• Home  
  • SDPI ಹೆಸರಿನಲ್ಲಿ ನಿಷೇಧಿತ PFIನ ಹಿಂಬಾಗಿಲ ರಾಜಕೀಯ ಪ್ರವೇಶ: ಸಂಸತ್ತಿನಲ್ಲಿ ಕ್ಯಾ. ಚೌಟ
- HOME - NATIONAL

SDPI ಹೆಸರಿನಲ್ಲಿ ನಿಷೇಧಿತ PFIನ ಹಿಂಬಾಗಿಲ ರಾಜಕೀಯ ಪ್ರವೇಶ: ಸಂಸತ್ತಿನಲ್ಲಿ ಕ್ಯಾ. ಚೌಟ

ನವದೆಹಲಿ: ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ(PFI) ಸಂಘಟನೆಯು ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ(SDPI) ಕಾರ್ಯಕರ್ತರ ಸೋಗಿನಲ್ಲಿ ನಮ್ಮ ಚುನಾವಣಾ ವ್ಯವಸ್ಥೆಯೊಳಗೆ ಮರುಪ್ರವೇಶಕ್ಕೆ ಪ್ರಯತ್ನಿಸುತ್ತಿರುವ ಅತ್ಯಂತ ಗಂಭೀರ ವಿಚಾರವನ್ನು ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ಇಂದು ಲೋಕಸಭೆಯಲ್ಲಿ ಶೂನ್ಯವೇಳೆಯಲ್ಲಿ ಪ್ರಸ್ತಾಪಿಸಿ ಕಳವಳ ವ್ಯಕ್ತಪಡಿಸಿದ್ದಾರೆ.


ಜಾರಿ ನಿರ್ದೇಶನಾಲಯದ(ಇಡಿ) 2025ರ ನವೆಂಬರ್ 8ರ ಪತ್ರಿಕಾ ಪ್ರಕಟಣೆಯನ್ನು ಉಲ್ಲೇಖಿಸಿ ಸದನದಲ್ಲಿ ಮಾತನಾಡಿದ ಕ್ಯಾ. ಚೌಟ ಅವರು, ಎಸ್‌ಡಿಪಿಐಯು ನಿಷೇಧಿತ ಪಿಎಫ್‌ಐನ ರಾಜಕೀಯ ಮುಖವಾಣಿಯಾಗಿ ಕೆಲಸ ಮಾಡುತ್ತಿದೆ. ಅಷ್ಟೇಅಲ್ಲ, ಈ ಪಿಎಫ್‌ಐಯು ಎಸ್‌ಡಿಪಿಐನ ರಾಜಕೀಯ ಕಾರ್ಯ ಚಟುವಟಿಕೆಗಳನ್ನು ನಿಯಂತ್ರಿಸುವ ಜತೆಗೆ ಅದಕ್ಕೆ ಫಂಡಿಂಗ್ ಮಾಡುವ ಅತ್ಯಂತ ಗಂಭೀರ ವಿಚಾರವನ್ನೂ ಇಡಿ ಉಲ್ಲೇಖಿಸಿದೆ. ಹೀಗಿರುವಾಗ, ಪಿಎಫ್‌ಐ ಒಂದು ನಿಷೇಧಿತ ಸಂಘಟನೆಯಾಗಿರುವ ಕಾರಣ ಚುನಾವಣೆಯ ಮೇಲೆ ಪ್ರಭಾವ ಬೀರಲು ಅದು ಬಳಸುವ ಯಾವುದೇ ಗುಪ್ತ ಮಾರ್ಗವು ರಾಷ್ಟ್ರದ ಏಕತೆ ಮತ್ತು ಸಮಗ್ರತೆಗೆ ಧಕ್ಕೆ ತರುತ್ತದೆ ಎಂದು ಹೇಳಿದ್ದಾರೆ.

ಇದೇ ವೇಳೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದ ಇತ್ತೀಚಿನ ಬೆಳವಣಿಗೆಗಳ ಬಗ್ಗೆ ಸದನದ ಗಮನಸೆಳೆದ ಕ್ಯಾ. ಚೌಟ ಅವರು, ನಮ್ಮ ಕರಾವಳಿ ಕರ್ನಾಟಕದ ಪ್ರದೇಶಗಳು ನಿಷೇಧಿತ ಪಿಎಫ್‌ಐ ಸಂಘಟನೆಯ ದುಷ್ಕೃತ್ಯಗಳಿಂದ ಸಾಕಷ್ಟು ತೊಂದರೆ ಅನುಭವಿಸಿದೆ. ಇತ್ತೀಚೆಗೆ ದಕ್ಷಿಣ ಕನ್ನಡದಲ್ಲಿ ಹಿಂದೂ ಕಾರ್ಯಕರ್ತ ಸುಹಾಸ್‌ ಶೆಟ್ಟಿಯ ಹತ್ಯೆ ನಡೆದಿದ್ದು, ಕೇಂದ್ರ ಗೃಹ ಸಚಿವರ ಸಕಾಲಿಕ ಮಧ್ಯಪ್ರವೇಶದಿಂದಾಗಿ ಪ್ರಸ್ತುತ ಈ ಕೊಲೆ ಪ್ರಕರಣದ ತನಿಖೆಯನ್ನು ಎನ್‌ಐಎ ನಡೆಸುತ್ತಿದೆ. ನಮ್ಮ ಪ್ರದೇಶವು ಇಂಥಹ ದುಷ್ಟ ಶಕ್ತಿಗಳ ಅಕ್ರಮಣಕ್ಕೆ ನಿರಂತರ ತುತ್ತಾಗುವ ಅಪಾಯವಿದೆ ಎಂಬುದಕ್ಕೆ ಈ ಕೊಲೆ ಪ್ರಕರಣ ಒಂದು ನಿದರ್ಶನ ಎಂದು ಕ್ಯಾ. ಚೌಟ ಆತಂಕ ವ್ಯಕ್ತಪಡಿಸಿದ್ದಾರೆ.

