• Home  
  • *ಸುರತ್ಕಲ್‌-ನಂತೂರು-ಬಿಸಿ ರೋಡ್‌ ಹೆದ್ದಾರಿ ವ್ಯಾಪ್ತಿ ಎನ್‌ಎಚ್‌ಎಐಗೆ ಹಸ್ತಾಂತರಿಸಿದ ಕೇಂದ್ರ ಸರ್ಕಾರ, ಕ್ಯಾ. ಬ್ರಿಜೇಶ್‌ ಚೌಟ ಅವರ ನಿರಂತರ ಪ್ರಯತ್ನಕ್ಕೆ ಬಹುದೊಡ್ಡ ಯಶಸ್ಸು*
- DAKSHINA KANNADA - HOME

*ಸುರತ್ಕಲ್‌-ನಂತೂರು-ಬಿಸಿ ರೋಡ್‌ ಹೆದ್ದಾರಿ ವ್ಯಾಪ್ತಿ ಎನ್‌ಎಚ್‌ಎಐಗೆ ಹಸ್ತಾಂತರಿಸಿದ ಕೇಂದ್ರ ಸರ್ಕಾರ, ಕ್ಯಾ. ಬ್ರಿಜೇಶ್‌ ಚೌಟ ಅವರ ನಿರಂತರ ಪ್ರಯತ್ನಕ್ಕೆ ಬಹುದೊಡ್ಡ ಯಶಸ್ಸು*

ಮಂಗಳೂರು: ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರ ನಿರಂತರ ಪ್ರಯತ್ನದ ಫಲವಾಗಿ ನವ ಮಂಗಳೂರು ಬಂದರು ವ್ಯಾಪ್ತಿಗೆ ಸೇರಿದ ಸುರತ್ಕಲ್-ನಂತೂರು-ಬಿಸಿ ರೋಡ್ ಬಂದರು ಸಂಪರ್ಕ ರಸ್ತೆಯ ನಿರ್ವಹಣೆಯನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ(NHAI)ಕ್ಕೆ ಹಸ್ತಾಂತರಿಸಲು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ (MoRTH) ಅನುಮೋದನೆ ನೀಡಿದೆ. ಆ ಮೂಲಕ ಹಲವು ವರ್ಷಗಳಿಂದ ದಕ್ಷಿಣ ಕನ್ನಡದ ಸಂಪರ್ಕ ಜಾಲ ಸುಧಾರಿಸುವಲ್ಲಿ ಪ್ರಮುಖ ಬೇಡಿಕೆಯಾಗಿದ್ದ ಎನ್‌ಎಂಪಿಟಿ ವ್ಯಾಪ್ತಿಯ ಈ ಹೆದ್ದಾರಿ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವಲ್ಲಿ ಕ್ಯಾ. ಚೌಟ ಅವರ ಪರಿಶ್ರಮ ದೊಡ್ಡ ಫಲ ನೀಡಿದೆ.


ಹೆದ್ದಾರಿ ಪ್ರಾಧಿಕಾರದ ಈ ಮಹತ್ವದ ನಿರ್ಧಾರದಿಂದಾಗಿ ಮಂಗಳೂರಿನ ಅತ್ಯಂತ ನಿರ್ಣಾಯಕ ರಸ್ತೆ ಕಾರಿಡಾರ್‌ಗಳಲ್ಲಿ ಒಂದಾದ ಸುರತ್ಕಲ್‌-ನಂತೂರು-ಬಿಸಿ.ರೋಡ್‌ ಹೆದ್ದಾರಿಯ ಸಮರ್ಪಕ ನಿರ್ವಹಣೆ ಮತ್ತು ಸುಧಾರಣೆಗೆ ಕಾಯಕಲ್ಪ ದೊರೆಯುವ ಮೂಲಕ ಈ ಗಂಭೀರ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗಲಿದೆ.

