ಕೆನರಾ ಹೈಸ್ಕೂಲ್ ಉರ್ವ ಮತ್ತು ಡೊಂಗರಕೇರಿಯಲ್ಲಿ ಸುಧೀರ್ಘ ಅವಧಿಯವರೆಗೆ ಶಿಕ್ಷಕರಾಗಿ ಸೇವೆ ಸಲ್ಲಿಸಿ ಪ್ರಸ್ತುತ ಹೊಯ್ಗೆಬೈಲ್ ನಲ್ಲಿ ನಿವೃತ್ತ ಜೀವನ ನಡೆಸುತ್ತಿರುವ ಶ್ರೀ ಮಾಧವ ಸುವರ್ಣ ರವರ ಮನೆಗೆ ಶಾಸಕ ವೇದವ್ಯಾಸ್ ಕಾಮತ್ ರವರು ಗುರು ಪೂರ್ಣಿಮೆಯ ಪ್ರಯುಕ್ತ ಭೇಟಿ ನೀಡಿ ಗುರು ವಂದನೆ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಶಾಸಕರು, ಪ್ರತಿಯೊಬ್ಬ ವಿದ್ಯಾರ್ಥಿಯ ಜೀವನದಲ್ಲಿ ಶಾಲಾ ದಿನಗಳು ಹಾಗೂ ಶಿಕ್ಷಕರು ಅತ್ಯಂತ ಮಹತ್ವದ ಪಾತ್ರ ವಹಿಸುತ್ತಾರೆ. ಅಂತಹ ಕಾಲಘಟ್ಟದಲ್ಲಿ ನಮ್ಮನ್ನೆಲ್ಲಾ ತಿದ್ದಿ ತೀಡಿ ಬದುಕಿನ ದಾರಿ ತೋರಿ ಬೆಳಕಾದವರು ಈ ನನ್ನ ಗುರುಗಳು. ನನ್ನಂತಹ ಸಾವಿರಾರು ವಿದ್ಯಾರ್ಥಿಗಳು ಅವರಿಗಿದ್ದರೂ, ನಮಗೆಲ್ಲರಿಗೂ ಅವರೇ ಪ್ರಾತಃ ಸ್ಮರಣೀಯರು. ಇಂದಿಗೂ ಅವರು ಭಗವದ್ಗೀತೆ, ರಾಮಾಯಣ, ಭಜನೆ, ಸತ್ಸಂಗಗಳು, ಪ್ರವಚನಗಳನ್ನು ನಿರಂತರವಾಗಿ ನಡೆಸಿಕೊಡುತ್ತಿದ್ದು, ವಿಶೇಷವಾಗಿ ಮಕ್ಕಳಿಗೆ ನೀಡುತ್ತಿರುವ ಧಾರ್ಮಿಕ ಶಿಕ್ಷಣ ಸರ್ವ ಶ್ರೇಷ್ಠವಾದುದು. ಮಂಗಳೂರಿನಲ್ಲಿ ನಿಧಿ ಬಿಲ್ಡರ್ಸ್ ಮಾಲೀಕರಾಗಿರುವ ಪ್ರಶಾಂತ್ ಸನಿಲ್ ಹಾಗೂ ಬೆಂಗಳೂರಿನಲ್ಲಿ ಖ್ಯಾತ ಉದ್ಯಮಿಯಾಗಿರುವ ಶರತ್ ಚಂದ್ರ ಸನಿಲ್ ಎಂಬ ಪುತ್ರರು ಇವರಿಗಿದ್ದಾರೆ. ಗುರು ಪೂರ್ಣಿಮೆಯ ದಿನ ಗುರುಗಳನ್ನು ಭೇಟಿ ಮಾಡಿ ಆಶೀರ್ವಾದ ಪಡೆದುಕೊಂಡಿದ್ದು ಅತೀವ ಖುಷಿ ತಂದಿದ್ದು, ಗುರುಗಳ ಮಾರ್ಗದರ್ಶನ, ಸಲಹೆ, ಸೂಚನೆಯನ್ನು ಪಾಲಿಸುವುದು ನಮ್ಮ ಕರ್ತವ್ಯ ಎಂದು ಭಾವಿಸುತ್ತೇನೆ ಎಂದರು.
ಈ ಸಂದರ್ಭದಲ್ಲಿ ಗಣೇಶ್ ಕುಲಾಲ್, ತಾರಾನಾಥ್ ಉರ್ವ, ಗೌತಮ್ ಸಾಲ್ಯಾನ್, ರಾಕೇಶ್ ಸಾಲ್ಯಾನ್, ಸಾಯಿಪ್ರಸಾದ್ ಶೆಟ್ಟಿ ಹಾಗೂ ಮಾಧವ ಸುವರ್ಣರ ಕುಟುಂಬಸ್ಥರು, ಮತ್ತಿತರರು ಉಪಸ್ಥಿತರಿದ್ದರು.