ಬೆಂಗಳೂರು: ಪ್ರಸ್ತುತ ನಡೆಯುತ್ತಿರುವ ವಿಧಾನ ಪರಿಷತ್ತಿನ ಬಜೆಟ್ ಅಧಿವೇಶನದಲ್ಲಿ, ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳಲ್ಲಿ (ಪಟ್ಟಣ ಪಂಚಾಯತ್, ಪುರಸಭೆ ಹಾಗೂ ನಗರಸಭೆ) ಖಾಲಿ ಇರುವ ಹುದ್ದೆಗಳ ಕುರಿತು ಸ್ಥಳೀಯ ಸಂಸ್ಥೆಗಳ ಪ್ರತಿನಿಧಿ ಹಾಗೂ ವಿಧಾನ ಪರಿಷತ್ ಸದಸ್ಯರಾದ ಶ್ರೀ ಕಿಶೋರ್ ಕುಮಾರ್ ಪುತ್ತೂರು

ಅವರು ಕೇಳಿದ ಚುಕ್ಕೆ ಗುರುತಿಲ್ಲದ ಪ್ರಶ್ನೆಗೆ ಸರ್ಕಾರ ನೀಡಿರುವ ಉತ್ತರವು ಆಘಾತಕಾರಿಯಾಗಿದೆ. ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಬರೋಬ್ಬರಿ ಶೇ. 53ಕ್ಕೂ ಹೆಚ್ಚು ಹುದ್ದೆಗಳು ಖಾಲಿಯಿದ್ದು, ಸಾರ್ವಜನಿಕ ಸೇವೆಯು ತೀವ್ರ ವ್ಯತ್ಯಯವಾಗುತ್ತಿರುವ ಬಗ್ಗೆ ತಿಳಿದು ಬಂದಿದೆ.
ಸರ್ಕಾರವು ಸದನದಲ್ಲಿ ಒದಗಿಸಿರುವ ಅಧಿಕೃತ ಲಿಖಿತ ಉತ್ತರದ ಪ್ರಕಾರ, ನಗರ ಸ್ಥಳೀಯ ಸಂಸ್ಥೆಗಳಲ್ಲಿ ಮಂಜೂರಾದ ಒಟ್ಟು 36,134 ಹುದ್ದೆಗಳ ಪೈಕಿ ಬರೋಬ್ಬರಿ 19,509 ಹುದ್ದೆಗಳು ಖಾಲಿ ಇವೆ. ಗ್ರೂಪ್ ‘ಎ’ ವೃಂದದ 356 ಹುದ್ದೆಗಳಲ್ಲಿ 112, ಗ್ರೂಪ್ ‘ಬಿ’ ವೃಂದದ 408 ರಲ್ಲಿ 307, ಗ್ರೂಪ್ ‘ಸಿ’ ವೃಂದದ 9,856 ರಲ್ಲಿ 5,624 ಹಾಗೂ ಗ್ರೂಪ್ ‘ಡಿ’ ವೃಂದದ 25,514 ಹುದ್ದೆಗಳಲ್ಲಿ 13,672 ಹುದ್ದೆಗಳು ಖಾಲಿ ಇವೆ. ಅರ್ಧಕ್ಕಿಂತ ಹೆಚ್ಚು ಸಿಬ್ಬಂದಿಯೇ ಇಲ್ಲದಿರುವುದರಿಂದ ರಾಜ್ಯದ ಸ್ಥಳೀಯ ಸಂಸ್ಥೆಗಳ ಆಡಳಿತ ಯಂತ್ರವು ಸಂಪೂರ್ಣವಾಗಿ ಕುಸಿದುಬಿದ್ದಿದೆ.