ಮಂಗಳೂರಿನ ಈ ಬಂದರು ಸಂಪರ್ಕ ಹೆದ್ದಾರಿಯು ತೀರಾ ಹದಗೆಟ್ಟಿದ್ದು ಸರಕು ವಾಹನ ಹಾಗೂ ದೈನಂದಿನ ವಾಹನಗಳ ಓಡಾಟಕ್ಕೆ ಸಾಕಷ್ಟು ತೊಂದರೆ ಎದುರಾಗುತ್ತಿತ್ತು. ಈ ಹಿನ್ನಲೆಯಲ್ಲಿ ಸಂಸದ ಕ್ಯಾ. ಚೌಟ ಅವರು ಕಳೆದೊಂದು ವರ್ಷದಿಂದ ಸುರತ್ಕಲ್‌-ಮಂಗಳೂರು-ಬಿಸಿರೋಡ್‌ವರೆಗಿನ ರಾಷ್ಟ್ರೀಯ ಹೆದ್ದಾರಿಯ ನಿರ್ವಹಣೆಯನ್ನು ಎನ್‌ಎಚ್‌ಎಐ ವ್ಯಾಪ್ತಿಗೆ ಹಸ್ತಾಂತರಿಸುವುದಕ್ಕೆ ಹೆಚ್ಚಿನ ಮುತುವರ್ಜಿ ವಹಿಸಿದ್ದರು. ಸುರತ್ಕಲ್- ನಂತೂರು-ಬಿಸಿ ರೋಡ್ ರಸ್ತೆಯು ಪ್ರಸ್ತುತ ವಿಶೇಷ ಉದ್ದೇಶದ ಘಟವಾಗಿ ರಚಿಸಲಾದ ರಾಷ್ಟ್ರೀಯ ಹೆದ್ದಾರಿ ಸರಕು ಸಾಗಣೆ ನಿರ್ವಹಣೆ ಲಿಮಿಟೆಡ್(ಎನ್‌ಎಚ್‌ಎಲ್‌ಎಂಎಲ್‌) ವ್ಯಾಪ್ತಿಗೆ ಬರುತ್ತದೆ. ಈ ರಸ್ತೆ ನಿರ್ವಹಣೆಗೆ ನಿರ್ದಿಷ್ಟ ಎಜೆನ್ಸಿ ಇಲ್ಲದಿರುವುದು, ನಿಧಿಯ ಕೊರತೆ ಹಾಗೂ ಕಾಲಕಾಲಕ್ಕೆ ಸೂಕ್ತ ರೀತಿಯಲ್ಲಿ ನಿರ್ವಹಣೆ ಮಾಡದಿರುವುದು ಈ ಹೆದ್ದಾರಿ ದುಸ್ಥಿತಿಗೆ ಪ್ರಮುಖ ಕಾರಣವಾಗಿತ್ತು. ಈ ವಿಚಾರವಾಗಿ ಗಂಭೀರವಾಗಿ ಪರಿಗಣಿಸಿದ್ದ ಕ್ಯಾ. ಚೌಟ ಅವರು ಇದಕ್ಕೆ ಶಾಶ್ವತ ಪರಿಹಾರ ಕಲ್ಪಿಸುವುದಕ್ಕೆ ಮುಂದಾಗಿದ್ದರು.

ಅದರಂತೆ 2024ರ ಜುಲೈ 23ರಂದು ಹೆದ್ದಾರಿ ಸಚಿವಾಲಯದ ಜಂಟಿ ಕಾರ್ಯದರ್ಶಿ ವಿನಯ್ ಕುಮಾರ್ ಅವರನ್ನು ಭೇಟಿ ಮಾಡಿ, ಸುರತ್ಕಲ್ -ಬಿ.ಸಿ. ರೋಡ್ ರಸ್ತೆಯಲ್ಲಿ ಭಾರೀ ಸರಕು ಸಾಗಾಟ, ಸರ್ವಿಸ್ ರಸ್ತೆಯ ಕೊರತೆ, ಅಪಘಾತ ವಲಯಗಳು, ಅಸಮರ್ಪಕವಾಗಿರುವ ಒಳಚರಂಡಿ ಇತ್ಯಾದಿ ಸಮಸ್ಯೆಗಳ ಬಗ್ಗೆ ಅವರ ಗಮನಕ್ಕೆ ತಂದು ಮನವಿ ಕೂಡ ಸಲ್ಲಿಸಿದ್ದರು. ಈ ಆರಂಭಿಕ ಮಧ್ಯಸ್ಥಿಕೆಯು ಈ ಮಾರ್ಗದ ಸುಧಾರಣೆಗಾಗಿ ₹28.58 ಕೋಟಿ ಅನುದಾನ ಮಂಜೂರು ಮಾಡಿಸುವಲ್ಲಿ ಯಶಸ್ವಿಯಾಗಿತ್ತು.

