• Home  
  • ಧಾರ್ಮಿಕ ಕೇಂದ್ರಗಳ ಅಭಿವೃದ್ದಿ ಮಾಡುವುದೇ ನಿಜವಾದ ಹಿಂದುತ್ವ: ಶಾಸಕ ಅಶೋಕ್ ರೈ
- DAKSHINA KANNADA - HOME

ಧಾರ್ಮಿಕ ಕೇಂದ್ರಗಳ ಅಭಿವೃದ್ದಿ ಮಾಡುವುದೇ ನಿಜವಾದ ಹಿಂದುತ್ವ: ಶಾಸಕ ಅಶೋಕ್ ರೈ

ಪುತ್ತೂರು: ಧಾರ್ಮಿಕ ಕೇಂದ್ರಗಳಿಗೆ ಬಂದು ಹಿಂದುತ್ವದ ಭಾಷಣ ಮಾಡಿ, ಶಾಲು ಹಾಕಿಸಿಕೊಳ್ಳುವುದು ಹಿಂದುತ್ವವಲ್ಲ, ಹಿಂದೂ ಧಾರ್ಮಿಕ ಕೇಂದ್ರಗಳನ್ನು ಅಭಿವೃದ್ದಿ ಮಾಡುವುದೇ ನಿಜವಾದ ಹಿಂದುತ್ವವಾಗಿದೆ ಎಂದು ಪುತ್ತೂರು ಶಾಸಕ ಅಶೋಕ್ ರೈ ಹೇಳಿದರು. ಅವರು ಪಡ್ಡಾಯೂರು ಶ್ರೀ ಅನ್ನಪೂರ್ಣೇಶ್ವರಿ ಭಜನಾಮಂದಿರದಲ್ಲಿ ೫ ಲಕ್ಷ ರೂವೆಚ್ಚದಲ್ಲಿ ನಿರ್ಮಾಣವಾದ ತಡೆಗೋಡೆಯನ್ನು ಉದ್ಘಾಟಿಸಿ ಮಾತನಾಡಿದರು.

ಹಿಂದುತ್ವದ ಬಗ್ಗೆ ಎಷ್ಟೋ ವರ್ಷಗಳಿಂದ ವೇದಿಕೆ ಸಿಕ್ಕಾಗಲೆಲ್ಲಾ ಭಾಷಣ ಮಾಡಿ ಅಧಿಕಾರಕ್ಕೇರಿದವರು ಇಲ್ಲಿನ ದೇವಸ್ಥಾನ, ದೈವಸ್ಥಾನ, ಕಟ್ಟೆಗಳ ಅಭಿವೃದ್ದಿ ಮಾಡಿಲ್ಲ, ಸರಕಾರಿ ಜಾಗದಲ್ಲಿರುವ ಧಾರ್ಮಿಕ ಕೇಂದ್ರಗಳ ಜಾಗದ ದಾಖಲೆಗಳನ್ನು ಸರಿ ಮಾಡಿಲ್ಲ, ದೇವ ಮಂದಿರದ ಸ್ಥಳವನ್ನು ದೇವರ ಹೆಸರಿಗೆ ಮಾಡಿಲ್ಲ, ಇಷ್ಟು ವರ್ಷ ಕೇವಲ ಭಾಷಣ ಮಾತ್ರ ಮಾಡಿ ಶಾಲು ಹಾಕಿಸಿ, ಹೊಟ್ಟೆ ತುಂಬಾ ತಿಂದು , ನಯಾ ಪೈಸೆ ಕೊಡದೆ ವೇದಿಕೆಯಿಂದ ತೆರಳಿದ್ದು ಮಾತ್ರ ಎಂದು ಶಾಸಕರು ವ್ಯಂಗ್ಯವಾಡಿದರು.

ಧಾರ್ಮಿಕ ಕೇಂದ್ರಗಳು ಮತ್ತು ಶಾಲೆಗಳಲ್ಲಿ ಎಂದೂ ರಾಜಕೀಯ ಮಾಡಬಾರದು, ರಾಜಕೀಯ ಪ್ರವೇಶ ಮಾಡಿದರೆ ಈ ಎರಡೂ ಕ್ಷೇತ್ರಗಳು ಹಾಳಾಗುತ್ತದೆ ಎಂಬ ಪರಿಜ್ಞಾನ ನಮ್ಮಲ್ಲಿರಬೇಕು. ನನ್ನ ವಿಧಾನಸಭಾ ಕ್ಷೇತ್ರದಲ್ಲಿರುವ ಸರಕಾರಿ ಜಾಗದಲ್ಲಿರುವ ಎಲ್ಲಾ ಧರ್ಮದವರ ಧಾರ್ಮಿಕ ಕೇಂದ್ರಗಳನ್ನು ಸಕ್ರಮೀಕರಣಗೊಳಿಸಿ ಆ ಜಾಗವನ್ನು ಆಯಾ ಧಾರ್ಮಿಕ ಕೇಂದ್ರಗಳ ಹೆಸರಿಗೆ ಮಾಡಿಸಿಕೊಡುವ ಕನಸು ಹೊಂದಿದ್ದು ಅದು ಸಾಕಾರಗೊಳ್ಳಲು ಜನತೆಯ ಸಹಕಾರವೂ ಬೇಕಾಗಿದೆ ಎಂದು ಹೇಳಿದರು.