ಸಿಬ್ಬಂದಿ ಕೊರತೆಯಿಂದಾಗಿ ಸಾರ್ವಜನಿಕರಿಗೆ ಒದಗಿಸಬೇಕಾದ ಮೂಲಭೂತ ಸೇವೆಗಳು ಮರೀಚಿಕೆಯಾಗಿದ್ದು, ದಿನನಿತ್ಯದ ಸಣ್ಣಪುಟ್ಟ ಕೆಲಸಗಳಿಗೂ ಜನಸಾಮಾನ್ಯರು ಕಚೇರಿಗಳಿಗೆ ಅಲೆದಾಡುವಂತಹ ಶೋಚನೀಯ ದುಸ್ಥಿತಿ ನಿರ್ಮಾಣವಾಗಿದೆ. ಇದರ ಜೊತೆಗೆ, ಇರುವ ಬೆರಳೆಣಿಕೆಯ ಸಿಬ್ಬಂದಿಗಳಿಗೆ ಜನಗಣತಿ, ಜಾತಿ ಸಮೀಕ್ಷೆಯಂತಹ ಸರ್ಕಾರದ ಇತರೆ ಕೆಲಸಗಳನ್ನು ವಹಿಸುತ್ತಿರುವುದರಿಂದ ಸ್ಥಳೀಯ ಸಂಸ್ಥೆಗಳ ದೈನಂದಿನ ಕಾರ್ಯಚಟುವಟಿಕೆಗಳಿಗೆ ತೀವ್ರ ಅಡ್ಡಿಯಾಗುತ್ತಿದೆ. ಮತ್ತೊಂದೆಡೆ, ರಾಜ್ಯಾದ್ಯಂತ ಪೌರಸೇವಾ ವೃಂದದ ಸುಮಾರು 110 ಅಧಿಕಾರಿಗಳು ಮತ್ತು ಸಿಬ್ಬಂದಿಗಳನ್ನು ನಿಯೋಜನೆ ಮೇಲೆ ಅನ್ಯ ಇಲಾಖೆಗಳಲ್ಲಿ ಬಳಸಿಕೊಳ್ಳಲಾಗುತ್ತಿರುವುದು ಈ ಸಮಸ್ಯೆಯನ್ನು ಮತ್ತಷ್ಟು ಬಿಗಡಾಯಿಸುವಂತೆ ಮಾಡಿದೆ.
ಸಿಬ್ಬಂದಿ ಕೊರತೆಯ ಬಹುದೊಡ್ಡ ಸಮಸ್ಯೆಯಿಂದಾಗಿ ರಾಜ್ಯದ ಪಟ್ಟಣ ಪಂಚಾಯತ್, ಪುರಸಭೆ ಮತ್ತು ನಗರಸಭೆಗಳಲ್ಲಿ ಅಭಿವೃದ್ಧಿ ಕಾರ್ಯಗಳು ಸಂಪೂರ್ಣವಾಗಿ ಸ್ಥಗಿತಗೊಂಡಿದ್ದು, ನಗರ ಪ್ರದೇಶದ ಸಾಮಾನ್ಯ ನಾಗರಿಕರು ಇದರ ನೇರ ಬಲಿಪಶುಗಳಾಗಿದ್ದಾರೆ. ಆದ್ದರಿಂದ, ಸರ್ಕಾರವು ಇನ್ನಾದರೂ ಎಚ್ಚೆತ್ತುಕೊಂಡು ಸಾರ್ವಜನಿಕರ ಹಿತದೃಷ್ಟಿಯಿಂದ ಸ್ಥಳೀಯ ಸಂಸ್ಥೆಗಳಲ್ಲಿ ಖಾಲಿ ಇರುವ ಎಲ್ಲಾ ಹುದ್ದೆಗಳಿಗೆ ಕೂಡಲೇ ನೇಮಕಾತಿ ಪ್ರಕ್ರಿಯೆ ಪ್ರಾರಂಭಿಸಬೇಕು. ಜೊತೆಗೆ ಅನ್ಯ ಇಲಾಖೆಗಳಲ್ಲಿರುವ ಪೌರಸೇವಾ ಸಿಬ್ಬಂದಿಯನ್ನು ವಾಪಸ್ ಕರೆಸಿಕೊಂಡು ಸುಗಮ ಆಡಳಿತಕ್ಕೆ ಅನುವು ಮಾಡಿಕೊಡಬೇಕು ಎಂದು ಕಿಶೋರ್ ಕುಮಾರ್ ಪುತ್ತೂರು ಅವರು ತಮ್ಮ ಹೇಳಿಕೆಯಲ್ಲಿ ಸರ್ಕಾರವನ್ನು ಒತ್ತಾಯಿಸಿದ್ದಾರೆ.