canaratvnews

*ಪಿಲಿನಲಿಕೆ ದಶಮ ಸಂಭ್ರಮಕ್ಕೆ* 25ಸಾವಿರ ಆಸನ ವ್ಯವಸ್ಥೆ* ಸಿನಿಮಾ, ಕ್ರಿಕೆಟ್ ಸೆಲೆಬ್ರಿಟಿಗಳ ದಂಡು.

ಮಂಗಳೂರು: ಪಿಲಿನಲಿಕೆ ಪ್ರತಿಷ್ಠಾನದ ಸಂಸ್ಥಾಪಕ, ಯುವನಾಯಕ ಎಂ. ಮಿಥುನ್ ರೈ ನೇತೃತ್ವದಲ್ಲಿ ನಡೆಯುತ್ತಿರುವ ಪಿಲಿನಲಿಕೆ ಪಂಥಕ್ಕೆ ಹತ್ತನೇ ವರ್ಷದ ಸಂಭ್ರಮವಾಗಿದ್ದು, ಅ.1ರಂದು ನಡೆಯಲಿರುವ ಪಿಲಿನಲಿಕೆ ಪಂಥ-10ಕ್ಕೆ ಮಂಗಳಾ ಸ್ಟೇಡಿಯಂನ ಕರಾವಳಿ ಉತ್ಸವ ಮೈದಾನ ಸಜ್ಜುಗೊಂಡಿದೆ. ನಗರದ ದೀಪಾ ಕಂಫರ್ಟ್ ನಲ್ಲಿ ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಪ್ರತಿಷ್ಠಾನದ ಅಧ್ಯಕ್ಷ ಮಿಥುನ್ ರೈ

ಅವರು ಮಾತನಾಡಿ, ಈ ಕಾರ್ಯಕ್ರಮಕ್ಕೆ ಶಿವಶರಣ್ ಶೆಟ್ಟಿ ನೇತೃತ್ವದ ನಮ್ಮ ಟಿವಿ ಸಹಭಾಗಿತ್ವ ವಹಿಸುತ್ತಿದೆ. ಈ ಬಾರಿ ಸೆಲೆಬ್ರಿಟಿಗಳ ದಂಡೇ ಪಿಲಿನಲಿಕೆ ಪಂಥಕ್ಕೆ ಆಗಮಿಸಲಿದೆ. ಸಿನಿಮಾ ನಟರಾದ ಸುನೀಲ್ ಶೆಟ್ಟಿ, ಕಿಚ್ಚ ಸುದೀಪ್, ಪೂಜಾ ಹೆಗ್ಡೆ, ರಾಜ್ ಬಿ. ಶೆಟ್ಟಿ, ಕ್ರಿಕೆಟ್ ತಾರೆಗಳಾದ ಅಜಿಂಕ್ಯಾ ರಹಾನೆ, ಜಿತೇಶ್ ಶರ್ಮಾ, ಇಂಡಿಯನ್ ಬಾಕ್ಸರ್ ವಿಜೇಂದ್ರ ಸಿಂಗ್, ಸಂಗೀತ ನಿರ್ದೇಶಕ ಗುರುಕಿರಣ್ ಸೇರಿದಂತೆ ಸಿನಿಮಾ, ಕ್ರೀಡಾ ಕ್ಷೇತ್ರದ ಸೆಲೆಬ್ರಿಟಿಗಳು ಆಗಮಿಸಲಿದ್ದಾರೆ. ಕಾರ್ಯಕ್ರಮ ನಡೆಯುವ ಸ್ಥಳದಲ್ಲಿ ಏಕಕಾಲಕ್ಕೆ 25 ಸಾವಿರಕ್ಕೂ ಅಧಿಕ ಮಂದಿಗೆ ಕುಳಿತುಕೊಂಡು ಸ್ಪರ್ಧೆ ವೀಕ್ಷಿಸಲು ಆಸನ ವ್ಯವಸ್ಥೆ ಮಾಡಲಾಗುವುದು ಎಂದರು.