ಇಂದು ಮಕ್ಕಳು ತಮ್ಮ ತಂದೆ ತಾಯಿಯನ್ನು ಆಶ್ರಮಗಳಲ್ಲಿ ದಾಖಲಿಸುವುದು ಒಂದು ಫ್ಯಾಷನ್ ಆಗಿ ಮುಂದುವರೆಯುತ್ತಿದೆ ಇದು ಅತ್ಯಂತ ಅಪಾಯಕಾರಿ ಬೆಳವಣಿಗೆಯಾಗಿದೆ. ಹೆತ್ತು ಹೊತ್ತು ಸಾಕಿದ ತಂದೆ ತಾಯಿಯನ್ನು ಅವರ ಉಸಿರು ಇರುವ ತನಕ ಆರೈಕೆ ಮಾಡುವ ಮಕ್ಕಳು ನಮ್ಮ ಮಕ್ಕಳಾಗಬೇಕು ಎಂಬ ಉದ್ದೇಶದಿಂದ ಮಕ್ಕಳಿಗೆ ಶಿಕ್ಷಣದ ಜೊತೆಗೆ ಸಂಸ್ಕಾರವನ್ನು ಕಲಿಸಬೇಕು ಇಲ್ಲವಾದರೆ ನಾವು ಯಾರದ್ದೋ ಮಡಿಲಲ್ಲಿ ಪ್ರಾಣ ಬಿಡಬೇಕಾದ ಅನಿವಾರ್ಯತೆ ಬರಬಹುದು ಅದಕ್ಕಾಗಿ ಈಗಲೇ ಎಚ್ಚರವಾಗಿರಬೇಕು ಎಂದು ಶಾಸಕರು ಹೇಳಿದರು.

ಅಶೋಕಜನಮನಕ್ಕೆ ಬನ್ನಿ

ಅ. ೨೦ ರಂದು ಕೊಂಬೆಟ್ಟು ತಾಲೂಕು ಕ್ರೀಡಾಂಗಣದಲ್ಲಿ ನಡೆಯುವ ಅಶೋಕಜನಮನ ದೀಪಾವಳಿ ಕಾರ್ಯಕ್ರಮಕ್ಕೆ ಕುಟುಂಬ ಸಮೇತರಾಗಿ ಬಂದು ಆಶೀರ್ವಾದ ಮಾಡಬೇಕು ಎಂದು ಶಾಸಕರು ಸಭೆಯಲ್ಲಿ ಮನವಿ ಮಾಡಿದರು. ಈ ಬರಿ ಸೀರೆಯ ಬಲದಾಗಿ ಒಂದು ದೊಡ್ಡ ಟವೆಲ್ ಜೊತೆಗೆ ಮನೆಗೆ ಉಪಯೋಗವಾಗುವ ಪಾತ್ರೆಗಳನ್ನು ನೀಡುತ್ತಿದ್ದೇನೆ. ನನ್ನಲ್ಲಿ ಶಕ್ತಿ ಇರುವ ತನಕ ನಾನು ಬಡವರ ಸೇವೆ ಮಾಡುತ್ತೇನೆ. ನನ್ನ ಕಚೇರಿಗೆ ಬರುವ ಪ್ರತೀಯೊಬ್ಬರಿಗೂ ನ್ಯಾಯ ಕೊಡಿಸುವ ಕೆಲಸವನ್ನು ಮಾಡುತ್ತೇನೆ. ನಾನು ದುಡ್ಡು ಇದ್ದು ಜನಮನ ಕಾರ್ಯಕ್ರಮ ಮಾಡುತ್ತಿಲ್ಲ, ಬಡವರ ಸೇವೆ ಮಾಡಬೇಕು ಅವರ ಮನಸ್ಸು ಸಂತೋಷಗೊಳಿಸಬೇಕು ಎಂಬ ಉದ್ದೇಶದಿಂದ ಮಾಡುತ್ತಿದ್ದೇನೆ ಹೊರತು ಯಾವುದೇ ರಾಜಕೀಯ ಉದ್ದೇಶ ಇದರ ಹಿಂದೆ ಇಲ್ಲ. ನಿಮ್ಮ ಆಶೀರ್ವಾದವೇ ನನಗೆ ಶಕ್ತಿಯಾಗಲಿದೆ ಎಂಬ ಪೂರ್ಣ ನಂಬಿಕೆ ನನಗಿದೆ ಎಂದು ಶಾಸಕರು ಮಾರ್ಮಿಕವಾಗಿ ಹೇಳಿದರು.

ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಅಭಿವೃದ್ದಿ ವಿಚಾರದಲ್ಲಿ ಶಾಸಕರು ಓವರ್ ಸ್ಪೀಡಲ್ಲಿ ಕೆಲಸ ಮಾಡುತ್ತಿದ್ದಾರೆ. ಪ್ರತೀ ದಿನ ನಮ್ಮನ್ನು ಬೆನ್ನು ಬಿಡದೆ ದೇವರ ಕೆಲಸ ಮಾಡಿಸುತ್ತಿದ್ದು ಇದು ನಮಗೆ ಅತ್ಯಂತ ಸಂತೋಷವನ್ನು ತಂದಿದೆ. ಅಶೋಕ್ ರೈ ಅವರಂತ ಶಾಸಕರನ್ನು ಪಡೆಯಲು ನಾವು ಪುಣ್ಯ ಮಾಡಿರಬೇಕು. ಇವರ ಹಾಗೆ ಈ ಹಿಂದೆಯೂ ಯರೂ ಬಂದಿಲ್ಲ ಮುಂದಕ್ಕೂ ಇವರಂಥ ಶಾಸಕರು ದೇವರಾಣೆಗೂ ಬರುವುದಿಲ್ಲ. ಪುತ್ತೂರಿನ ಅಭಿವೃದ್ದಿಗೆ ಟೊಂಕ ಕಟ್ಟಿ ನಿಂತಿರುವ ಶಾಸಕರಿಗೆ ನಮ್ಮೆಲ್ಲರ ಬೆಂಬಲ ಅಗತ್ಯವಾಗಿದೆ.

ಪಂಜಿಗುಡ್ಡೆ ಈಶ್ವರಭಟ್, ಅಧ್ಯಕ್ಷರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ವ್ಯವಸ್ಥಾಪನಾ ಸಮಿತಿ

ಛಲಬಿಡದ ಯುವಕ ಲೋಕೇಶ್ ಪಡ್ಡಾಯೂರು ನಗರ ವಲಯ ಕಾಂಗ್ರೆಸ್ ಅಧ್ಯಕ್ಷರಾದ ಲೋಕೇಶ್ ಪಡ್ಡಾಯೂರು ಅವರು ಇಲ್ಲಿನ ಭಜನಾಮಂದಿರದ ಆವರಣಗೋಡೆ ನಿರ್ಮಾಣಕ್ಕೆ ಕಾರಣ ಕರ್ತರು, ಇವರು ನನ್ನ ಬೆನ್ನು ಬಿದ್ದು ಈ ಕೆಲಸವನ್ನು ಮಾಡಿದ್ದಾರೆ. ತನ್ನ ಊರು ಅಭಿವೃದ್ದಿಯಾಗಬೇಕು ಎಂಬ ಛಲ ಎಲ್ಲರಲ್ಲೂ ಇರಬೇಕು ಲೋಕೇಶ್ ಎಲ್ಲರಿಗೂ ಮಾದರಿ ಎಂದು ಶಸಕರು ಅಭಿನಂದಿಸಿದರು.

ವೇದಿಕೆಯಲ್ಲಿ ಅನ್ನ ಪೂರ್ಣೇಶ್ವರಿ ಭಜನಾಮಂದಿರದ ಅಟಧ್ಯಕ್ಷ ಗಣೇಶ್ ಗೌಡ, ಗೌರವಾಧ್ಯಕ್ಷ ರಾಮಣ್ಣ ಗೌಡ, ಪ್ರಗತಿಪರ ಕೃಷಿಕ ಗರಿಶ್ಚಂದ್ರ ಗೌಡ, ರುದ್ರ ನೇತೃ ಯುವಕಮಂಡಲ ಅಧ್ಯಕ್ಷ ಆಕಾಶ್ ನಾಯ್ಕ, ಸದಸ್ಯರಾದ ವೀಣಾ ಭಾಸ್ಕರ, ನಗರ ವಲಯ ಕಾಂಗ್ರೆಸ್ ಅಧ್ಯಕ್ಷ ಲೋಕೇಶ್ ಪಡ್ಡಾಯೂರು,ಹರೀಶ್ ಬಂಗೇರ ಪಡ್ಡಾಯೂರು, ವಿಶ್ವ ಪಡ್ಡಾಯೂರು, ಯತೀಶ್ ಪಡ್ಡಾಯೂರು, ಪ್ರವೀಣ್ ಗೌಡ ಪಡ್ಡಾಯೂರು,ನಗರ ವಲಯ ಮಹಿಳಾ ಕಾಂಗ್ರೆಸ್ ಘಟಕದ ಅಧ್ಯಕ್ಷ ಚಂದ್ರಿಕಾ ಉಪಸ್ಥಿತರಿದ್ದರು.ಶಿವರಾಂ ನೆಲಪ್ಪಾಲು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

Share News

About Us

Lorem ipsum dol consectetur adipiscing neque any adipiscing the ni consectetur the a any adipiscing.

Email Us: [email protected]

Contact: +5-784-8894-678