ಪುತ್ತೂರು: ಈ ದೇಶವನ್ನಾಳಿದ ಕಾಂಗ್ರೆಸ್ ಸರಕಾರ ಪ್ರತೀ ಬಾರಿಯೂ ಬಡವರ ಪರ ಸರಕಾರವಾಗಿತ್ತು, ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಡವರ ಪರವಾಗಿದೆ, ರಾಜ್ಯದಲ್ಲಿ ಸುಮಾರು ೧೫ ಸಾವಿರ ಪೌರ ಕಾರ್ಮಿಕರನ್ನು ಖಾಯಂಗೊಳಿಸುವ ಮೂಲಕ ನಾವು ಬಡವರ ಪರ ಎಂದು ಎತ್ತಿ ತೋರಿಸಿದೆ ಬೇರೆ ಪಕ್ಷದವರು ಬರೇ ರೈಲೇ ಬಿಡುವುದು ಎಂದು ಪುತ್ತೂರು ಶಾಸಕ ಅಶೋಕ್ ರೈ ಹೇಳಿದರು.
ಅವರು ಪುತ್ತೂರು ಶಾಸಕರ ಸಭಾಭವನದಲ್ಲಿಖಾಯಂಗೊಂಡ ಪುತ್ತೂರು ನಗರಸಭೆಯಪೌರ ಕಾರ್ಮಿಕರಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಪುತ್ತೂರಲ್ಲಿ ಅನೇಕ ಮಂದಿ ಶಾಸಕರಿದ್ದರು, ಕೆಲವರು ಕೆಲಸ ಮಾಡಿದ್ದಾರೆ. ಈ ಪೈಕಿ ಹೆಚ್ಚು ಅಭಿವೃದ್ದಿ ಆಗಿರುವುದು ಕಾಂಗ್ರೆಸ್ ಶಾಸಕರ ಅವಧಿಯಲ್ಲಿ ಮಾತ್ರ. ಕಾಂಗ್ರೆಸ್‌ಗೆ ಬಡವರ ಬಗ್ಗೆ ಕಾಳಜಿ ಇದೆ, ಬೇರೆ ಪಕ್ಷದವರಿಗೆ ಬಡವರ ವೋಟು ಮಾತ್ರ ಬೇಕಾಗಿರುವುದು ಅಧಿಕಾರದಲ್ಲಿದ್ದಾಗ ಹಾಗೆ ಮಾಡ್ತೇನೆ ಹೀಗೇ ಮಾಡ್ತೇನೆ ಎಂದು ರೈಲು ಮಾತ್ರ ಬಿಡುತ್ತಾರೆ ಎಂದು ಪರೋಕ್ಷವಾಗಿ ಬಿಜೆಪಿಯನ್ನು ವ್ಯಂಗ್ಯ ಮಾಡಿದರು.
ಪುತ್ತೂರು ನಗರಸಭೆಯಲ್ಲಿ ಪೌರ ಕಾರ್ಮಿಕರನ್ನು ಖಾಯಂಗೊಳಿಸಬೇಕು ಎಂಬ ಬೇಡಿಕೆ ಇತ್ತು. ಇದರ ಬಗ್ಗೆ ವಿಧಾನಸಭಾ ಅಧಿವೇಶನದಲ್ಲಿ ನನು ಮಾತನಾಡಿದ್ದೆ, ನನ್ನ ಮಾತಿಗೆ ಆಡಳಿತ ಪಕ್ಷದ ಶಾಸಕರು ಬೆಂಬಲ ನೀಡಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಂದೆಂದೂ ಬಡವರ ಪರವೇ ಇರುವ ಕಾರಣಕ್ಕೆ ಇಂದು ೧೫ ಸಾವಿರ ಪೌರ ಕಾರ್ಮಿಕರು ತಮ್ಮ ವೃತ್ತಿಯಲ್ಲಿ ಖಾಯಂ ಆಗಿ ನೇಮಕವಾಗುವಂತಾಗಿದೆ ಎಂದು ಹೇಳಿದರು.
