ಮಂಗಳೂರಿನ ಪ್ರಸಿದ್ದ ಸರ್ಕಾರಿ ಹೆರಿಗೆ ಆಸ್ಪತ್ಪೆಯಲ್ಲಿ ಆರಂಭಗೊಂಡ ಹ್ಯೂಮನ್ ಮಿಲ್ಕ್ ಬ್ಯಾಂಕ್ ಅದೆಷ್ಟೋ ನವಜಾತ ಶಿಶುಗಳ ತಾಯಿ ಎದೆ ಹಾಲಿನಿಂದ ವಂಚಿತರಾಗಿದ್ದ 471 ನವಜಾತ ಶಿಶುಗಳಿಗೆ ಜೀವ ಉಳಿಸಿದ . ಸಂಜೀವಿನಿಯಾದ ಲೇಡಿಗೋಷನ್ ಆಸ್ಪತ್ರೆಯ ಹ್ಯೂಮನ್ ಮಿಲ್ಕ್ ಬ್ಯಾಂಕ್‌ನ ಕ್ರಾಂತಿ.!

ಹೌದು..ಸರ್ಕಾರಿ ಹೆರಿಗೆ ಆಸ್ಪತ್ರೆಗಳು ಅಂದರೆ ಸಾಕು ಮೂಗು ಮುರಿಯೋ ಈ ಕಾಲದಲ್ಲಿ ಈ ಮಾತಿಗೆ ವಿರುದ್ಧವಾಗಿ ನಿಂತಿದ್ದೇ ಮಂಗಳೂರಿನ ಸರ್ಕಾರಿ ಲೇಡಿಗೋಶನ್ ಆಸ್ಪತ್ರೆ. ಪ್ರತಿಷ್ಠಿತ ಖಾಸಗಿ ಆಸ್ಪತ್ರೆಗಳೇ ಕೈ ಚೆಲ್ಲಿದ ಹೆರಿಗೆ ಪ್ರಕರಣಗಳನ್ನು ಯಶಸ್ವಿಯಾಗಿಸಿದ ಕೀರ್ತಿ ಈ ಲೇಡಿಗೋಶನ್ ಆಸ್ಪತ್ರೆಗೆ ಸಲ್ಲುತ್ತೆ. ಅದೆಷ್ಟೋ ಕ್ಲಿಷ್ಠಕರ ಹೆರಿಗೆಗಳನ್ನು ಮಾಡಿಸಿ ಸೈ ಎನಿಸಿಕೊಂಡಿದ್ದ ಲೇಡಿಗೋಶನ್ ಆಸ್ಪತ್ರೆಯು 2022ರ ಮಾರ್ಚ್‌ನಲ್ಲಿ ತಾಯಿಯ ಎದೆ ಹಾಲಿನಿಂದ ವಂಚಿತರಾದ ಮಕ್ಕಳ ಪೋಷಣೆಗಾಗಿ ಹೊಸ ಪ್ಲಾನ್ ರೂಪಿಸಿತ್ತು. ಕರಾವಳಿಯಲ್ಲೇ ಮೊದಲ ಪ್ರಯತ್ನ ಎಂಬಂತೆ ಆರಂಭಗೊಂಡಿದ್ದ ಹ್ಯೂಮನ್ ಮಿಲ್ಕ್ ಬ್ಯಾಂಕ್‌ಗೆ ಇದೀಗ ಮೂರು ವರ್ಷ ಕಳೆದಿದ್ದು ಈ ಮೂರು ವರ್ಷದಲ್ಲಿ 471 ನವಜಾತ ಶಿಶುಗಳಿಗೆ ಈ ತಾಯಿ ಹಾಲಿನ ಬ್ಯಾಂಕ್ ಜೀವ ಸಂಜೀವಿನಿಯಾಗಿದೆ.
ಲೇಡಿಗೋಶನ್ ಸರ್ಕಾರಿ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕರಾದ ಡಾ.ದುರ್ಗಪ್ರಸಾದ್, ಮಾತನಾಡಿ ಎದೆ ಹಾಲನ್ನು ದಾನದ ರೂಪದಲ್ಲಿ ಸ್ವೀಕರಿಸುವುದು ಲೇಡಿಗೋಶನ್ ಆಸ್ಪತ್ರೆಗೆ ಸುಲಭದ ಕೆಲಸವಾಗಿರಲಿಲ್ಲ. ಮೊದ ಮೊದಲು ಇದಕ್ಕೆ ಯಾವ ಮಹಿಳೆಯೂ ಒಪ್ಪಿಗೆಯೇ ನೀಡಿರಲಿಲ್ಲವಂತೆ. ಆದರೆ ಕ್ರಮೇಣ ಬಾಣಂತಿಯರ ಮನವೊಲಿಕೆ ಕಾರ್ಯದಲ್ಲಿ ಯಶಸ್ವಿಯಾದ ಬಳಿಕ ದಾನಿಗಳ ಸಂಖ್ಯೆ ಹೆಚ್ಚಾಗುತ್ತಿದೆ.