ಪಿಲಿನಲಿಕೆಯಲ್ಲಿ ಭಾಗವಹಿಸುವ ಪ್ರತಿಯೊಂದು ತಂಡಗಳಿಗೂ 20 ನಿಮಿಷ ಕಾಲಾವಕಾಶ ನೀಡಲಾಗುವುದು. ಬೆಳಗ್ಗೆ 10ಗಂಟೆಗೆ ಆರಂಭವಾಗುವ ಸ್ಪರ್ಧೆ ರಾತ್ರಿ 10ರವರೆಗೆ ನಡೆಯಲಿದೆ ಎಂದರು.
ಪಿಲಿನಲಿಕೆ ಸ್ಪರ್ಧೆಗೆ 10 ತಂಡಗಳು
ಪಿಲಿನಲಿಕೆ ಪಂಥ ಸ್ಪರ್ಧೆಗೆ ಅಂತಿಮವಾಗಿ ಅಗಸ್ತ್ಯ ಮಂಗಳೂರು, ಶ್ರೀ ವೈದ್ಯನಾಥೇಶ್ವರ ಫ್ರೆಂಡ್ಸ್ ಟೈಗರ್ಸ್, ಮುಳಿಹಿತ್ಲು ಗೇಮ್ಸ್ ಟೀಮ್, ಅನಿಲ್ ಕಡಂಬೆಟ್ಟು, ಜೂನಿಯರ್ ಬಾಯ್ಸ್ ಚಿಲಿಂಬಿ, ಎಮ್ಮೆಕೆರೆ ಫ್ರೆಂಡ್ಸ್ ಸರ್ಕಲ್, ಟ್ಯಾಲೆಂಟ್ ಟೈಗರ್ಸ್ ತುಳುನಾಡು, ಸೋಮೇಶ್ವರ ಫ್ರೆಂಡ್ಸ್ ಕ್ಲಬ್, ಪೊಳಲಿ ಟೈಗರ್ಸ್, ಗೋರಕ್ಷನಾಥ ಹುಲಿ ಸೇರಿದಂತೆ 10ತಂಡಗಳನ್ನು ಆಯ್ಕೆ ಮಾಡಲಾಗಿದೆ.

*ಡಿಸಿಎಂ ಡಿಕೆಶಿ ಸಹಿತ ಗಣ್ಯರ ಆಗಮನ*
ಪಿಲಿನಲಿಕೆ ಪಂಥ ಕಾರ್ಯಕ್ರಮವನ್ನು ರಾಜ್ಯದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಉದ್ಘಾಟಿಸಲಿದ್ದಾರೆ. ರಾಜ್ಯಸಭಾ ಸದಸ್ಯ ನಾಸೀರ್ ಹುಸೇನ್, ಜಿಲ್ಲಾ ಉಸ್ತುವಾರಿ ದಿನೇಶ್ ಗುಂಡೂರಾವ್, ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ ಭಂಡಾರಿ ಸೇರಿದಂತೆ ಸಂಸದರು, ಶಾಸಕರು ಆಗಮಿಸಲಿದ್ದಾರೆ.

*26 ಲಕ್ಷ ರೂ. ಒಟ್ಟು ಬಹುಮಾನ*
2025ರ ಪಿಲಿನಲಿಕೆ-10 ಸ್ಪರ್ಧೆಯಲ್ಲಿ ಒಟ್ಟು 20 ಲಕ್ಷ ರೂ. ಬಹುಮಾನ ನಿಗದಿಪಡಿಸಲಾಗಿದೆ. ಪ್ರಥಮ ಬಹುಮಾನ 10 ಲಕ್ಷ ರೂ. ಮತ್ತು ಫಲಕ, ದ್ವಿತೀಯ 5ಲಕ್ಷ ರೂ. ಮತ್ತು ಫಲಕ, ತೃತೀಯ 3ಲಕ್ಷ ರೂ. ಬಹುಮಾನ ಮತ್ತು ಫಲಕ ನೀಡಲು ನಿರ್ಧರಿಸಲಾಗಿದೆ. ಪ್ರತಿ ತಂಡಕ್ಕೆ 50ಸಾವಿರ ರೂ. ಗೌರವ ಧನ ನೀಡಲಾಗುವುದು. ಕಪ್ಪುಹುಲಿ, ಮರಿಹುಲಿ, ತಾಸೆ ತಂಡ, ಮುಡಿ ಬಿಸಾಡುವುದು, ಬಣ್ಣಗಾರಿಕೆ ಸೇರಿದಂತೆ 6 ವೈಯಕ್ತಿಕ ಪ್ರಶಸ್ತಿಗಳಿಗೆ 50ಸಾವಿರ ಬಹುಮಾನ ಹಾಗೂ ಫಲಕ ಸಿಗಲಿದೆ.


*ದಶಮ ಸಂಭ್ರಮ ವಿಶೇಷತೆಗಳು*
ಪಿಲಿನಲಿಕೆ ಪಂಥಕ್ಕೆ ಈ ಬಾರಿ ದಶಮ (ಹತ್ತು) ಸಂಭ್ರಮ ಹಿನ್ನೆಲೆಯಲ್ಲಿ ಮೂಡುಬಿದಿರೆ ಸರಕಾರಿ ತಾಲೂಕಿನ ಶಾಲೆಯೊಂದನ್ನು ದತ್ತು ತೆಗೆದುಕೊಂಡು ಅದರ ಅಭಿವೃದ್ಧಿಗೆ ಶ್ರಮಿಸಲು ನಿರ್ಧರಿಸಲಾಗಿದೆ. ಹಾಗೂ ಸಹಕಾರಿ ರತ್ನ, ಎಸ್‌ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್. ರಾಜೇಂದ್ರ ಕುಮಾರ್ ಅವರಿಗೆ ಸನ್ಮಾನಿಸಲಾಗುವುದು
10 ತಂಡಗಳು ಹಾಗೂ ಬಹುಮಾನ ಮೊತ್ತ 26ಲಕ್ಷ ರೂ.ಗೆ ಏರಿಕೆ ಮಾಡಲಾಗಿದೆ

Share News
Exit mobile version