canaratvnews

*ಅಕ್ರಮ-ಸಕ್ರಮ ಜಮೀನಿನ ಅರಣ್ಯ–ಕಂದಾಯ ಭೂ ಗಡಿ ಪ್ಲಾಟಿಂಗ್ ಮಾಡುವಂತೆ ಶಾಸಕ ಕಿಶೋರ್ ಕುಮಾರ್ ಪುತ್ತೂರು ಆಗ್ರಹ*

ಬೆಂಗಳೂರು: ಕರಾವಳಿ ಜಿಲ್ಲೆಗಳ ರೈತರು ಎದುರಿಸುತ್ತಿರುವ ಅರಣ್ಯ ಮತ್ತು ಕಂದಾಯ ಭೂಮಿಯ ಗಡಿ ವಿವಾದವನ್ನು ತಕ್ಷಣವೇ ಬಗೆಹರಿಸಿ, ಜಮೀನಿನ ಪ್ಲಾಟಿಂಗ್ (ಪೋಡಿ) ಪ್ರಕ್ರಿಯೆಯನ್ನು ಪೂರ್ಣಗೊಳಿಸುವಂತೆ ಪುತ್ತೂರು ಶಾಸಕ ಕಿಶೋರ್ ಕುಮಾರ್ ಅವರು ವಿಧಾನ ಪರಿಷತ್ತಿನ ಅಧಿವೇಶನ ದಲ್ಲಿ ಸರ್ಕಾರವನ್ನು ಒತ್ತಾಯಿಸಿದರು.

ಅಧಿವೇಶನದಲ್ಲಿ ಅರಣ್ಯ ಸಚಿವರ ಉತ್ತರಕ್ಕೆ ಪ್ರತಿಯಾಗಿ ಮಾತನಾಡಿದ ಶಾಸಕರು, “ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ದಶಕಗಳಿಂದ ಕೃಷಿ ಮಾಡುತ್ತಿರುವ ರೈತರಿಗೆ ಬಗರ್ ಹುಕುಂ ಸಮಿತಿಯ ಮೂಲಕ ಹಕ್ಕುಪತ್ರ ನೀಡಲಾಗಿದ್ದರೂ, ಅರಣ್ಯ ಮತ್ತು ಕಂದಾಯ ಭೂಮಿಯ ಗಡಿ ಸ್ಪಷ್ಟವಾಗಿ ಗುರುತಿಸದ ಕಾರಣ ರೈತರು ತೀವ್ರ ಸಂಕಷ್ಟದಲ್ಲಿದ್ದಾರೆ,” ಎಂದು ಸದನದ ಗಮನ ಸೆಳೆದರು.. ದಾಖಲೆಗಳಲ್ಲಿನ ಗೊಂದಲ: ಹಕ್ಕುಪತ್ರ ಸಿಕ್ಕಿದ್ದರೂ, ಜಮೀನು ಪೋಡಿಯಾಗದ ಕಾರಣ ಪಹಣಿ ಪತ್ರಿಕೆಯಲ್ಲಿ (RTC) ‘ಭಾಗಶಃ ಅರಣ್ಯ ಪ್ರದೇಶ’ ಎಂದು ನಮೂದಾಗುತ್ತಿದೆ. ಇದರಿಂದ ರೈತರು ತಮ್ಮ ಜಮೀನಿನ ಮೇಲೆ ಸಂಪೂರ್ಣ ಹಕ್ಕು ಚಲಾಯಿಸಲು ಸಾಧ್ಯವಾಗುತ್ತಿಲ್ಲ.
ರೈತರ ಹಿತದೃಷ್ಟಿಯಿಂದ ಸರ್ಕಾರವು ಕೂಡಲೇ ಕಂದಾಯ ಮತ್ತು ಅರಣ್ಯ ಇಲಾಖೆಯ ಜಂಟಿ ಸರ್ವೇ ನಡೆಸಿ, ಗಡಿಗಳನ್ನು ಸ್ಪಷ್ಟವಾಗಿ ಗುರುತಿಸಬೇಕು. ಅರ್ಹ ಫಲಾನುಭವಿಗಳಿಗೆ ಪೂರ್ಣ ಪ್ರಮಾಣದ ಹಕ್ಕು ಸಿಗುವಂತೆ ಪ್ಲಾಟಿಂಗ್ ಪ್ರಕ್ರಿಯೆಯನ್ನು ಕಾಲಮಿತಿಯಲ್ಲಿ ಮುಗಿಸಬೇಕು ಎಂದು ಕಿಶೋರ್ ಕುಮಾರ್ ಪುತ್ತೂರು ಅವರು ಆಗ್ರಹಿಸಿದರು.
Share News
Exit mobile version