ಈ ನಡುವೆ ಕ್ಯಾ. ಚೌಟ ಅವರು ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ ಅವರನ್ನು ಕೂಡ ಹಲವು ಸಂದರ್ಭದಲ್ಲಿ ಭೇಟಿ ಮಾಡಿ ಬಂದರು ವ್ಯಾಪ್ತಿಯ ಈ ಹೆದ್ದಾರಿಯನ್ನು ಎನ್‌ಎಚ್‌ಎಲ್‌ಎಂಎಲ್‌ನಿಂದ ಎನ್‌ಎಚ್‌ಎಐಗೆ ಹಸ್ತಾಂತರಿಸುವುದಕ್ಕೆ ಮನವಿ ಮಾಡಿದ್ದರು. ಕಳೆದ ಜೂ.26ರಂದು ಸಚಿವರಿಗೆ ಈ ಬಗ್ಗೆ ಮನವಿ ಪತ್ರ ಸಲ್ಲಿಸಿದ್ದರು. ಇದಾದ ಬಳಿಕ ಕಳೆದ ಮುಂಗಾರು ಅಧಿವೇಶನದಲ್ಲಿ ಮತ್ತೊಮ್ಮೆ ಸಚಿವ ನಿತಿನ್‌ ಗಡ್ಕರಿಯವರನ್ನು ಖುದ್ದು ಭೇಟಿಯಾಗಿ, ಈ ಹೆದ್ದಾರಿ ವ್ಯಾಪ್ತಿಯನ್ನು ಹೆದ್ದಾರಿ ಪ್ರಾಧಿಕಾರದ ವ್ಯಾಪ್ತಿಗೆ ನೀಡುವುದರಿಂದ ಮಂಗಳೂರು ಬಂದರು ಕಾರ್ಯ-ಚಟುವಟಿಕೆಗಳಿಗೆ ಹೇಗೆ ಅನುಕೂಲವಾಗಲಿದೆ; ಆ ಮೂಲಕ ಕರಾವಳಿ ಭಾಗದ ಸರಕು ಸಾಗಣೆ ಜಾಲದಲ್ಲಿ ಗಮನಾರ್ಹ ಸುಧಾರಣೆ ತರಬಹುದೆಂದು ಮನವರಿಕೆ ಮಾಡಿದ್ದರು.

ಹೀಗೆ, ಸಂಸದ ಕ್ಯಾ. ಚೌಟ ಅವರ ಸತತ ಪ್ರಯತ್ನದ ಫಲವಾಗಿ ಹೆದ್ದಾರಿ ಸಚಿವಾಲಯವು ಸುರತ್ಕಲ್‌ನಿಂದ ಬಿಸಿ ರೋಡ್‌ವರೆಗಿನ ಬಂದರು ಸಂಪರ್ಕ ರಸ್ತೆಯನ್ನು ಹೆದ್ದಾರಿ ಪ್ರಾಧಿಕಾರದ ವ್ಯಾಪ್ತಿಗೆ ಹಸ್ತಾಂತರಿಸಿ ಆದೇಶ ಮಾಡಿದೆ. ಈ ಬಗ್ಗೆ ಹೆದ್ದಾರಿ ಪ್ರಾಧಿಕಾರಕ್ಕೆ ನಿರ್ದೇಶನ ನೀಡಿರುವ ಸಚಿವಾಲಯವು, ಆದಷ್ಟು ಬೇಗ ಸುರತ್ಕಲ್‌-ಬಿಸಿರೋಡ್‌ ಹೆದ್ದಾರಿ ಸುಧಾರಣೆ ಹಾಗೂ ರಸ್ತೆ ಸುರಕ್ಷತೆ ಸಂಬಂಧ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ವಿಸೃತ್ತ ಯೋಜನಾ ವರದಿ(ಡಿಪಿಆರ್‌) ತಯಾರಿಸುವಂತೆ ಸೂಚಿಸಿದೆ. ಅಲ್ಲದೆ, ಕಳೆದ ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಈ ಕಾರಿಡಾರ್‌ನಲ್ಲಿ ವಾಹನಗಳ ಸುಗಮ ಸಂಚಾರಕ್ಕೆ ಎದುರಾಗಿರುವ ಅಡೆ-ತಡೆ, ಸವಾಲು ಹಾಗೂ ಬಲವರ್ಧನೆಗೆ ಕ್ರಮ ಕೈಗೊಳ್ಳುವ ಮೂಲಕ ಶಾಶ್ವತ ಪರಿಹಾರ ಒದಗಿಸುವಂತೆ ಸೂಚಿಸಿದೆ.

