LATEST NEWS

ಡಾ. ಮೋಹನ ಆಳ್ವರ 75ನೇ ಅಮೃತ ಮಹೋತ್ಸವ: 15 ಕೋಟಿ ರೂ. ವೆಚ್ಚದ ಬೃಹತ್ ಸಮಾಜಮುಖಿ ಯೋಜನೆಗೆ ನಿರ್ಧಾರ!

ಮೂಡುಬಿದಿರೆ: ಶಿಕ್ಷಣ, ಆರೋಗ್ಯ ಹಾಗೂ ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ವಿಶಿಷ್ಟ ಛಾಪು ಮೂಡಿಸಿರುವ ಡಾ. ಎಂ. ಮೋಹನ ಆಳ್ವರ 75ನೇ ವರ್ಷದ ಅಮೃತ ಮಹೋತ್ಸವವನ್ನು ಸಮಾಜಕ್ಕೆ ಶಾಶ್ವತ ಕೊಡುಗೆ ನೀಡುವ ಸೇವಾ ಕಾರ್ಯಗಳ ಮೂಲಕ ಆಚರಿಸಲು ನಿರ್ಧರಿಸಲಾಗಿದೆ. ಈ ನಿಟ್ಟಿನಲ್ಲಿ ಸುಮಾರು 15 ಕೋಟಿ ರೂ. ವೆಚ್ಚದ ಸಮಾಜಮುಖಿ ಯೋಜನೆಗಳನ್ನು ರೂಪಿಸುವ ಚಿಂತನೆ ನಡೆದಿದೆ ಎಂದು ಉದ್ಯಮಿ ಶಶಿಧರ ಶೆಟ್ಟಿ ಬರೋಡ ತಿಳಿಸಿದರು.

ಶನಿವಾರ ಪಿಲಿಕುಳದ ಸ್ಕೌಟ್ಸ್ ಮತ್ತು ಗೈಡ್ಸ್ ಸಭಾಭವನದಲ್ಲಿ ‘ಡಾ. ಎಂ. ಮೋಹನ ಆಳ್ವ ಅಭಿನಂದನಾ ಸಮಿತಿ–2027’ರ ಆಶ್ರಯದಲ್ಲಿ ನಡೆದ ಪೂರ್ವಭಾವಿ ಸಮಾಲೋಚನಾ ಸಭೆಯಲ್ಲಿ ಅವರು ಮಾತನಾಡಿದರು.

ಕ್ಯಾನ್ಸರ್ ಚಿಕಿತ್ಸಾ ಸೌಲಭ್ಯ ಅಭಿವೃದ್ಧಿ, 10 ಸಾವಿರ ಮಂದಿಗೆ ಉಚಿತ ಡಯಾಲಿಸಿಸ್ ಹಾಗೂ ವೃದ್ಧರ ಘನತೆಯ ಬದುಕಿಗೆ ನೆರವಾಗುವ ‘ಹ್ಯಾಪಿ ಡೆತ್’ ಯೋಜನೆಗಳನ್ನು ಅನುಷ್ಠಾನಗೊಳಿಸುವ ಆಶಯವಿದೆ. ಆಳ್ವಾಸ್‌ನಲ್ಲಿ ಶಿಕ್ಷಣ ಪಡೆದ ಹಳೆಯ ವಿದ್ಯಾರ್ಥಿಗಳು ‘ಗುರುದಕ್ಷಿಣೆ’ ಸಲ್ಲಿಸುವ ವಿನೂತನ ಪರಿಕಲ್ಪನೆಯಡಿ ನಿಧಿ ಸಂಗ್ರಹಿಸಿ, ಅದನ್ನು ಆರೋಗ್ಯ ಸೇವಾ ಯೋಜನೆಗಳಿಗೆ ವಿನಿಯೋಗಿಸುವ ಉದ್ದೇಶ ಹೊಂದಲಾಗಿದೆ ಎಂದು ವಿವರಿಸಿದರು.

