ಬೆಂಗಳೂರು : ರಾಜ್ಯ ಸರ್ಕಾರ ಮೀನುಗಾರಿಕೆ ವೃತ್ತಿ ನಡೆಸುವವರಿಗೆ ಮಸ್ಸ್ಯಾಶ್ರಯ ಯೋಜನೆ ಅಡಿ ಮನೆ ಮಂಜೂರು ಮಾಡುತ್ತಿದ್ದು ಸದರಿ ಫಲಾನುಭವಿಗಳು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದು ಈ ಬಗ್ಗೆ ವಿಧಾನ ಪರಿಷತ್ತಿನ ಅಧಿವೇಶನದಲ್ಲಿ ಶಾಸಕರಾದ ಕಿಶೋರ್ ಕುಮಾರ್ ಪುತ್ತೂರು ಇವರ ಚುಕ್ಕೆ ಗುರುತಿನ ಪ್ರಶ್ನೆಗೆ – 1699(176) ಸಚಿವರು ನೀಡಿದ ಉತ್ತರಕ್ಕೆ ಶಾಸಕರು ಸಮಸ್ಯೆಗಳನ್ನು ಪರಿಹರಿಸುವಂತೆ ಸರ್ಕಾರವನ್ನು ಆಗ್ರಹಿಸಿದರು

1) ಫಲಾನುಭವಿಗಳಿಗೆ ನೀಡುತ್ತಿರುವ ಸಹಾಯಧನವನ್ನು ಹೆಚ್ಚಳ ಮಾಡುವುದು ರಾಜ್ಯ ಸರ್ಕಾರವು ಈ ಯೋಜನೆಯಡಿ ಗ್ರಾಮೀಣ ಭಾಗದ ಫಲಾನುಭವಿಗಳಿಗೆ ರೂಪಾಯಿ 1.20 ಲಕ್ಷ ಸಹಾಯಧನ ಮತ್ತು SC/ST ಪ್ರವರ್ಗದವರಿಗೆ ರೂಪಾಯಿ 1.75 ಲಕ್ಷ ಸಹಾಯಧನ ನೀಡುತ್ತಿದೆ
ನಗರ ಭಾಗದ ಫಲಾನುಭವಿಗಳಿಗೆ ರೂಪಾಯಿ 2.00 ಲಕ್ಷ ಸಹಾಯಧನ ನೀಡುತ್ತದೆ
ಸದರಿ ಸಹಾಯಧನವನ್ನು ಕನಿಷ್ಠ 5.00 ಲಕ್ಷ ದವರೆಗೆ ಹೆಚ್ಚಿಸಬೇಕು
ಇತ್ತೀಚೀನ ಅಧಿವೇಶನದಲ್ಲಿ ಸರ್ಕಾರದ ವಸತಿ ಇಲಾಖೆಯು ನನ್ನ ಚುಕ್ಕೆ ಗುರುತಿಲ್ಲದ ಪ್ರಶ್ನೆಗೆ ನೀಡಿದ ಉತ್ತರದಲ್ಲಿ 700 ಚದರಡಿ ವಿಸ್ತೀರ್ಣದ ರೆಡ್ಡಾಕ್ಸೈಡ್ ನೆಲದ ಹಂಚಿನ ಮನೆಯ ನಿರ್ಮಾಣಕ್ಕೆ ಲೋಕೋಪಯೋಗಿ ಇಲಾಖೆಯ 2024- 25 ನೇ ಸಾಲಿನ ದರಪಟ್ಟಿಯ ಪ್ರಕಾರ ಕನಿಷ್ಠ 13.19 ಲಕ್ಷ ಅಂದಾಜು ವೆಚ್ಚ ತಗಲುತ್ತದೆ ಎಂದು ತಿಳಿಸಿದೆ ಮತ್ತು ಕಲ್ಲು ಮರಳು ಸಿಮೆಂಟ್ ದರಗಳು ವಿಪರೀತವಾಗಿ ಏರಿಕೆಯಾಗಿದ್ದು ಮನೆ ನಿರ್ಮಾಣ ವೆಚ್ಚವು ಅತ್ಯಧಿಕವಾಗಿದೆ.
