ಮಂಗಳೂರು:ಮಾನವಕುಲದ ರಕ್ಷಣೆಗಾಗಿ ಪ್ರಭು ಯೇಸು ಕ್ರಿಸ್ತರು ತಮ್ಮ ಪ್ರಾಣವನ್ನೇ ಅರ್ಪಿಸಿದ ಸಂಕೇತವಾಗಿ ‘ಶುಭ ಶುಕ್ರವಾರ’ವನ್ನು (Good Friday) ಮಂಗಳೂರಿನ ಮಿಲಾಗ್ರಿಸ್ ಚರ್ಚ್‌ನಲ್ಲಿ ಅತ್ಯಂತ ಭಕ್ತಿ ಮತ್ತು ಶ್ರದ್ಧೆಯಿಂದ ಆಚರಿಸಲಾಯಿತು. ದೇವರ ಅಪಾರ ಪ್ರೀತಿಯನ್ನು ಧ್ಯಾನಿಸುವ ಈ ದಿನದಂದು ಸಹಸ್ರಾರು ಭಕ್ತಾದಿಗಳು ಪಾಲ್ಗೊಂಡಿದ್ದರು.

ವಿಶೇಷ ಪ್ರಾರ್ಥನಾ ವಿಧಿಗಳು:
ದಿನದ ಧರ್ಮವಿಧಿಗಳ ಭಾಗವಾಗಿ ದೇವರ ವಾಕ್ಯದ ಪಠಣ ಮತ್ತು ಧ್ಯಾನ ನಡೆಯಿತು. ಜಗತ್ತಿನ ವಿವಿಧ ಅಗತ್ಯಗಳಿಗಾಗಿ ಹತ್ತು ವಿಶೇಷ ಪ್ರಾರ್ಥನೆಗಳನ್ನು ಸಲ್ಲಿಸಲಾಯಿತು. ಸಿಲುಬೆಯ ಅನಾವರಣದ ಮೂಲಕ ಕ್ರಿಸ್ತನ ತ್ಯಾಗವನ್ನು ಸ್ಮರಿಸಲಾಯಿತು. ಭಕ್ತಾದಿಗಳು ಪವಿತ್ರ ಪರಮಪ್ರಸಾದವನ್ನು ಸ್ವೀಕರಿಸುವ ಮೂಲಕ ಪ್ರಭುವಿನೊಂದಿಗಿನ ತಮ್ಮ ಬಾಂಧವ್ಯವನ್ನು ಪುನಶ್ಚೇತನಗೊಳಿಸಿಕೊಂಡರು.
ಮೌನ ಮೆರವಣಿಗೆ:
ಚರ್ಚ್‌ನಲ್ಲಿನ ಧಾರ್ಮಿಕ ವಿಧಿಗಳ ನಂತರ, ಕ್ರಿಸ್ತನ ಪವಿತ್ರ ಶರೀರದೊಂದಿಗೆ ಮೌನ ಮೆರವಣಿಗೆಯನ್ನು ನಡೆಸಲಾಯಿತು. ಮಿಲಾಗ್ರಿಸ್ ಕ್ರಾಸ್ ರೋಡ್, ಬಲ್ಮಠ ರಸ್ತೆ ಮತ್ತು ಮದರ್ ತೆರೇಸಾ ರಸ್ತೆಯ ಮೂಲಕ ಸಾಗಿದ ಈ ಮೆರವಣಿಗೆಯು ಭಕ್ತರ ಶ್ರದ್ಧೆಗೆ ಸಾಕ್ಷಿಯಾಯಿತು. ಅತೀ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಮತ್ತು ಭಕ್ತಾದಿಗಳು ಈ ಪವಿತ್ರ ದಿನದ ಆಚರಣೆಯಲ್ಲಿ ಪಾಲ್ಗೊಂಡು ಪ್ರಾರ್ಥಿಸಿದರು.