ವೈಭವ ಬೇಡ, ಸಮಾಜಕ್ಕೆ ಕೊಡುಗೆಯಾಗಲಿ: ಮೋಹನ ಆಳ್ವ

ಡಾ. ಎಂ. ಮೋಹನ ಆಳ್ವ ಮಾತನಾಡಿ, “ನನ್ನ ಸಾಧನೆ ವೈಯಕ್ತಿಕ ಪರಿಶ್ರಮದ ಫಲವಲ್ಲ; ಎಲ್ಲರ ಸಹಕಾರ, ಪ್ರೀತಿ ಹಾಗೂ ಆಶೀರ್ವಾದಗಳಿಂದ ಸಾಧ್ಯವಾಗಿದೆ. ಅಮೃತ ಮಹೋತ್ಸವಕ್ಕೆ ಯಾವುದೇ ವೈಭವ ಅಥವಾ ವಿಜೃಂಭಣೆಯ ಸಮಾರಂಭ ಬೇಡ. ಬದಲಾಗಿ, ಸಮಾಜಕ್ಕೆ ಉಪಯುಕ್ತವಾಗುವ ಸೇವಾ ಕಾರ್ಯಗಳ ಮೂಲಕ ಈ ದಿನವನ್ನು ಸಾರ್ಥಕಗೊಳಿಸಬೇಕು” ಎಂದು ಆಶಯ ವ್ಯಕ್ತಪಡಿಸಿದರು.

ಆಶೀರ್ವಚನ ನೀಡಿದ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ, “ಮೋಹನ ಆಳ್ವರ ವಿಶಾಲ ಕನಸುಗಳಿಗೆ ಎಲ್ಲರೂ ಒಗ್ಗೂಡಿ ಜೀವ ತುಂಬಬೇಕು. ಈ ಸಾರ್ಥಕ ಕಾರ್ಯದಲ್ಲಿ ಪೇಜಾವರ ಮಠವೂ ಭಾಗಿಯಾಗಲಿದೆ” ಎಂದು ತಿಳಿಸಿ 1 ಲಕ್ಷ ರೂ. ಕೊಡುಗೆ ಘೋಷಿಸಿದರು.

ಅಧ್ಯಕ್ಷತೆ ವಹಿಸಿದ್ದ ಉದ್ಯಮಿ ಡಾ. ಪ್ರಕಾಶ್ ಶೆಟ್ಟಿ ಬಂಜಾರ, ಮಾಜಿ ಸಚಿವ ರಮಾನಾಥ ರೈ, ಚಂದ್ರಹಾಸ ಶೆಟ್ಟಿ ಮಾತನಾಡಿದರು.

2027ರ ಫೆಬ್ರವರಿ 13ರಂದು ಮೂಡುಬಿದಿರೆಯಲ್ಲಿ ಅಮೃತ ಮಹೋತ್ಸವ ಆಯೋಜಿಸಲು ನಿರ್ಧರಿಸಲಾಯಿತು. ಗೌರವಾಧ್ಯಕ್ಷರಾಗಿ ಡಾ. ಡಿ. ವೀರೇಂದ್ರ ಹೆಗ್ಗಡೆ ಮತ್ತು ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ, ಅಧ್ಯಕ್ಷರಾಗಿ ಡಾ. ಪ್ರಕಾಶ್ ಶೆಟ್ಟಿ, ಕಾರ್ಯದರ್ಶಿಗಳಾಗಿ ಶಶಿಧರ ಶೆಟ್ಟಿ ಬರೋಡ, ಚಂದ್ರಹಾಸ ಶೆಟ್ಟಿ ಹಾಗೂ ಕೋಶಾಧಿಕಾರಿಯಾಗಿ ಲೀಲಾಕ್ಷ ಕರ್ಕೇರ ಆಯ್ಕೆಯಾದರು.

ಶಾಸಕರಾದ ಡಾ. ಭರತ್ ಶೆಟ್ಟಿ, ವೇದವ್ಯಾಸ ಕಾಮತ್, ಹರೀಶ್ ಪೂಂಜಾ, ರಾಜೇಶ್ ನಾಯ್ಕ್, ಮಾಜಿ ಸಚಿವರಾದ ಅಭಯಚಂದ್ರ ಜೈನ್, ಕೃಷ್ಣ ಪಾಲೇಮಾರ್, ಬಿ. ನಾಗರಾಜ ಶೆಟ್ಟಿ, ಕಟೀಲಿನ ಲಕ್ಷ್ಮೀನಾರಾಯಣ ಅಸ್ರಣ್ಣ, ಎಂ.ಬಿ. ಪುರಾಣಿಕ್, ಶ್ರೀಪತಿ ಭಟ್, ಮೀನಾಕ್ಷಿ ಆಳ್ವ ಉಪಸ್ಥಿತರಿದ್ದರು. ವೇಣುಗೋಪಾಲ ಶೆಟ್ಟಿ ನಿರೂಪಿಸಿದರು.

Share News