ಕರ್ನಾಟಕದಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆಗಳು ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ನಿಷೇಧಿತ ಪಿಎಫ್‌ಐ ಹಾಗೂ ಎಸ್‌ಡಿಪಿಐ ನಡುವಿನ ರಾಜಕೀಯ ಲಿಂಕ್‌ನ ಬಗ್ಗೆ ತುರ್ತು ಗಮನಹರಿಸುವ ಅಗತ್ಯವಿದೆ. ಏಕೆಂದರೆ ಇತ್ತೀಚಿನ ವರ್ಷಗಳಲ್ಲಿ ದಕ್ಷಿಣ ಕನ್ನಡದ ಸ್ಥಳೀಯ ಸಂಸ್ಥೆಗಳಲ್ಲಿ ಎಸ್‌ಡಿಪಿಐ ಹಲವು ಸ್ಥಾನಗಳನ್ನು ಪಡೆದುಕೊಂಡಿದೆ. ಅಲ್ಲದೆ ಕಳೆದ ವರ್ಷ ನಡೆದ ಬಂಟ್ವಾಳ ಪುರಸಭೆಯ ಅಧ್ಯಕ್ಷರ ಚುನಾವಣೆಯಲ್ಲಿಯೂ SDPI ಪ್ರಮುಖ ಸ್ಥಾನಗಳಲ್ಲಿ ವಿರೋಧ ಪಕ್ಷದ ಅಭ್ಯರ್ಥಿಗಳನ್ನು ಬೆಂಬಲಿಸಿತ್ತು. ಮತ್ತೊಂದು ಗಂಭೀರ ವಿಚಾರವೆಂದರೆ ಎಸ್‌ಡಿಪಿಐ ನಡುವಿನ ಅಲಿಖಿತ ಒಳ ಒಪ್ಪಂದದಂತೆ ಆಡಳಿತಾರೂಢ ಕಾಂಗ್ರೆಸ್ ಪಕ್ಷವು ಇಂತಹ ಶಕ್ತಿಗಳನ್ನು ನಿರಂತರವಾಗಿ ಪೋಷಿಸುತ್ತಿದೆ. ಕರ್ನಾಟಕದಲ್ಲಿರುವ ನಮ್ಮ ಪಾಲಿಗೆ, ಇದು ಅತ್ಯಂತ ಕಾಳಜಿಯ ಹಾಗೂ ಕಳವಳಕಾರಿ ವಿಚಾರವಾಗಿದ್ದು,SDPI ಹಾಗೂ PFI ಜೊತೆ ನಂಟು ಇಟ್ಟುಕೊಂಡಿರುವ ಬಗ್ಗೆ ಕಾಂಗ್ರೆಸ್ ಗೆ ಯಾವ ಪಶ್ಚಾತಾಪವೂ ಇಲ್ಲದಂತಿದೆ ಎಂದು ಕ್ಯಾ. ಚೌಟ ಆರೋಪಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ, ನಮ್ಮ ಸರ್ಕಾರವು ರಾಷ್ಟ್ರ ಮೊದಲು ಮತ್ತು ಭಯೋತ್ಪಾದನೆಯ ಬಗ್ಗೆ ಶೂನ್ಯ ಸಹಿಷ್ಣುತೆಯ ನೀತಿಯನ್ನು ನಿರಂತರವಾಗಿ ಕಾಯ್ದುಕೊಂಡಿದೆ. ಹೀಗಿರುವಾಗ ಕೇಂದ್ರ ಗೃಹ ಸಚಿವರು ಇಡಿ ಉಲ್ಲೇಖಿಸಿರುವ ಅಂಶಗಳನ್ನು ಗಂಭೀರವಾಗಿ ಪರಿಗಣಿಸಿ ನಿಷೇಧಿತ ಸಂಘಟನೆಗಳು ಹೊಸ ರೂಪದಲ್ಲಿ ತನ್ನ ಚಟುವಟಿಕೆ ಮುಂದುವರಿಸಲು ಅಥವಾ ರಾಜಕೀಯ ಪಕ್ಷಗಳನ್ನು ಮುಂದಿಟ್ಟು ಚುನಾವಣಾ ನ್ಯಾಯಸಮ್ಮತತೆ ಪಡೆಯುವ ಯತ್ನವನ್ನು ನಿಯಂತ್ರಿಸುವುದಕ್ಕೆ ಅಗತ್ಯ ಕ್ರಮ ಕೈಗೊಳ್ಳಬೇಕು. ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯು ಎಲ್ಲರಿಗೂ ಚುನಾವಣೆಯಲ್ಲಿ ಸ್ಪರ್ಧಿಸುವ ಹಕ್ಕು ನೀಡಿದೆ. ಆದರೆ, ದೇಶದ ಭದ್ರತೆಗೆ ಮೊದಲ ಆದ್ಯತೆ ನೀಡಬೇಕಿದೆ ಎಂದು ಕ್ಯಾ. ಚೌಟ ಅವರು ಸದನದಲ್ಲಿ ಗೃಹ ಸಚಿವರನ್ನು ಒತ್ತಾಯಿಸಿದ್ದಾರೆ.

Share News

About Us

Lorem ipsum dol consectetur adipiscing neque any adipiscing the ni consectetur the a any adipiscing.

Email Us: [email protected]

Contact: +5-784-8894-678