canaratvnews

ರಾಜ್ಯ ಸರ್ಕಾರದ ಭ್ರಷ್ಟಾಚಾರಕ್ಕೆ ಕಾಂಗ್ರೆಸ್ ಶಾಸಕರಿಂದಲೇ ಸರ್ಟಿಫಿಕೇಟ್ :- ಶಾಸಕ ಕಾಮತ್

ಮಂಗಳೂರು ಜೂನ್ 24 ರಾಜ್ಯ ಸರ್ಕಾರದ ಭ್ರಷ್ಟಾಚಾರ ಇಷ್ಟು ದಿನ ಒಳಗೊಳಗೆ ನಡೆಯುತ್ತಿದ್ದ   ಕಮಿಷನ್‌ ಅವ್ಯವಹಾರ ಇದೀಗ ಬಹಿರಂಗವಾಗಿಯೇ ನಡೆಯಲಾರಂಭಿಸಿದ್ದು ಸರ್ಕಾರದ ಹುಳುಕುಗಳೆಲ್ಲ ಬೀದಿಗೆ ಬಂದು ಜನಸಾಮಾನ್ಯರೂ ಸಹ ಹೇಸಿಗೆ ಪಟ್ಟುಕೊಳ್ಳುವಷ್ಟರ ಮಟ್ಟಿಗೆ ರಾಜ್ಯದ ಆಡಳಿತ ಹದಗೆಟ್ಟಿದೆ ಎಂದು ಶಾಸಕ ವೇದವ್ಯಾಸ ಕಾಮತ್ ರವರು ಆರೋಪಿಸಿದರು. 

ರಾಜ್ಯದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದಿಂದ ಸ್ವತಃ ಕಾಂಗ್ರೆಸ್ಸಿನ ಹಿರಿಯ ನಾಯಕರುಗಳೇ ಬೇಸತ್ತಿದ್ದು ಇದೀಗ ನೇರವಾಗಿ ಸರ್ಕಾರದ ವಿರುದ್ಧ ವಾಗ್ದಾಳಿ ಆರಂಭಿಸಿದ್ದಾರೆ. ಬಡವರಿಗಾಗಿ ಇರುವ ಹೌಸಿಂಗ್ ಬೋರ್ಡ್‌ ಲಂಚಕೋರರ ಅಡ್ಡೆಯಾಗಿದ್ದು, ಕಮಿಷನ್‌ ಕೊಟ್ಟವರಿಗೆ ಮಾತ್ರ ಮನೆ ನೀಡಲಾಗಿದೆ ಎಂದು ಬಿ.ಆರ್ ಪಾಟೀಲ್ ರವರು ಆರೋಪಿಸಿದರೆ, ಕಂದಾಯ ಸಚಿವ ಕೃಷ್ಣ ಬೈರೇಗೌಡರು, “ಸರ್ಕಾರಿ ಕಚೇರಿಗಳಲ್ಲಿ ಯಾವ ಕೆಲಸಕ್ಕೆ ಎಷ್ಟು ಲಂಚ ಎಂಬುದನ್ನು ಬೋರ್ಡ್ ಹಾಕಿಕೊಂಡು ಬಿಡಿ” ಎಂದು ಹತಾಶೆ ವ್ಯಕ್ತಪಡಿಸಿದ್ದಾರೆ. ನಾನೊಬ್ಬ ಆಡಳಿತ ಪಕ್ಷದ ಶಾಸಕನಾಗಿದ್ದುಕೊಂಡು ಒಂದು ಚರಂಡಿ, ರಸ್ತೆ ನಿರ್ಮಿಸಲು ಸಹ ಸಾಧ್ಯವಾಗುತ್ತಿಲ್ಲ ಎಂದು ಎನ್.‌ ವೈ. ಗೋಪಾಲಕೃಷ್ಣ ಆಕ್ರೋಶ ತೋರಿಸಿದರೆ, ರಾಜ್ಯದಲ್ಲಿ ಆಡಳಿತ ಸಂಪೂರ್ಣ ವಿಫಲವಾಗಿದ್ದು, ಎರಡು ವರ್ಷದಿಂದ ಯಾವುದೇ ಅನುದಾನ ಸಿಗುತ್ತಿಲ್ಲ. ರಾಜೀನಾಮೆ ಕೊಟ್ಟು ಹೋಗುವ ಪರಿಸ್ಥಿತಿ ಇದೆ ಎಂದು ರಾಜು ಕಾಗೆಯವರು ಅಳಲು ತೋಡಿಕೊಂಡಿದ್ದಾರೆ. ಅಲ್ಲದೇ ಈ ಸರ್ಕಾರದ ಭ್ರಷ್ಟಾಚಾರಗಳ ಬಗ್ಗೆ ತನಿಖೆ ನಡೆಯಲಿ, ಅದಕ್ಕೂ ಮೊದಲು ಜಮೀರ್ ಅಹ್ಮದ್ ರಾಜೀನಾಮೆ ಕೊಡಲಿ ಎಂದು ಬೇಳೂರು ಗೋಪಾಲ ಕೃಷ್ಣರವರು ತಮ್ಮದೇ ಸರ್ಕಾರವನ್ನು ಆಗ್ರಹಿಸಿದ್ದು ಇಡೀ ಸರ್ಕಾರದ ಬಂಡವಾಳವೇ ಬಯಲಾಗಿದೆ ಎಂದು ಶಾಸಕರು ಹೇಳಿದರು.

ಸ್ವತಃ ಮುಖ್ಯಮಂತ್ರಿಗಳೇ ಎಲ್ಲಾ ಅಕ್ರಮಗಳಿಗೆ ಗಾಡ್‌ ಫಾದರ್‌ ಆಗಿ ನಿಂತಿರುವಾಗ ಇನ್ನು ಭ್ರಷ್ಟರಿಗೆ ಯಾವ ಭಯ? ವಿಪಕ್ಷದವರಾದ ನಾವು ಹೇಳಿದರೆ ರಾಜಕೀಯ ಎನ್ನುವ ಕಾಂಗ್ರೆಸ್ಸಿಗರು ಈಗೇನು ಹೇಳುತ್ತಾರೆ? ಇನ್ನೂ ಸಹ ಯಾವ ಮುಖ ಇಟ್ಟುಕೊಂಡು ಆಡಳಿತ ನಡೆಸುತ್ತಿದ್ದಾರೆ? ಕಿಂಚಿತ್ತಾದರೂ ಮರ್ಯಾದೆ ಉಳಿದಿದ್ದರೆ ಕೂಡಲೇ ರಾಜ್ಯದ ಜನತೆಯ ಕ್ಷಮೆಯಾಚಿಸಿ ರಾಜೀನಾಮೆ ಕೊಟ್ಟು ತೊಲಗಲಿ ಎಂದು ಶಾಸಕ ಕಾಮತ್ ಆಗ್ರಹಿಸಿದರು.

Share News
Exit mobile version