ಇದೀಗ ಬಾಣಂತಿಯರೇ ಮಾನವೀಯ ನೆಲೆಯಲ್ಲಿ ಅವರಾಗೇ ಮುಂದೆ ಬಂದು ಎದೆ ಹಾಲು ದಾನ ಮಾಡುತ್ತಿದ್ದಾರೆ. ಅದರಲ್ಲೂ ಲೇಡಿಗೋಷಣ್ ಆಸ್ಪತ್ರೆಯಲ್ಲಿ ಹೆರಿಗೆಯಾದ ತಾಯಂದಿರೇ ಹೆಚ್ಚು ಎದೆ ಹಾಲು ದಾನ ನೀಡುತ್ತಿದ್ದಾರೆ. 2022ರ ಮಾರ್ಚ್ ತಿಂಗಳಿನಿಂದ ಇಲ್ಲಿಯವರೆಗೆ 4511ಕ್ಕೂ ಹೆಚ್ಚು ಬಾಣಂತಿಯರು ಹ್ಯೂಮನ್ ಮಿಲ್ಕ್ ಬ್ಯಾಂಕ್‌ಗೆ ತಮ್ಮ ಎದೆಹಾಲನ್ನು ದಾನ ಮಾಡಿದ್ದಾರೆ. ಒಟ್ಟು 620 ಲೀಟರ್ ಎದೆಹಾಲು ಸಂಗ್ರಹಿಸಲಾಗಿದ್ದು ಈ ಹಾಲನ್ನು ಅವಧಿ ಪೂರ್ವವಾಗಿ ಜನಿಸಿ ಐಸಿಯುನಲ್ಲಿದ್ದ 471ಕ್ಕೂ ಅಧಿಕ ಕಂದಮ್ಮಗಳಿಗೆ ನೀಡಲಾಗಿದೆ. ಅದರಲ್ಲೂ 718 ಗ್ರಾಂ ತೂಕ ಹೊಂದಿದ್ದ ನವಜಾತ ಶಿಶುವಿಗೆ ಈ ಹಾಲು ನೀಡಿ ಆಸ್ಪತ್ರೆಯಿಂದ ತೆರಳುವಾಗ 1.45 ಕೆ.ಜಿ ತೂಕ ಬರುವಂತೆ ಮಾಡಿ ನಗು ಮುಖದಿಂದಲೇ ತಾಯಿ ಮಗುವನ್ನು ಕಳುಹಿಸಿದ ಉದಾಹರಣೆಯು ಇದೆ. ಇದರ ಜೊತೆ ವೆಂಟಿಲೇಟರ್‌ನಲ್ಲಿದ್ದ ನವಜಾತ ಶಿಶು ಸಹ ಈ ಹಾಲು ಕುಡಿದು ಜೀವದಾನ ಪಡೆದಿದೆ.
ಸಂಗ್ರಹಿಸಿದ ಎದೆ ಹಾಲನ್ನು ಪಾಶ್ಚರೀಕರಣ ಪ್ರಕ್ರಿಯೆಗೆ ಒಳಪಡಿಸಿ ಬಳಿಕ ವೆನ್ಲಾಕ್ ಪ್ರಯೋಗಾಲಯದಲ್ಲಿ ವಿವಿಧ ಪರೀಕ್ಷೆಗೆ ಒಳಪಡಿಸಿದ ಬಳಿಕವೇ ನವಜಾತ ಶಿಶುಗಳಿಗೆ ನೀಡಲಾಗುತ್ತದೆ. ಈ ಹಾಲನ್ನು ಹ್ಯೂಮನ್ ಮಿಲ್ಕ್ ಬ್ಯಾಂಕ್‌ನಲ್ಲಿ ಸುಮಾರು ಆರು ತಿಂಗಳುಗಳವರೆಗೂ ಸಂಗ್ರಹ ಮಾಡಿ ಇಟ್ಟುಕೊಳ್ಳಬಹುದಾಗಿದೆ. ಪ್ರಸ್ತುತ ಜೀವನಶೈಲಿ ಹಾಗೂ ಮಹಿಳೆಯರ ಆರೋಗ್ಯ ಸಮಸ್ಯೆಗಳಿಂದಾಗಿ 30 ಪ್ರತಿಶತಕ್ಕೂ ಅಧಿಕ ಮಕ್ಕಳು ಅವಧಿಗೂ ಮುನ್ನವೇ ಜನಿಸುತ್ತವೆ. ಇಂತಹ ಮಕ್ಕಳಲ್ಲಿ ಪ್ರತಿರೋಧ ಶಕ್ತಿ ಸಹ ಕಮ್ಮಿ ಇರುತ್ತೆ. ಈ ಸಂದರ್ಭದಲ್ಲಿ ಹ್ಯೂಮನ್ ಮಿಲ್ಕ್ ಬ್ಯಾಂಕ್‌ನ ಮೂಲಕ ಸಿಕ್ಕ ಎದೆಹಾಲು ಈ ಕಂದಮ್ಮಗಳಿಗೆ ಸಂಜೀವಿನಿಯಾಗ್ತಿದೆ