ಹೆದ್ದಾರಿ ಸಚಿವಾಲಯದ ಈ ಮಹತ್ವದ ತೀರ್ಮಾನದ ಬಗ್ಗೆ ಪ್ರತಿಕ್ರಿಯಿಸಿರುವ ಸಂಸದ ಕ್ಯಾ. ಚೌಟ ಅವರು, ಸುರತ್ಕಲ್‌-ನಂತೂರು-ಬಿಸಿ ರೋಡ್‌ ಹೆದ್ದಾರಿಯನ್ನು ಎನ್‌ಎಚ್‌ಎಲ್‌ಎಂಎಲ್‌ನಿಂದ ಎನ್‌ಎಚ್‌ಎಐಗೆ ಹಸ್ತಾಂತರಿಸಿ ಆದೇಶ ಹೊರಡಿಸಿರುವುದಕ್ಕೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಹಾಗೂ ಹೆದ್ದಾರಿ ಸಚಿವ ನಿತಿನ್‌ ಗಡ್ಕರ್‌ ಹಾಗೂ ಎಲ್ಲ ಅಧಿಕಾರಿ ವರ್ಗದವರಿಗೆ ಕೃತಜ್ಞತೆ ಸಲ್ಲಿಸಲು ಬಯಸುತ್ತೇನೆ. ದಕ್ಷಿಣ ಕನ್ನಡದಲ್ಲಿ ಸರಕು ಸುಧಾರಣೆ ಹಾಗೂ ಜಿಲ್ಲೆಯ ಆರ್ಥಿಕ ಚಟುವಟಿಕೆ ಬಲವರ್ಧನೆಗೆ ಇದೊಂದು ಐತಿಹಾಸಿಕ ನಿರ್ಧಾರ. ಈ ಹೆದ್ದಾರಿಯನ್ನು ಹೆದ್ದಾರಿ ಪ್ರಾಧಿಕಾರದ ವ್ಯಾಪ್ತಿಗೆ ಹಸ್ತಾಂತರಿಸಬೇಕೆಂಬುದು ಹಲವು ವರ್ಷಗಳ ಬಹಳ ದೊಡ್ಡ ಬೇಡಿಕೆಯಾಗಿತ್ತು. ಆದರೆ, ಸಂಸದನಾದ ಬಳಿಕ ಈ ಬಗ್ಗೆ ಹೆಚ್ಚಿನ ಮುತುವರ್ಜಿ ವಹಿಸಿ ಆದ್ಯತೆ ಮೇರೆಗೆ ಪ್ರಾಮಾಣಿಕ ಪ್ರಯತ್ನ ನಡೆಸುತ್ತಿದ್ದೆ. ಆದರೆ, ನಮ್ಮ ಈ ನಿರಂತರ ಪರಿಶ್ರಮಕ್ಕೆ ಈಗ ಬಹುದೊಡ್ಡ ಯಶಸ್ಸು ಸಿಕ್ಕಿದೆ. ಈ ಹೆದ್ದಾರಿಯನ್ನು ಹೆದ್ದಾರಿ ಪ್ರಾಧಿಕಾರಕ್ಕೆ ಒಪ್ಪಿಸುವುದರಿಂದ ಈ ರಸ್ತೆಯನ್ನು ಬಳಸುವ ದೈನಂದಿನ ಪ್ರಯಾಣಿಕರು, ಉದ್ದಿಮೆದಾರರಿಗೆ ಹೆಚ್ಚಿನ ಅನುಕೂವಾಗುವ ಜತೆಗೆ ಎನ್‌ಎಂಪಿಟಿ ಬಂದರಿನ ಪರಿಸರ ವ್ಯವಸ್ಥೆ ಮತ್ತಷ್ಟು ಸುಧಾರಿಸುವುದಕ್ಕೆ ಸಹಕಾರಿಯಾಗಲಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

Share News

About Us

Lorem ipsum dol consectetur adipiscing neque any adipiscing the ni consectetur the a any adipiscing.

Email Us: [email protected]

Contact: +5-784-8894-678