ಬೆಂಗಳೂರು: ಮಂಗಳೂರು ನಗರ ವ್ಯಾಪ್ತಿಯ ಹಲವು ಭಾಗಗಳಲ್ಲಿ ಸಿಟಿ ಬಸ್‌ಗಳು ನಿಗದಿತ ಸ್ಥಳಗಳಿಗೆ ತೆರಳದೆ ಸಾರ್ವಜನಿಕರು ಎದುರಿಸುತ್ತಿರುವ ತೀವ್ರ ಸಮಸ್ಯೆಯನ್ನು ಶಾಸಕ ವೇದವ್ಯಾಸ ಕಾಮತ್ ಅವರು ರಾಜ್ಯ ಅಧಿವೇಶನದಲ್ಲಿ ಪ್ರಸ್ತಾಪಿಸಿದರು. ಸಾರ್ವಜನಿಕರ ಸಾರಿಗೆ ಸಮಸ್ಯೆಗೆ ಕೂಡಲೇ ಶಾಶ್ವತ ಪರಿಹಾರ ಕಲ್ಪಿಸಬೇಕೆಂದು ಅವರು ಸರ್ಕಾರವನ್ನು ಒತ್ತಾಯಿಸಿದರು.

ಮಂಗಳೂರು ನಗರದ ಕೆಲವು ಸಿಟಿ ಬಸ್ ಗಳು ಆರ್ಥಿಕ ಕಾರಣ ನೀಡಿ ಒಂದಷ್ಟು ಪ್ರದೇಶಗಳಿಗೆ ಸೇವೆಯನ್ನು ಸೀಮಿತಗೊಳಿಸುವುದು, ಟ್ರಿಪ್ ಕಡಿತಗೊಳಿಸುವುದು ಮೊದಲಾದ ಕಾರಣಗಳಿಗೆ ಅಲ್ಲಿ ಸರ್ಕಾರಿ ಬಸ್ ಗಳನ್ನು ಹಾಕಲಾಗಿತ್ತು. ಆದರೆ ನಂತರ ಅವುಗಳನ್ನೂ ಸ್ಥಗಿತಗೊಳಿಸಲಾಗಿದೆ. ಇದರಿಂದಾಗಿ ಶಕ್ತಿನಗರ, ಬಜಾಲ್-ಪಡ್ಪು-ಕೊಟ್ಟಾರ, ಪಡೀಲ್-ಕಣ್ಣಗುಡ್ಡೆ, ಬೋಳೂರು ಮಾತಾ ಅಮೃತಾನಂದಮಯಿ ನಿಂದ ರೈಲ್ವೆ ಸ್ಟೇಷನ್, ಜಲ್ಲಿಗುಡ್ಡೆ, ಸರಿಪಲ್ಲ ಮೊದಲಾದ ಭಾಗದ ಜನರು ಸೂಕ್ತ ಸಾರಿಗೆ ವ್ಯವಸ್ಥೆಯಿಲ್ಲದೇ ಪರಿತಪಿಸುವಂತಾಗಿದೆ ಎಂದರು.
ಈ ಬಗ್ಗೆ ದ.ಕ ಬಸ್ ಮಾಲಕರ ಸಂಘ, ಆರ್.ಟಿ.ಒ, ಪೊಲೀಸ್ ಇಲಾಖೆ, ಜಿಲ್ಲಾಧಿಕಾರಿ, ಕೊನೆಗೆ ಉಸ್ತುವಾರಿ ಸಚಿವರಿದ್ದ ಕೆಡಿಪಿ ಸಭೆ ಹೀಗೆ ಎಲ್ಲರ ಗಮನಕ್ಕೂ ತಂದಾಗ ಒಂದೆರಡು ದಿನ ಸಮಸ್ಯೆ ಬಗೆಹರಿದಂತೆ ಕಂಡರೂ ಅಂತಿಮ ಫಲಿತಾಂಶ ಮಾತ್ರ ಶೂನ್ಯ. ಹೀಗಾಗಿ ಅಧಿವೇಶನದಲ್ಲಿಯೇ ಪ್ರಸ್ತಾಪಿಸುತ್ತಿದ್ದು ದಯವಿಟ್ಟು ಸಾರ್ವಜನಿಕರ ಸಮಸ್ಯೆಗೆ ಮುಕ್ತಿ ನೀಡಿ ಎಂದು ಆಗ್ರಹಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿಯವರು ಕೂಡಲೇ ಈ ಬಗ್ಗೆ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