ಪೌರ ಕಾರ್ಮಿಕರನ್ನು ಎಲ್ಲರೂ ಗೌರವದಿಂದ ಕಾಣಬೇಕು. ಅವರಿಗೆ ನಾವು ಸಹಕಾರವನ್ನು ನೀಡಬೇಕು. ಒಂದು ವಾರ ಎಲ್ಲಿಯಾದರೂ ಪೌರ ಕಾರ್ಮಿಕರು ರಜೆ ಮಾಡಿದ್ದಲ್ಲಿ ಪುತ್ತೂರಲ್ಲಿ ಯಾರಿಗೂ ನಡೆದಾಡಲು ಸಾಧ್ಯವಿಲ್ಲ. ಸಮಾಜಕ್ಕೆ ಅವರು ಅಷ್ಟೊಂದು ಬೇಕಾದವರಾದ ಕಾರಣ ಅವರನ್ನು ಗೌರವಯುತವಾಗಿ ನಡೆಸಿಕೊಳ್ಳುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದು ಶಾಸಕರು ಹೇಳಿದರು.
ರಾಜ್ಯ ಸರಕಾರದ ಪಂಚ ಗ್ಯಾರಂಟಿ ಯೋಜನೆಯಿಂದ ಅನೇಕ ಬಡ ಕುಟುಂಬಗಳು ಇಂದು ನೆಮ್ಮದಿಯಿಂದ ಇದೆ. ಪುತ್ತೂರು ನಗರಸಭೆಯಲ್ಲಿ ಕೆಲವು ಚಾಲಕರಿಗೆ ಇನ್ನೂ ಖಾಯಮಾತಿ ಆಗಿಲ್ಲ ಎಂಬ ವಿಚಾರ ಗೊತ್ತಾಗಿದೆ ಮುಂದಿನ ದಿನಗಳಲ್ಲಿ ಅವರಿಗೂ ಖಾಯಂ ಆಗುವಲ್ಲಿ ಸರಕಾರದ ಗಮನಸೆಳೆಯುತ್ತೇನೆ ಎಂದು ಶಾಸಕರು ಭರವಸೆ ನೀಡಿದರು.ಬಡವರ ಪರ ಇರುವ ಕಾಂಗ್ರೆಸ್ ಸರಕಾರವನ್ನು ಯಾರೂ ಮರೆಯಬಾರದು ಮುಮದಿನ ಚುನಾವಣೆಯಲ್ಲಿ ಅವರ ಕೈ ಗಟ್ಟಿಮಾಡುವ ಕೆಲಸಕ್ಕೆ ಎಲ್ಲರೂ ಸಹಕಾರ ನೀಡಬೇಕು ಎಂದು ಶಾಸಕರು ಮನವಿ ಮಾಡಿದರು.
ಇದೇ ಸಂದರ್ಭದಲ್ಲಿ ಖಾಯಂಗೊಂಡ ಪೌರ ಕಾರ್ಮಿಕರು ಶಾಸಕರಿಗೆ ಸನ್ಮಾನ ಮಾಡಿದರು. ಮೈಸೂರು ಪೇಟ ತೊಡಿಸಿ ಪಲಫುಷ್ಪಗಳನ್ನು ನೀಡಿ ಗೌರವಿಸಿ ಸಹಕಾರ ನೀಡಿದ ಶಾಸಕರು ಹಾಗೂ ಮುಖ್ಯಮಂತ್ರಿಗೆ ಜೈಕಾರ ಘೋಷಣೆ ಕೂಗಿದರು.
ವೇದಿಕೆಯಲ್ಲಿ ನಗರಸಭಾ ಸದಸ್ಯರಾದ ಯೂಸುಫ್ ಡ್ರೀಮ್, ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಮುರಳೀಧರ್ ರೈ ಮಟಂತಬೆಟ್ಟು, ನಗರಸಭಾ ನಾಮ ನಿರ್ದೆಶಿತ ಸದಸ್ಯರಾದ ಶರೀಫ್ ಬಲ್ನಾಡು, ರೋಶನ್ ರೈ ಬನ್ನೂರು, ನಗರಸಭಾ ಆರೋಗ್ಯ ಅಧಿಕಾರಿ ಶ್ವೇತಾ ಉಪಸ್ಥಿತರಿದ್ದರು. ಮುಕೇಶ್ ಕೆಮ್ಮಿಂಜೆ ಸ್ವಾಗತಿಸಿ ವಂದಿಸಿದರು.