ಮಂಗಳೂರು: ಕಾರಿನ ಟೈಯರ್ ಬ್ಲಾಸ್ಟ್ ಆದ ಪರಿಣಾಮ ಕಾರು ನಿಯಂತ್ರಣ ತಪ್ಪಿ ರಸ್ತೆಯಿಂದ ಎಸೆಯಲ್ಪಟ್ಟ ಮನೆಯೊಂದಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾದ ಘಟನೆ ಕಾವೂರು ಬಳಿಯ ಮರಕಡದಲ್ಲಿ ಜನವರಿ 1 ರಂದು ಸಂಭವಿಸಿದೆ. ಈ ಅಪಘಾತದಲ್ಲಿ ಕಾರಿನಲ್ಲಿದ್ದ ಬೋಂದೆಲ್ ಚರ್ಚ್ ಪಾದ್ರಿ ಅದೃಷ್ಟವಶಾತ್ ಅಪಾಯದಿಂದ ಪಾರಾಗಿದ್ದಾರೆ.

ಬೋಂದೆಲ್ ಸೈಂಟ್ ಲಾರೆನ್ಸ್ ಚರ್ಚ್ ನಲ್ಲಿ ಪಾದ್ರಿಯಾಗಿರುವ ಫಾದರ್ ಆಂಡ್ರ್ಯೂ ಲಿಯೋ ಡಿಸೋಜ ಅಪಾಯದಿಂದ ಪಾರಾದವರು. ಜನವರಿ 1ರಂದು ಕಿನ್ನಿಗೋಳಿಯ ನೀರುಡೆಯಲ್ಲಿರುವ ತಮ್ಮ ಮನೆಯಲ್ಲಿ ಹೊಸ ವರ್ಷದ ಪಾರ್ಟಿ ಮುಗಿಸಿ ಮಧ್ಯಾಹ್ನ ಹಿಂತಿರುಗುತ್ತಿದ್ದರು. ಇವರ ಕಾರು ಮರಕಡದ ಮೂಲಕ ಬೋಂದೆಲ್ ನತ್ತ ಬರುತ್ತಿದ್ದಾಗ ಒಂದು ಟೈರ್ ಬ್ಲಾಸ್ಟ್ ಆಗಿದ್ದು ನಿಯಂತ್ರಣ ತಪ್ಪಿ ರಸ್ತೆಯಿಂದ ಹೊರಕ್ಕೆ ಹೋಗಿದ್ದು ರಸ್ತೆ ಪಕ್ಕದ ಗುಂಡಿಯಲ್ಲಿರುವ ಕಟ್ಟಡಕ್ಕೆ ಬಡಿದು ಪಲ್ಟಿಯಾಗಿ ಬಿದ್ದಿದೆ.

ಕಾರು ಹಾರಿ ಬಂದು ಪಲ್ಟಿಯಾಗಿ ಬಿದ್ದಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸಿನಿಮೀಯ ರೀತಿಯ ಅಪಘಾತ ನಡೆದಿದ್ದರೂ, ಫಾದರ್ ಆಂಡ್ರ್ಯೂ ಲಿಯೋ ಡಿಸೋಜ ಗಂಭೀರ ಅಪಘಾತಗಳಿಲ್ಲದೆ ಪಾರಾಗಿದ್ದಾರೆ. ಕಾರು ರಸ್ತೆ ಬದಿಗೆ ವೇಗವಾಗಿ ಹರಿದು ಹಾರಿ ಬಿದ್ದುದನ್ನು ಸ್ಥಳೀಯರು ಗಮನಿಸಿದ್ದು ಕೂಡಲೇ ಕಾರನ್ನು ಎತ್ತಿ ಅದರ ಎಡೆಯಲ್ಲಿ ಸಿಲುಕಿದ್ದ ಪಾದ್ರಿಯನ್ನು ಹೊರ ತೆಗೆದು ಆಸ್ಪತ್ರೆಗೆ ದಾಖಲಿಸಿದ್ದಾರೆ. ಇದರ ವಿಡಿಯೋ ವೈರಲ್ ಆಗಿದ್ದು ಚಾಲಕ ಬದುಕುಳಿದಿದ್ದೇ ಪವಾಡ ಎಂದು ಜನರಾಡುತ್ತಿದ್ದಾರೆ.


