ಮಂಗಳೂರು ಆಯುಷ್ ನಲ್ಲಿ ಔಷಧ ಖರೀದಿಯಲ್ಲಿ ಭಾರೀ ಅಕ್ರಮ ನಡೆದಿದ್ದು, ಅಧಿಕಾರಿಗಳು ಹಣದ ಆಸೆಗೆ ಅವಧಿ ಮೀರಿದ ಔಷಧ ಪೂರೈಕೆ ಮಾಡಿ ಸಾರ್ವಜನಿಕರ ಜೀವದೊಂದಿಗೆ ಚೆಲ್ಲಾಟವಾಡಿದ್ದು ತಿಳಿದ ಕೂಡಲೇ ದಾಖಲೆಗಳ ಸಮೇತ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದಿದ್ದೇನೆ. ಅಲ್ಲದೇ ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ನಡೆದ ಕೆಡಿಪಿ ಸಭೆಯಲ್ಲೂ ಪ್ರಸ್ತಾಪಿಸಿದ್ದೇನೆ. ಇದು ಸಾರ್ವಜನಿಕರ ಆರೋಗ್ಯದ ವಿಷಯವಾಗಿದ್ದರೂ ಗಂಭೀರವಾಗಿ ಪರಿಗಣಿಸದ ಇಲಾಖೆಯ ನಿರ್ಲಕ್ಷ್ಯ ಖಂಡನೀಯ. ಎಂದು ಶಾಸಕ ವೇದವ್ಯಾಸ ಕಾಮತ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು

ಯಾರನ್ನು ರಕ್ಷಿಸಲು ಇಲ್ಲಿ ಹುನ್ನಾರ ನಡೆಯುತ್ತಿದೆ? ಇದರ ಹಿಂದೆ ಯಾರಿದ್ದಾರೆ? ಯು.ಟಿ ಖಾದರ್, ಐವನ್ ಡಿಸೋಜ ಸೇರಿದಂತೆ ಜಿಲ್ಲೆಯ ಎಲ್ಲಾ ಕಾಂಗ್ರೆಸ್ ಜನಪ್ರತಿನಿಧಿಗಳ ಮೇಲೆಯೇ ಸಾರ್ವಜನಿಕರ ಸಂಶಯ ಮೂಡುವಂತಾಗಿದೆ. ಇದೀಗ ಅಲ್ಲಿ ಲೋಕಾಯುಕ್ತ ದಾಳಿ ನಡೆದಿದ್ದು ಆರೋಪಕ್ಕೆ ಪೂರಕವಾಗಿ ಕೆಲವು ದಾಖಲೆಗಳು ಲಭಿಸಿದೆ ಎಂದು ವರದಿಯಾಗಿದ್ದು, ಯಾವುದೇ ಒತ್ತಡಕ್ಕೆ ಒಳಗಾಗದೇ ಸೂಕ್ತ ತನಿಖೆ ಮುಂದುವರಿದರೆ ಮತ್ತಷ್ಟು ವಿಷಯಗಳು, ಕಾಣದ ಕೈಗಳು ಹೊರಗೆ ಬರುವ ನಿರೀಕ್ಷೆ ಇದೆ.

ನಗರ ಭಾಗಕ್ಕೆ ಪೂರೈಕೆಯಾಗುವ ಕುಡಿಯುವ ನೀರಿನ ಕೊಳವೆ ಒಡೆದು ಹೋಗಿ ಮೂರ್ನಾಲ್ಕು ದಿನಗಳು ಕಳೆದು ಜನಸಾಮಾನ್ಯರು ತೀವ್ರ ಸಮಸ್ಯೆ ಅನುಭವಿಸುತ್ತಿದ್ದರೂ ರಾಜ್ಯ ಕಾಂಗ್ರೆಸ್ ಸರ್ಕಾರದ ಅಧೀನದಲ್ಲಿರುವ ಮಂಗಳೂರು ಮಹಾನಗರ ಪಾಲಿಕೆಯ ನಿರ್ಲಕ್ಷ್ಯ ಖಂಡನೀಯ. ನಗರದಲ್ಲಿ ವಾಸಿಸುತ್ತಿರುವ ಲಕ್ಷಾಂತರ ಜನರಿಗೆ ನೀರಿಲ್ಲದ ವಾತಾವರಣ ಸೃಷ್ಟಿಯಾಗಿದ್ದರೂ ಪರ್ಯಾಯ ವ್ಯವಸ್ಥೆ ಮಾಡದೇ ಇರುವುದಂತೂ ಈ ಸರ್ಕಾರದ ಬೇಜವಾಬ್ದಾರಿಯ ಪರಮಾವಧಿಯಾಗಿದೆ.

