ಮಂಗಳೂರು. ಸೆ.3 : ಹೊಸ ಆಹಾರ ಸಂಸ್ಕರಣೆ ಉದ್ಯಮ ಅಥವಾ ಕಿರು ಉದ್ಯಮಗಳನ್ನು ಸ್ಥಾಪಿಸಲು ಮುಂದೆ ಬರುವವರಿಗೆ ಸಾಲ ಮಂಜೂರಾತಿಯನ್ನು ಬ್ಯಾಂಕುಗಳು ತ್ವರಿತವಾಗಿ ಮಾಡಲು ಲೋಕಸಭಾ ಸದಸ್ಯ ಕ್ಯಾಪ್ಟನ್ ಬ್ರಿಜೇಶ್ ಚೌಟ ಸೂಚಿಸಿದ್ದಾರೆ.
ಅವರು ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್, ಕೃಷಿ ಇಲಾಖೆ, ಮತ್ತು ಕೆಪೆಕ್ ಸಂಸ್ಥೆ, ಬೆಂಗಳೂರು ಇವರ ಸಹಯೋಗದೊಂದಿಗೆ ಬುಧವಾರ ಜಿಲ್ಲಾ ಪಂಚಾಯತ್ ನೇತ್ರಾವತಿ ಸಭಾಂಗಣದಲ್ಲಿ ನಡೆದ ಪ್ರಧಾನ ಮಂತ್ರಿ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮ ಬದ್ಧಗೊಳಿಸುವಿಕೆ (Pಒಈಒಇ) ಯೋಜನೆಯಡಿ ಒಂದು ದಿನದ ‘ಜಿಲ್ಲಾ ಮಟ್ಟದ ಅರಿವು ಮೂಡಿಸುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಪ್ರಧಾನಮಂತ್ರಿಗಳ ಕಿರು ಆಹಾರ ಸಂಸ್ಕರಣ ಉದ್ದಿಮೆಗಳ ನಿಯಮ ಬದ್ಧಗೊಳಿಸುವಿಕೆ ಯೋಜನೆಯು ಆತ್ಮನಿರ್ಭರ ಭಾರತ ಅಭಿಯಾನದ ಅಡಿಯಲ್ಲಿ ಮಹತ್ವಾಕಾಂಕ್ಷಿ ಯೋಜನೆಯಾಗಿದೆ. ದೇಶಾದ್ಯಂತ ಈ ಯೋಜನೆಯಡಿ 2 ಲಕ್ಷ ಸಣ್ಣ ಉದ್ಯಮಶೀಲರನ್ನು ಹಣಕಾಸು ಬೆಂಬಲ ನೀಡುವ ಉದ್ದೇಶ ಇಟ್ಟುಕೊಳ್ಳಲಾಗಿದೆ ಎಂದು ಸಂಸದರು ತಿಳಿಸಿದರು.
ಕೃಷಿ ಜಂಟಿ ನಿರ್ದೇಶಕ ಹೊನ್ನಪ್ಪ ಗೌಡ ಮಾತನಾಡಿ ಈ ಯೋಜನೆಯಡಿ ಗರಿಷ್ಠ 15 ಲಕ್ಷದ ಸಬ್ಸಿಡಿ ದೊರಕಲಿದೆ. ಕೇಂದ್ರ ಸರಕಾರದ 35% ಹಾಗೂ ರಾಜ್ಯ ಸರ್ಕಾರದ 15 % ಪಾಲು ಇದೆ ಎಂದು ತಿಳಿಸಿದರು.
ಸಮಾರಂಭದಲ್ಲಿ ಜಂಟಿ ಕೈಗಾರಿಕಾ ನಿರ್ದೇಶಕ ಗೋಕುಲದಾಸ್, ಕೆಪೆಕ್ ಅಧಿಕಾರಿ ಅರವಿಂದ, ಲೀಡ್ ಬ್ಯಾಂಕ್ ಜಿಲ್ಲಾ ವ್ಯವಸ್ಥಾಪಕಿ ಕವಿತಾ ಶೆಟ್ಟಿ, ಮತ್ತಿತರರು ಉಪಸ್ಥಿತರಿದ್ದರು. ಕೃಷಿ ಉಪನಿರ್ದೇಶಕರಾದ ಕುಮುದಾ ಸ್ವಾಗತಿಸಿ, ಉಪನಿರ್ದೇಶಕ ಶಿವಶಂಕರ್ ದಾನೇಗೊಂಡಲ್ ನಿರೂಪಿಸಿದರು.