ಬೆಂಗಳೂರು :ಸ್ಮಾರ್ಟ್‌ಫೋನ್‌ಗಳಲ್ಲಿ ನಮ್ಮ ವೈಯಕ್ತಿಕ ಮಾಹಿತಿಯನ್ನು ಸಂಗ್ರಹಿಸಿ ಇಟ್ಟುಕೊಂಡಿರುವುದು ಸಾಮಾನ್ಯ. ಖಾಸಗಿ ಫೋಟೋಗಳು, ವಿಡಿಯೋಗಳಿಂದ ಹಿಡಿದು ಗೌಪ್ಯ ಮಾಹಿತಿಯವರೆಗೂ ಫೋನ್ನಲ್ಲಿ ಇರುತ್ತವೆ. ಫೋನ್ ಕಳುವಾಗದಂತೆ ಜೋಪಾನವಾಗಿಟ್ಟುಕೊಂಡರೆ ಸಾಕು ಎಂದು ನಾವೆಲ್ಲರೂ ಭಾವಿಸಿರುತ್ತೇವೆ. ಆದರೆ, ವಾಸ್ತವವೆಂದರೆ ನಮ್ಮ ಸ್ಮಾರ್ಟ್ಫೋನ್ನಲ್ಲಿರುವ ಮಾಹಿತಿ ನಮಗೆ ಗೊತ್ತಿಲ್ಲದಂತೆ ಸೋರಿಕೆ ಆಗುತ್ತಿರಬಹುದು. ನಾವು ಇನ್ಸ್ಟಾಲ್ ಮಾಡಿಕೊಂಡಿರುವ ಕೆಲ ಆ್ಯಪ್ಗಳು ನಮ್ಮ ಡಾಟಾವನ್ನು ಕದ್ದು ಸಾಗಿಸುತ್ತಿರುವ ಸಾಧ್ಯತೆ ಹೆಚ್ಚಿರುತ್ತದೆ. ಫೋನ್ನಲ್ಲಿರುವ ಫೋಟೋ, ವಿಡಿಯೋ, ನಾವಿರುವ ಸ್ಥಳ, ನಾವು ಅಡ್ಡಾಡಿರುವ ಸ್ಥಳ, ಮೊಬೈಲ್ನ ಮಾಹಿತಿ, ಬ್ರೌಸಿಂಗ್ ಹಿಸ್ಟರಿ, ನಮ್ಮ ಫೋನ್ ಕಾಲ್ ಇತ್ಯಾದಿ ನಾನಾ ಮಾಹಿತಿಯನ್ನು ನಮಗೆ ಅರಿವಾಗದಂತೆ ಲಪಟಾಯಿಸಬಹುದು.
ನಮ್ಮ ಡಾಟಾ ತೆಗೆದುಕೊಂಡು ಏನು ಮಾಡುತ್ತಾರೆ?
ನಮ್ಮ ಸ್ಮಾರ್ಟ್ಫೋನ್ನಲ್ಲಿರುವ ಮಾಹಿತಿಯನ್ನು ಕದಿಯುವ ಆ್ಯಪ್ಗಳು, ಅದನ್ನು ಥರ್ಡ್ ಪಾರ್ಟಿ ಸರ್ವರ್ಗಳಿಗೆ ರವಾನಿಸುತ್ತದೆ. ಆ್ಯಡ್ ಸರ್ವಿಸ್ನಿಂದ ಹಿಡಿದು ಪ್ರೊಫೈಲಿಂಗ್ವರೆಗೂ ಎಲ್ಲದಕ್ಕೂ ಈ ಮಾಹಿತಿಯನ್ನು ಬಳಲಾಗುತ್ತದೆ. ಇದಕ್ಕೆ ಸಾಕ್ಷಿ ಎಂದರೆ, ನೀವು ಯಾವುದಾದರೂ ವಿಚಾರದ ಬಗ್ಗೆ ಫೋನ್ನಲ್ಲಿ ಬ್ರೌಸ್ ಮಾಡಿದಾಗ, ಆ ವಿಚಾರಕ್ಕೆ ಸಂಬಂಧಿಸಿದ ಜಾಹೀರಾತು ನಿಮಗೆ ಕಾಣುತ್ತದೆ. ಇದು ಯಾಕೆಂದರೆ, ನಿಮ್ಮ ಬ್ರೌಸಿಂಗ್ ಮಾಹಿತಿಯನ್ನು ಆ್ಯಪ್ಗಳು ಜಾಹೀರಾತು ಏಜೆನ್ಸಿಗಳಿಗೆ ಮಾರಿಬಿಟ್ಟಿರಬಹುದು. ಹೀಗಾಗಿ, ತೀರಾ ವೈಯಕ್ತೀಕರಿಸಿದ ಜಾಹೀರಾತು ಕಾಣುತ್ತವೆ. ನಿಮ್ಮ ಸೂಕ್ಷ್ಮ ದತ್ತಾಂಶವನ್ನು ಕದಿಯಬಲ್ಲ ಆ್ಯಪ್ಗಳು ಎಂಥವಿರಬಹುದು?

ಅನಗತ್ಯ ಯುಟಿಲಿಟಿ ಆ್ಯಪ್ಗಳ : ಫ್ಲ್ಯಾಶ್‌ಲೈಟ್, ಕ್ಲೀನರ್ ಮತ್ತು ಬೂಸ್ಟರ್‌ನಂತಹ ಅಪ್ಲಿಕೇಶನ್‌ಗಳು ಸಹ ಅಪಾಯ ಎನಿಸುತ್ತವೆ. ಇಂದು ಎಲ್ಲಾ ಸ್ಮಾರ್ಟ್‌ಫೋನ್‌ಗಳು ಫ್ಲ್ಯಾಶ್‌ಲೈಟ್ ಅನ್ನು ಇನ್ಬ್ಯುಲ್ಟ್ ಆಗಿ ಹೊಂದಿರುತ್ತವೆ. ಬೇರೆ ಬೇರೆ ಆಕರ್ಷಣೆಯೊಂದಿಗೆ ಥರ್ಡ್ ಪಾರ್ಟಿ ಫ್ಲ್ಯಾಷ್ಲೈಟ್ ಆ್ಯಪ್ಗಳೂ ಮಾರುಕಟ್ಟೆಯಲ್ಲಿವೆ. ಇವು ನಿಮ್ಮ ಡಾಟಾ ಕದಿಯುವ ಅವಕಾಶ ಹೆಚ್ಚು. ಇನ್ನು, ಉಚಿತವಾಗಿ ಸಿಗುವ ಕ್ಲೀನರ್ ಆ್ಯಪ್ಗಳು ನಿಮ್ಮ ಫೋನ್ ಕ್ಲೀನಪ್ ಮಾಡುವುದರ ಜೊತೆಗೆ ಬ್ರೌಸಿಂಗ್ ಡಾಟಾದಿಂದ ಹಿಡಿದು ಹಲವಾರು ಸೂಕ್ಷ್ಮ ಮಾಹಿತಿಯನ್ನು ಕದಿಯಬಹುದು ಎಂಬುದು ತಜ್ಞರ ಅನಿಸಿಕೆ.
ಎಡಿಟಿಂಗ್ ಅಂಡ್ ಫೇಸ್ ಫಿಲ್ಟರ್ ಆ್ಯಪ್ಗಳು:ಈಗಂತೂ ಫೇಸ್ ಫಿಲ್ಟರ್ ಆ್ಯಪ್ಗಳು, ಫೋಟೋ ಎಡಿಟಿಂಗ್, ವಿಡಿಯೋ ಎಡಿಟಿಂಗ್ ಆ್ಯಪ್ಗಳು ಜನಪ್ರಿಯವಾಗಿವೆ. ಜನರು ತಮ್ಮ ರೀಲ್ಸ್ ವಿಡಿಯೋಗಳು ಮತ್ತು ಫೋಟೋವನ್ನು ಎಡಿಟಿಂಗ್ ಮಾಡಲು ಇಂಥ ಆ್ಯಪ್ಗಳನ್ನು ಬಳಸುವುದು ಹೆಚ್ಚಾಗಿದೆ. ನಿಮ್ಮ ಮುಖ ಚಹರೆಯ ಸೂಕ್ಷ್ಮ ಮಾಹಿತಿಯು ಈ ಆ್ಯಪ್ಗಳ ಮೂಲಕ ಯಾವುದೋ ಸರ್ವರ್ಗಳಲ್ಲಿ ಸ್ಟೋರ್ ಆಗಿ ಇನ್ಯಾವುದಕ್ಕಾದರೂ ಅವುಗಳ ದುರ್ಬಳಕೆ ಆಗಬಹುದು.