ಬೆಂಗಳೂರು: ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕಳೆದ ಮೂರು ವರ್ಷಗಳಲ್ಲಿ ಆರಂಭಗೊಂಡಿರುವ ಐಟಿ/ಬಿಟಿ ಕಂಪನಿಗಳು, ಸ್ಟಾರ್ಟ್‌ಅಪ್‌ಗಳು ಮತ್ತು ಈ ಕ್ಷೇತ್ರದಲ್ಲಿ ಆಗಿರುವ ಬಂಡವಾಳ ಹೂಡಿಕೆಯ ಕುರಿತು ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್ ಅವರು ಬಜೆಟ್ ಅಧಿವೇಶನದಲ್ಲಿ ಸರ್ಕಾರದ ಗಮನ ಸೆಳೆದರು.

ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ಉದ್ದೇಶಿಸಿ ಮಾತನಾಡಿದ ಶಾಸಕರು, ರಾಜ್ಯಾದ್ಯಂತ ಎಷ್ಟು ಹೊಸ ಒಡಂಬಡಿಕೆಗಳು (MoUs) ನಡೆದಿವೆ ಮತ್ತು ಜಿಲ್ಲಾವಾರು ಎಷ್ಟು ಜನರಿಗೆ ಉದ್ಯೋಗಾವಕಾಶಗಳು ಲಭ್ಯವಾಗಿವೆ ಎಂಬ ಬಗ್ಗೆ ಸಮಗ್ರ ಮಾಹಿತಿ ನೀಡುವಂತೆ ಒತ್ತಾಯಿಸಿದರು.
ವಿಶೇಷವಾಗಿ ಕರಾವಳಿ ಭಾಗದಲ್ಲಿ ಐಟಿ-ಬಿಟಿ ಉದ್ಯಮದ ಬೆಳವಣಿಗೆಗೆ ರಾಜ್ಯ ಸರ್ಕಾರ ಕೈಗೊಂಡಿರುವ ಕ್ರಮಗಳೇನು ಎಂದು ಪ್ರಶ್ನಿಸಿದ ಕಾಮತ್, ಮಂಗಳೂರಿನಂತಹ ಶೈಕ್ಷಣಿಕ ಹಬ್‌ನಲ್ಲಿ ಉದ್ಯೋಗ ಸೃಷ್ಟಿಗೆ ಹೆಚ್ಚಿನ ಒತ್ತು ನೀಡಬೇಕಾದ ಅಗತ್ಯವನ್ನು ಪ್ರತಿಪಾದಿಸಿದರು.
ಇದೇ ಸಂದರ್ಭದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಅವರ ಹೇಳಿಕೆಗಳನ್ನು ಉಲ್ಲೇಖಿಸಿದ ಶಾಸಕರು, “ಮಾನ್ಯ ಸಚಿವರು ಹೊರಗೆ ಮಾತನಾಡುವಾಗ ಮಂಗಳೂರಿನಲ್ಲಿ ಮೂಲಸೌಕರ್ಯಗಳ ಕೊರತೆಯಿದೆ ಅಥವಾ ಏನೂ ಇಲ್ಲ ಎನ್ನುವಂತೆ ಮಾತನಾಡುತ್ತಾರೆ. ಆದರೆ ಸದನದಲ್ಲಿ ಉತ್ತರಿಸುವಾಗ ಎಲ್ಲವೂ ಇದೆ ಎಂದು ಹೇಳುತ್ತಾರೆ. ಇಂತಹ ದ್ವಂದ್ವ ನಿಲುವುಗಳು ಜಿಲ್ಲೆಯ ಅಭಿವೃದ್ಧಿಗೆ ಪೂರಕವಲ್ಲ,” ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕರಾವಳಿ ಭಾಗದ ಯುವಜನತೆಗೆ ಸ್ಥಳೀಯವಾಗಿಯೇ ಉದ್ಯೋಗ ಸಿಗುವಂತಾಗಲು ಸರ್ಕಾರ ಸ್ಪಷ್ಟವಾದ ನೀತಿ ಮತ್ತು ಹೆಚ್ಚಿನ ಬಂಡವಾಳ ಹೂಡಿಕೆಗೆ ಉತ್ತೇಜನ ನೀಡಬೇಕು ಎಂದು ಅವರು ಈ ಸಂದರ್ಭದಲ್ಲಿ ಆಗ್ರಹಿಸಿದರು.