲು ನಮ್ಮ ಕುಡ್ಲ ಸಂಸ್ಥೆ ಗಮನಾರ್ಹ ಕೊಡುಗೆ ನೀಡಿದೆ. ಗೂಡು ದೀಪ ಸ್ಪರ್ಧೆ ನಮ್ಮ ಸಂಸ್ಕೃತಿ ಉಳಿಸುವ ಮತ್ತು ಬೆಳಗಿಸುವ ಕಾರ್ಯಕ್ರಮ ಎಂದರು.ಇನ್ನೋರ್ವ ಅತಿಥಿ ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಮ್ಯಾನೇಜಿಂಗ್ ಟ್ರಸ್ಟಿ ವಿವೇಕ್ ಆಳ್ವ ಮಾತನಾಡಿ, ಇಲ್ಲಿ ಗೂಡು ದೀಪದ ಸಾಗರವೇ ನೋಡಲು ಸಿಗುತ್ತಿವೆ. ನಮ್ಮ ಕುಡ್ಲ ಆರಂಭಿಸಿದ ಸ್ಪರ್ಧೆ ಮಾದರಿಯಾಗಿದ್ದು, ಈಗ ಹಲವಾರು ಸಂಘ ಸಂಸ್ಥೆಗಳು ಗೂಡು ಸ್ಪರ್ಧೆಯನ್ನು ನಡೆಸುತ್ತಿವೆ. ಇದಕ್ಕಾಗಿ ನಮ್ಮ ಕುಡ್ಲ ಸಂಸ್ಥೆಗೆ ಅಭಿನಂದನೆಗಳು ಎಂದರು.ಸಮಾರಂಭದಲ್ಲಿ ನವ ಮಂಗಳೂರು ಬಂದರು ಪ್ರಾಧಿಕಾರದ ಅಧ್ಯಕ್ಷ ಡಾ. ವೆಂಕಟರಮಣ ಅಕ್ಕರಾಜು ಅವರು ಮುಖ್ಯ ಅತಿಥಿಯಾಗಿ ಆಗಮಿಸಿ ಶುಭ ಹಾರೈಸಿದರು. ಅವರನ್ನು ಈ ಸಂದರ್ಭದಲ್ಲಿ ಸನ್ಮಾನಸಲಾಯಿತು. ಶಾಸಕ ವೇದವ್ಯಾಸ ಕಾಮತ್ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಆಡಳಿತ ಮಂಡಳಿಯ ಅಧ್ಯಕ್ಷ ಜೈರಾಜ್ ಎಚ್. ಸೋಮಸುಂದರಮ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಕ್ಷೇತ್ರದ ಆಡಳಿತ ಮಂಡಳಿಯ ಕಾರ್ಯದರ್ಶಿ ಮಾಧವ ಸುವರ್ಣ, ಕೋಶಾಧಿಕಾರಿ ಪದ್ಮರಾಜ್ ಆರ್. ಪೂಜಾರಿ, ದಕ್ಷಿಣ ಕನ್ನಡ ಜಿಲ್ಲಾ. ಮೂರ್ತೇದಾರರ ಸಂಘದ ಅಧ್ಯಕ್ಷ ಸಂಜೀವ ಪೂಜಾರಿ, ಕ್ಷೇತ್ರಾಭಿವೃದ್ಧಿ ಸಮಿತಿಯ ಕೃತಿನ್ ಅಮೀನ್, ಹರಿಕೃಷ್ಣ ಬಂಟ್ವಾಳ, ರಮಾನಂದ ಕಾರಂದೂರು ಅವರು ಅತಿಥಿಗಳಾಗಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ನಮ್ಮಕುಡ್ಲ ವಾಹಿನಿಯ ನಿರ್ದೇಶಕರಾದ ಹರೀಶ್ ಬಿ. ಕರ್ಕೇರಾ, ಸುರೇಶ್ ಬಿ. ಕರ್ಕೇರಾ, ಮೋಹನ್ ಬಿ. ಕರ್ಕೇರಾ, ಲೀಲಾಕ್ಷ ಬಿ. ಕರ್ಕೇರಾ, ಸಂತೋಷ ಬಿ ಕರ್ಕೇರಾ ಅವರು ವೇದಿಕೆಯಲ್ಲಿದ್ದರು.
5 ಗಂಟೆಯೊಳಗೆ ಗೂಡು ದೀಪ ತಂದ ಸ್ಪರ್ಧಿಗಳಿಗೆ ವಿಶೇಷ ಬಹುಮಾನ ನೀಡುವ ಯೋಜನೆಯಡಿ ಭುವನೇಶ್ ಅವರು ಬಹುಮಾನ ಪಡೆದರು.
ಕದ್ರಿ ನವನೀತ್ ಶೆಟ್ಟಿ ಪ್ರಸ್ತಾವನೆಗೈದು ನಮ್ಮ ಕುಡ್ಲ ಗೂಡು ದೀಪ ಸ್ಪರ್ಧೆಯ ಇತಿಹಾಸವನ್ನು ವಿವರಿಸಿದರು.
ದಿನೇಶ್ ರಾಯಿ ಅವರು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಎಂ. ಎಸ್. ಕೋಟ್ಯಾನ್ ವಂದಿಸಿದರು.
ಸಮಾರೋಪದಲ್ಲಿ ಪ್ರತಿಯೊಂದು ವಿಭಾಗದ ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದ ಗೂಡುದೀಪಗಳಿಗೆ “ಚಿನ್ನದ ಪದಕ” ವನ್ನು , ಹಾಗೂ ತೃತೀಯ ಸ್ಥಾನ ಪಡೆದ ಮೂವರು ವಿಜೇತರಿಗೆ ಬೆಳ್ಳಿಯ ಪದಕ ಮತ್ತು 50 ಪ್ರೋತ್ಸಾಹಕ ಬಹುಮಾನ ಹಾಗೂ ವಿಶೇಷ ಪ್ರೋತ್ಸಾಹಕ ಬಹುಮಾನಗಳನ್ನು ವಿತರಿಸಲಾಯಿತು.

Share News
Exit mobile version