2) ಬಾಕಿ ಅನುದಾನವನ್ನು ಕೂಡಲೇ ಬಿಡುಗಡೆಗೊಳಿಸುವುದು. ಇಲಾಖೆ ವತಿಯಿಂದ ಈಗಾಗಲೇ ಫಲಾನುಭವಿಗಳಿಗೆ ನೀಡಿರುವ ಮನೆಗಳ ಕಾಮಗಾರಿ ಪ್ರಾರಂಭವಾಗಿದ್ದು 2024-25 ನೇ ಸಾಲಿನಲ್ಲಿ ವಿವಿಧ ಹಂತದಲ್ಲಿರುವ ತಳಪಾಯ ಹಂತದಲ್ಲಿ 587 ಗೋಡೆ ಹಂತದಲ್ಲಿ 86 ಮತ್ತು ಪೂರ್ಣಗೊಂಡ 02 ಮನೆಗಳಿಗೆ ಅನುದಾನ ಬಿಡುಗಡೆಗೊಳಿಸಲು ಬಾಕಿ ಇದ್ದು ಕೂಡಲೇ ಸದರಿ ಅನುದಾನವನ್ನು ಬಿಡುಗಡೆಗೊಳಿಸಿ ಮನೆ ಕಾಮಗಾರಿಯನ್ನು ಪೂರ್ಣಗೊಳಿಸಲು ಅವಕಾಶ ಕಲ್ಪಿಸಬೇಕು
3) ಮನೆ ನಿರ್ಮಿಸಲು ಭೂ ಪರಿವರ್ತನೆ ಮತ್ತು ವಿನ್ಯಾಸ ಅನುಮೋದನೆಯಿಂದ ಹಾಗೂ ಸ್ವಾಧೀನ ಪ್ರಮಾಣ ಪತ್ರದಿಂದ ವಿನಾಯಿತಿ ನೀಡುವುದು ಈ ಹಿಂದೆ ಸರ್ಕಾರವು ಯಾವುದೇ ವಸತಿ ಯೋಜನೆಯಡಿ ಮನೆ ಮಂಜೂರು ಮಾಡಿದ ಫಲಾನುಭವಿಯು ತನ್ನ ಜಮೀನನ್ನು ಭೂ ಪರಿವರ್ತನೆಗೊಳಿಸದೆ ಕೃಷಿ ಜಮೀನಿನಲ್ಲಿ ಮನೆ ನಿರ್ಮಿಸಲು ಅವಕಾಶ ನೀಡಲಾಗಿತ್ತು ಸದರಿ ಫಲಾನುಭವಿಗಳಿಗೆ ಗ್ರಾಮ ಪಂಚಾಯತಿಯಿಂದ ಕಟ್ಟಡ ಲೈಸೆನ್ಸ್ ನೀಡಲಾಗುತ್ತಿತ್ತು. ಮನೆ ಕಾಮಗಾರಿ ಪೂರ್ಣಗೊಂಡ ನಂತರ ಗ್ರಾಮ ಪಂಚಾಯತಿಯಿಂದ ಕದನಂಬ್ರ ಮತ್ತು ವಿದ್ಯುತ್ ಸಂಪರ್ಕ ಪಡೆಯಲು ನಿರಾಕ್ಷೇಪಣಾ ಪತ್ರವನ್ನು ನೀಡಲಾಗುತ್ತಿತ್ತು
ಆದರೆ ಪ್ರಸ್ತುತ ಫಲಾನುಭವಿಯು ಕಟ್ಟಡ ಲೈಸನ್ಸ್ ಪಡೆಯಬೇಕಾದಲ್ಲಿ ಜಮೀನನ್ನು ವಾಸ್ತವ್ಯ ಉದ್ದೇಶಕ್ಕೆ ಭೂ ಪರಿವರ್ತನೆಗೊಳಿಸಿ ಸ್ಥಳೀಯ ನಗರ ಯೋಜನಾ ಪ್ರಾಧಿಕಾರದಿಂದ ವಿನ್ಯಾಸ ಅನುಮೋದನೆ ಪಡೆದು ಗ್ರಾಮ ಪಂಚಾಯತಿಯಿಂದ ನಮೂನೆ 11-A ಪಡೆದು ನಂತರ ಸ್ಥಳೀಯ ನಗರ ಯೋಜನೆ ಪ್ರಾಧಿಕಾರದಿಂದ ಕಟ್ಟಡ ನಕ್ಷೆಗೆ ತಾಂತ್ರಿಕ ಅನುಮೋದನೆ ಪಡೆದು ಗ್ರಾಮ ಪಂಚಾಯತಿಯಿಂದ ಕಟ್ಟಡ ಲೈಸೆನ್ಸ್ ಪಡಯಬೇಕಾದ ಪರಿಸ್ಥಿತಿ ಇದೆ. ಕಟ್ಟಡ ಪೂರ್ಣಗೊಂಡ ನಂತರ ಸದರಿ ಸ್ಥಳೀಯ ನಗರ ಯೋಜನಾ ಪ್ರಾಧಿಕಾರದಿಂದ ದೃಢೀಕರಣ ಪಡೆದು ಸ್ವಾಧೀನ ಪ್ರಮಾಣ ಪತ್ರ ಮತ್ತು ಕದನಂಬ್ರವನ್ನು ಪಡೆಯಬೇಕಾಗಿದೆ. ಸದರಿ ಸ್ವಾಧೀನ ಪ್ರಮಾಣ ಪತ್ರವನ್ನು ಸಲ್ಲಿಸಿ ಮೆಸ್ಕಾಂನಿಂದ ವಿದ್ಯುತ್ ಸಂಪರ್ಕ ಪಡೆಯಬೇಕಾಗಿದೆ.
ಕಳೆದ ಮೂರು ವರ್ಷಗಳಿಂದ ದಕ್ಷಿಣ ಕನ್ನಡ ಜಿಲ್ಲಾ ವ್ಯಾಪ್ತಿಯಲ್ಲಿ ಮಂಜೂರು ಮಾಡಲಾದ 61 ಮನೆಗಳಿಗೆ ಇನ್ನೂ ಕಟ್ಟಡ ಲೈಸನ್ಸ್ ವಿತರಿಸಲು ಬಾಕಿ ಇರುತ್ತದೆ
4) ವಿಧಾನ ಪರಿಷತ್ತಿನ ಶಾಸಕರಿಗೆ ವಿವೇಚನಾ ಕೋಟದಲ್ಲಿ ಕನಿಷ್ಠ 25 ಮನೆಗಳನ್ನು ನೀಡುವುದು ಪ್ರಸ್ತುತ ಸರ್ಕಾರದ ಆದೇಶದಂತೆ ನಾನು ನನ್ನ ಕ್ಷೇತ್ರ ವ್ಯಾಪ್ತಿಯ ಯಾವುದಾದರೂ ಒಂದು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಶಾಸಕರೊಂದಿಗೆ ಸಹ ಅಧ್ಯಕ್ಷನಾಗಿ ಇರಬೇಕಾಗಿದೆ. ಆದರೆ ನಾನು ರಾಜ್ಯದ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಯಾಗಿ ವಿಧಾನ ಪರಿಷತ್ ಶಾಸಕನಾಗಿದ್ದು ನನ್ನ ವ್ಯಾಪ್ತಿಯಲ್ಲಿ 13 ವಿಧಾನಸಭಾ ಕ್ಷೇತ್ರಗಳು ಬರುತ್ತದೆ. ಮತ್ತು ನನ್ನ ಕ್ಷೇತ್ರದಲ್ಲಿ ಮೀನುಗಾರಿಕಾ ವೃತ್ತಿಗಾರರು ಅತ್ಯಧಿಕ ಸಂಖ್ಯೆಯಲ್ಲಿರುವುದರಿಂದ ನನಗೂ ಸಹ ವಿವೇಚನ ಕೋಟದ ಅವಕಾಶ ನೀಡಿ ನನ್ನ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಫಲಾನುಭವಿಗಳಿಗೆ ಹಂಚಲು ಪ್ರತಿ ವರ್ಷ ಕನಿಷ್ಠ 25 ಮನೆಗಳನ್ನು ವಿತರಿಸಬೇಕು ಎಂದು ಕರ್ನಾಟಕ ವಿಧಾನ ಪರಿಷತ್ ಶಾಸಕ ಕಿಶೋರ್ ಕುಮಾರ್ ಪುತ್ತೂರು ಆಗ್ರಹಿಸಿದರು