ಯಕ್ಷಗಾನ ಕಲಾವಿದರ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿರುವ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆಯವರ ಕ್ಷಮೆ ಮಾತ್ರವಲ್ಲ, ಈ ಕೂಡಲೇ ರಾಜ್ಯ ಕಾಂಗ್ರೆಸ್ ಸರ್ಕಾರ ಅವರನ್ನು ಆ ಸ್ಥಾನದಿಂದಲೇ ಕಿತ್ತೆಸೆಯಬೇಕು. ಕರಾವಳಿ ಕರ್ನಾಟಕದ ಗಂಡು ಕಲೆಯಾದ ಯಕ್ಷಗಾನವು ಇಲ್ಲಿನ ಜನರ ಭಕ್ತಿ ಭಾವದಿಂದ ಕೂಡಿದ ಸಂಸ್ಕೃತಿಯ ಭಾಗವಾಗಿದೆ. ಯಕ್ಷಗಾನ ಕಲಾವಿದರನ್ನು ಗೌರವಯುತವಾಗಿ ಕಾಣುವ ಸಮಾಜ ನಮ್ಮದು. ಅಂತಹ ಪರಂಪರೆಗೆ ಎಡಪಂಥೀಯ ಬುದ್ದಿಜೀವಿಗಳು ಅವಮಾನ ಮಾಡುವ ಮೂಲಕ ಇಡೀ ಹಿಂದೂ ಸಮಾಜಕ್ಕೆ ನೋವಾಗಿದೆ. ಸದಾ ಕಾಲ ಹಿಂದೂ ಧರ್ಮದ ವಿರುದ್ಧ ದ್ವೇಷ ಕಾರುವವರನ್ನೇ ಹುಡುಕಿ ಪ್ರಮುಖ ಸ್ಥಾನದಲ್ಲಿ ಕೂರಿಸುವ ಕಾಂಗ್ರೆಸ್ಸಿನ ಹೀನ ಚಾಳಿ ಇನ್ನಾದರೂ ಬದಲಾಗಬೇಕು.

ನಗರದ ಕದ್ರಿ ಪಾರ್ಕ್ ರಸ್ತೆಯಲ್ಲಿ ಜನವರಿಯಿಂದ ವಾಹನಗಳಿಗೆ ಟೋಲ್ ವಿಧಿಸಲು ಚಿಂತನೆ ನಡೆಸಿರುವುದು ಜನಸಾಮಾನ್ಯರಿಗೆ ಮತ್ತೊಂದು ಬೆಲೆ ಏರಿಕೆಯ ಹೊರೆಯಾಗಿ ಪರಿಣಮಿಸಲಿದ್ದು ಇದಕ್ಕೆ ನಮ್ಮ ಆಕ್ಷೇಪವಿದೆ. ಸ್ಮಾರ್ಟ್ ಸಿಟಿ ಯೋಜನೆಯಡಿ ಅಭಿವೃದ್ಧಿಪಡಿಸಲಾದ ಇಲ್ಲಿನ ರಸ್ತೆಯ ನಿರ್ವಹಣೆಯ ಜವಾಬ್ದಾರಿಯನ್ನು ಪಾಲಿಕೆಗೆ ವಹಿಸಲಾಗಿತ್ತು. ಇದೀಗ ಪಾಲಿಕೆಯಲ್ಲಿ ಬಿಜೆಪಿ ಆಡಳಿತದ ಅವಧಿ ಅಂತ್ಯವಾಗಿದ್ದು ರಾಜ್ಯ ಕಾಂಗ್ರೆಸ್ ಸರ್ಕಾರದ ಮೂಲಕ ಆಡಳಿತ ನಡೆಯುತ್ತಿದೆ. ಇಂತಹ ಸಂದರ್ಭದಲ್ಲಿ ಕದ್ರಿ ಪಾರ್ಕ್ ರಸ್ತೆಗೆ ಟೋಲ್ ಕಡ್ಡಾಯ ಮಾಡಲಾಗುತ್ತಿದೆ.
ಈಗಾಗಲೇ ರಾಜ್ಯದಲ್ಲಿ ಜನಸಾಮಾನ್ಯರು ಬೆಲೆ ಏರಿಕೆ ಯಿಂದ ತತ್ತರಿಸಿ ಹೋಗಿದ್ದಾರೆ. ಇದೀಗ ಈ ವ್ಯವಸ್ಥೆಯೂ ಸಹ ಜಾರಿಗೆ ಬಂದರೆ ಇಲ್ಲಿನ ಜನರು ರೊಚ್ಚಿಗೇಳುವುದು ಗ್ಯಾರಂಟಿ.
