canaratvnews

ಅಡಿಕೆಗೆ ಕಾಲ ಕಾಲಕ್ಕೆ ಗೊಬ್ಬರ, ಮದ್ದು ಸಿಂಪಡಣೆಯಿಂದ ಉತ್ತಮ ಇಳುವರಿ ಸಾಧ್ಯ: ಪ್ರದೀಪ್ ಡಿಸೋಜಾ

ವಿಟ್ಲ,ಪೆರುವಾಯಿ: ಜು.20: ರೈತರು ಅಡಿಕೆ ಬೆಳೆಯನ್ನು ಮಾತ್ರ ಅವಲಂಬಿತವಾಗದೆ ಮಿಶ್ರ ಕೃಷಿ ಪದ್ಧತಿ ಅನುಸರಿಸಿದಾಗ ಕೃಷಿಯಲ್ಲಿ ಯಶಸ್ಸುಗಳಿಸಲು ಸಾಧ್ಯ ಎಂದು ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಜೋ ಪ್ರದೀಪ್ ಡಿಸೋಜ ಹೇಳಿದರು.

ಪೆರುವಾಯಿ ಫಾಯಿಮಾ ಮಾತೆಯ ಚರ್ಚ್ ನಲ್ಲಿ ಕೆಥೋಲಿಕ್ ಸಭಾ ಆಯೋಜಿಸಿದ ಕೃಷಿ ಮಾಹಿತಿ ಮತ್ತು ಸಸಿ ವಿತರಣ ಕಾರ್ಯಕ್ರಮದಲ್ಲಿ ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಅವರು ಮಾತನಾಡಿದರು.

ಅಡಿಕೆಯೊಂದಿಗೆ ಕೊಕ್ಕೊ, ಬಾಳೆ, ಕಾಳು ಮೆಣಸು ಬೆಳೆಯಬೇಕು. ಇದರಿಂದ ರೈತರ ಆದಾಯ ಹೆಚ್ಚಾಗುತ್ತದೆ. ಅಡಿಕೆ ಬೆಳೆಗೆ ಸಮಯಕ್ಕೆ ಸರಿಯಾಗಿ ಗೊಬ್ಬರ, ಮದ್ದು ಸಿಂಪಡನೆ ಮಾಡುವುದರಿಂದ ಇಳುವರಿ ಹೆಚ್ಚಿಸಬಹುದು. ಬೆಳೆ ವಿಮೆ ಮಾಡುವುದು ಅಗತ್ಯವಾಗಿದೆ. ಮಲ್ಲಿಗೆ ಕೃಷಿ ಅದಾಯ ಮೂಲಕ್ಕೆ ಪ್ರಮುಖ ಶಕ್ತಿಯಾಗಿದೆ ಎಂದರು.

ಅಡಿಕೆಗೆ ಬಾಧಿಸುವ ಕೊಳೆ ರೋಗ, ಹಳದಿ ಎಲೆ ರೋಗ ಹಾಗೂ ಸುಳಿ ಕೊಳೆ ರೋಗಗಳಿಗೆ ಸಕಾಲದಲ್ಲಿ ಬೋರ್ಡೋ ದ್ರಾವಣ ಅಥವಾ ಶಿಲೀಂಧ್ರನಾಶಕ ಸಿಂಪಡಣೆ ಮಾಡಬೇಕು ಎಂದರು.

ಮಣ್ಣು ಪರೀಕ್ಷೆ ನಡೆಸಿ, ಮಣ್ಣಿನ ಗುಣಮಟ್ಟಕ್ಕೆ ಅನುಗುಣವಾಗಿ ಕೊಟ್ಟಿಗೆ ಗೊಬ್ಬರ, ಹಸಿರೆಲೆ ಗೊಬ್ಬರ ಮತ್ತು ಎನ್‌ಪಿಕೆ (NPK) ರಾಸಾಯನಿಕ ಗೊಬ್ಬರಗಳನ್ನು ಯೋಗ್ಯ ಪ್ರಮಾಣದಲ್ಲಿ ನೀಡಬೇಕು ಎಂದರು.

ಇದೇ ಸಂದರ್ಭದಲ್ಲಿ ವನಮಹೋತ್ಸವದ ಅಂಗವಾಗಿ ಚರ್ಚ್ ಆವರಣದಲ್ಲಿ ಹಣ್ಣಿನ ಗಿಡಗಳನ್ನು ನೆಡಲಾಯಿತು. ಅಲ್ಲದೆ, ವಲಯದ ವಿವಿಧ ಘಟಕಗಳ ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳಿಗೆ ಹಣ್ಣಿನ ಗಿಡಗಳನ್ನು ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಪೆರುವಾಯಿ ಫಾತಿಮಾ ಮಾತೆ ಚರ್ಚಿನ ಧರ್ಮಗುರುಗಳಾದ ವಂದನೀಯ ಫಾದರ್ ಸೈಮನ್ ಡಿಸೋಜ, ವಲಯ ಅಧ್ಯಕ್ಷರಾದ ಲೂವಿಸ್ ಮಸ್ಕರೇನಸ್, ಕಾರ್ಯದರ್ಶಿ ತೋಮಸ್ ಮಸ್ಕರೇನಸ್, ಪೆರುವಾಯಿ ಘಟಕದ ಅಧ್ಯಕ್ಷರು ಹಾಗೂ ವಲಯ ಖಜಾಂಚಿಯಾದ ರಾಲ್ಫ್ ಡಿಸೋಜ ಮತ್ತು ಪೆರುವಾಯಿ ಪರಿಸರ ಆಯೋಗದ ಸಂಚಾಲಕರಾದ ಕೆ. ವಿಲ್ಫ್ರೆಡ್ ಡಿಸೋಜ ಸೇರಿದಂತೆ ವಲಯದ ವಿವಿಧ ಘಟಕಗಳ ಪದಾಧಿಕಾರಿಗಳು ಹಾಗೂ ಕೃಷಿಕರು ಉಪಸ್ಥಿತರಿದ್ದರು. ಕಾರ್ಯಕ್ರಮದ ನಿರೂಪಣೆಯನ್ನು ಮನೋಹರ್ ನಿರ್ವಹಿಸಿದರು

Share News
Exit mobile version