ಪಾಲಿಕೆಯಲ್ಲಿ ಬಿಜೆಪಿ ಆಡಳಿತವಿದ್ದಾಗ ಕದ್ರಿ ಪಾರ್ಕ್ ಬಳಿಯ ಗೂಡಂಗಡಿಗಳಿಗೆ ಯಾವುದೇ ತೊಂದರೆಯಾಗಿರಲಿಲ್ಲ. ಇದೀಗ ಕಾಂಗ್ರೆಸ್ ನೇತೃತ್ವದ ಪಾಲಿಕೆಯು ಇಲ್ಲಿನ ದುಡಿಯುವ ವರ್ಗದ ಜನತೆಗೆ ನಾವು ಯಾವುದೇ ತೊಂದರೆ ಮಾಡುವುದಿಲ್ಲ ಎನ್ನುತ್ತಲೇ, ಪರ್ಯಾಯ ವ್ಯವಸ್ಥೆ ಕೂಡಾ ಮಾಡದೇ, ಏಕಾಏಕಿ ಗೂಡಂಗಡಿಗಳನ್ನು ತೆರವುಗೊಳಿಸಿದ್ದು ದುಡಿಯುವ ವರ್ಗದ ಮೇಲಿನ ಪ್ರಹಾರವಾಗಿದ್ದು ಖಂಡನೀಯವಾಗಿದೆ.
ನಗರದ ಜೈಲ್ ಜಾಮರ್ ಸಮಸ್ಯೆ ಬಗೆಹರಿಸುವಂತೆ ಸಾರ್ವಜನಿಕರೊಂದಿಗೆ ಪ್ರತಿಭಟನೆ ನಡೆಸಿ ಆಯ್ತು, ಸಚಿವರ ಗಮನಕ್ಕೆ ತಂದೂ ಆಯ್ತು, ಕೊನೆಗೆ ಅನಿವಾರ್ಯವಾಗಿ ಅಧಿವೇಶನದಲ್ಲೂ ಈ ಬಗ್ಗೆ ಪ್ರಸ್ತಾಪಿಸಿ ಸರ್ಕಾರದ ಗಮನ ಸೆಳೆಯಲಾಯಿತು. ಆದರೂ ಇಲ್ಲಿನ ಜನರ ಸಮಸ್ಯೆಗೆ ಮುಕ್ತಿ ಸಿಕ್ಕಿರಲಿಲ್ಲ. ಇದೀಗ ಇಲ್ಲಿನ ವಕೀಲರ ಮೂಲಕ ಸ್ವತಃ ರಾಜ್ಯ ಹೈಕೋರ್ಟ್ ಮಧ್ಯ ಪ್ರವೇಶಿಸಿದ್ದು, ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸುವಂತೆ ಆದೇಶ ನೀಡಿದೆ. ಇನ್ನಾದರೂ ಈ ದಪ್ಪ ಚರ್ಮದ ಸರ್ಕಾರ ಎಚ್ಚೆತ್ತುಕೊಳ್ಳಲಿ.
ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಇ–ಖಾತಾಕ್ಕಾಗಿ ಜನಸಾಮಾನ್ಯರು ಅನುಭವಿಸುತ್ತಿರುವ ತೊಂದರೆ ಮುಂದುವರಿದಿದ್ದು ಇನ್ನೂ ಸಹ ಅದನ್ನು ಸರಿಪಡಿಸುವ ಗೋಜಿಗೆ ಹೋಗದ ರಾಜ್ಯ ಕಾಂಗ್ರೆಸ್ ಸರ್ಕಾರದ ಬೇಜವಾಬ್ದಾರಿ ಖಂಡನೀಯ. ಮೊನ್ನೆಯವರೆಗೆ ಇದ್ದ ಬದ್ದ ಅಧಿಕಾರಿಗಳನ್ನೆಲ್ಲಾ ಅವೈಜ್ಞಾನಿಕ ಸಮೀಕ್ಷೆಗೆ ನಿಯೋಜಿಸಿಕೊಂಡ ಪರಿಣಾಮ ಎಷ್ಟೇ ತುರ್ತು ಪರಿಸ್ಥಿತಿಯಿದ್ದರೂ ಸಾರ್ವಜನಿಕರಿಗೆ ಇ-ಖಾತಾ ಲಭಿಸಿರಲಿಲ್ಲ. ಇದೀಗ ಸಮೀಕ್ಷೆ ಮುಗಿದು ಅಧಿಕಾರಿಗಳು ಬಂದಿದ್ದಾರೆ. ಆದರೆ ಸರ್ವರ್ ಇಲ್ಲ. ಹೀಗಾದರೆ ಸಾರ್ವಜನಿಕರ ತಾಳ್ಮೆಯ ಕಟ್ಟೆಯೊಡೆಯುತ್ತದೆ. ಕಳೆದ ಎರಡು ವರ್ಷಗಳಿಂದಲೂ ಇರುವ ಈ ಸಮಸ್ಯೆಯ ಬಗ್ಗೆ ಅಧಿವೇಶನದಲ್ಲಿ ಸರ್ಕಾರದ ಗಮನ ಸೆಳೆದಿದ್ದೇನೆ, ಸಂಬಂಧಪಟ್ಟ ಸಚಿವರಿಗೂ ಮನವಿ ಮಾಡಿದ್ದೇನೆ. ಆದರೂ ರಾಜ್ಯ ಸರ್ಕಾರದ ನಿರ್ಲಕ್ಷ್ಯದಿಂದಾಗಿ ನಾಗರಿಕರಿಗೆ ತೊಂದರೆ ತಪ್ಪಿಲ್ಲ.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಅಭಿವೃದ್ಧಿ ವಿಷಯಗಳು ಪಾತಾಳಕ್ಕಿಳಿದಿದ್ದರೂ, ಬೆಲೆ ಏರಿಕೆ, ಭ್ರಷ್ಟಾಚಾರಗಳು ಮಾತ್ರ ನಿರಂತರವಾಗಿ ಎಗ್ಗಿಲ್ಲದೇ ನಡೆಯುತ್ತಿದೆ. ಮಂಗಳೂರು ಮಹಾನಗರ ಪಾಲಿಕೆಗೆ ರಾಜ್ಯ ಸರ್ಕಾರದಿಂದ ಬರಬೇಕಿದ್ದ ಅನುದಾನ, ಮಹಾತ್ಮಾ ಗಾಂಧಿ ನಗರ ವಿಕಾಸ ಯೋಜನೆ ಸೇರಿದಂತೆ ಯಾವುದೇ ಅನುದಾನಗಳು ಬರುತ್ತಿಲ್ಲ. ಹೀಗಾದರೆ ಕ್ಷೇತ್ರದಲ್ಲಿ ಆಗಬೇಕಿರುವ ತುರ್ತು ಕಾಮಗಾರಿಗಳು, ಅಭಿವೃದ್ಧಿ ಕಾರ್ಯಗಳು ನಡೆಯುವುದಾದರೂ ಹೇಗೆ?
ಕಾಂಗ್ರೆಸ್ ಸರ್ಕಾರ ರಾಜ್ಯದ ಆಡಳಿತದಲ್ಲಿ ವೈಫಲ್ಯ ಅನುಭವಿಸಿದ್ದು ಮಾತ್ರವಲ್ಲದೇ ನಮ್ಮ ಮಂಗಳೂರನ್ನು ಸಂಪೂರ್ಣವಾಗಿ ಕಡೆಗಣಿಸುತ್ತಿರುವುದು ಅಕ್ಷಮ್ಯವಾಗಿದೆ. ಮಂತ್ರಿಗಳು ಜಿಲ್ಲೆಗೆ ಬಂದಾಗ ಕಾಟಾಚಾರಕ್ಕೆ ಕೋಟಿ ಕೋಟಿ ರೂ. ಗಳನ್ನು ಘೋಷಣೆ ಮಾಡಿ ಹೋಗುತ್ತಾರೆ. ಆ ನಂತರ ಅದು ಕಾರ್ಯರೂಪಕ್ಕೆ ಬರುವುದೇ ಇಲ್ಲ. ಕೇವಲ ಪತ್ರಿಕಾ ಹೇಳಿಕೆಗಳಿಗೆ ಮಾತ್ರ ಸೀಮಿತವಾಗಿರುವ ಸುಳ್ಳು ಘೋಷಣೆಗಳು, ಸುಳ್ಳು ಭರವಸೆಗಳು ನಮ್ಮ ಕ್ಷೇತ್ರಕ್ಕೆ ಜಿಲ್ಲೆಗೆ ಅಗತ್ಯವಿಲ್ಲ.
ಪತ್ರಿಕಾಗೋಷ್ಠಿಯಲ್ಲಿ ಮಂಡಲದ ಅಧ್ಯಕ್ಷರಾದ ರಮೇಶ್ ಕಂಡೆಟ್ಟು, ಪ್ರಧಾನ ಕಾರ್ಯದರ್ಶಿಗಳಾದ ರಮೇಶ್ ಹೆಗ್ಡೆ, ಲಲ್ಲೇಶ್ ಕುಮಾರ್ ಉಪಸ್ಥಿತರಿದ್ದರು.


