ಮಂಗಳೂರು,ಡಿ.10:- ಬಿ.ಪಿ.ಎಲ್ ಪಡಿತರ ಚೀಟಿಯನ್ನು ಎ.ಪಿ.ಎಲ್ ಆಗಿ ಬದಲಾಯಿಸುವ ಪ್ರಕ್ರಿಯೆಯನ್ನು ಸಮಗ್ರವಾಗಿ ಪರಿಶೀಲನೆ ಮಾಡಬೇಕೆಂದು ಸರ್ಕಾರದ ಆದೇಶವಿದ್ದು, ಇದನ್ನು ಆಹಾರ ಇಲಾಖೆಯ ಅಧಿಕಾರಿಗಳು ಸರಿಯಾಗಿ ಪರಿಶೀಲಿಸಬೇಕು ಎಂದು ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಭರತ್ ಮುಂಡೋಡಿ ಹೇಳಿದರು.

ಆಹಾರ ಕಿಟ್ ವಿತರಣೆಗಾಗಿ ಸರ್ಕಾರವು ಅನುಮೋದನೆ ನೀಡಿದ್ದು, ಟೆಂಡರ್ ಪ್ರಕ್ರಿಯೆ ಆದ ತಕ್ಷಣ ವಿತರಣೆ ಮಾಡುವುದಾಗಿ ಮಾಹಿತಿ ಲಭ್ಯವಿರುತ್ತದೆ ಎಂದು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಉಪ ನಿರ್ದೇಶಕರು ತಿಳಿಸಿದಾಗ, ಫುಡ್ ಕಿಟ್ ವಿತರಣೆ ಬಗ್ಗೆ ಯಾವುದೇ ಮಾಹಿತಿ ಲಭ್ಯವಾದಲ್ಲಿ ಮಾಹಿತಿ ನೀಡಲು ಅವರು ತಿಳಿಸಿದರು.
ಜಿಲ್ಲೆಯಲ್ಲಿ ಕೆಲವೊಂದು ಕಡೆಗಳಲ್ಲಿ ಸಿ.ಸಿ ಬಸ್ಸುಗಳು ಕಾರ್ಯಾಚರಿಸುತ್ತಿರುವ ಬಗ್ಗೆ ಮಂಗಳೂರು ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಯ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರು ಪ್ರಸ್ತಾಸಿದಾಗ, ಈ ಬಗ್ಗೆ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಕ್ರಮವಹಿಸಬೇಕಾಗಿರುವುದರಿಂದ ಆರ್.ಟಿ.ಒ ಗೆ ಪತ್ರ ಬರೆದು, ಪತ್ರದ ಪ್ರತಿಯನ್ನು ನೀಡುವಂತೆ ಕೆ.ಎಸ್.ಆರ್.ಟಿ.ಸಿ. ಇಲಾಖೆಯವರಿಗೆ ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಯ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರು ಸೂಚಿಸಿದರು.
ಜಿಲ್ಲಾ ಮಟ್ಟದ ಗ್ಯಾರಂಟಿ ಫಲಾನುಭವಿಗಳ ಸಮಾವೇಶವನ್ನು ಡಿಸೆಂಬರ್ 23 ರಂದು ನಿಗಧಿಪಡಿಸಿದ್ದು, ತಾಲೂಕು ಸಮಿತಿ ಅಧ್ಯಕ್ಷರು ಮತ್ತು ಸಂಬಂಧಪಟ್ಟ ಅಧಿಕಾರಿಗಳು ವ್ಯವಸ್ಥಿತವಾಗಿ ಕಾರ್ಯನಿರ್ವಹಿಸಬೇಕು ಎಂದು ಹೇಳಿದರು.
ಸುಳ್ಯ-ತೊಡಿಕಾನ ಮಾರ್ಗದ ಸಾರಿಗೆ ಕಾರ್ಯಾಚರಣೆಗೆ ಪರವಾನಗಿ ಕೋರಿ ಅರ್ಜಿ ಸಲ್ಲಿಸಲಾಗಿದ್ದು, ಪರವಾನಗಿ ಮಂಜೂರಾದ ನಂತರದಲ್ಲಿ ನಿಗಮದ ಸಾರಿಗೆ ಸೌಲಭ್ಯ ಕಲ್ಪಿಸಲಾಗುತ್ತದೆ ಎಂದು ಕೆ.ಎಸ್.ಆರ್.ಟಿ.ಸಿ ಇಲಾಖೆ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.
ಜಿಲ್ಲೆಯಲ್ಲಿನ ಯುವನಿಧಿ ಯೋಜನೆಯ ಫಲಾನುಭವಿಗಳಿಗೆ ಯುವನಿಧಿ ಪ್ಲಸ್ ಯೋಜನೆಯಡಿ ತರಬೇತಿ ಕಾರ್ಯಾಗಾರವನ್ನು ಏರ್ಪಡಿಸಲಾಗಿರುತ್ತದೆ. ಕಾರ್ಯಾಗಾರಕ್ಕೆ ಹಾಜರಾದ ಯುವನಿಧಿ ಫಲಾನುಭವಿಗಳಿಗೆ ಜಾಬ್ ರೋಲ್‍ಗಳ ಬಗ್ಗೆ ಉಪಯುಕ್ತ ಮಾಹಿತಿಯನ್ನು ಒದಗಿಸಲಾಗಿರುತ್ತದೆ ಎಂದು ಸಭೆಗೆ ಮಾಹಿತಿ ನೀಡಲಾಯಿತು.
ಗೃಹಲಕ್ಷ್ಮಿ ಯೋಜನೆಯಡಿ ನವೆಂಬರ್ 20 ರಿಂದ ಡಿಸೆಂಬರ್ 8 ರವರೆಗೆ 467 ಫಲಾನುಭವಿಗಳು ನೋಂದಾಯಿಸಿಕೊಂಡಿದ್ದು, ಈವರೆಗೆ 3,80,116 ಫಲಾನುಭವಿಗಳು ಯೋಜನೆಗೆ ನೋಂದಾಯಿಸಿಕೊಂಡಿರುತ್ತಾರೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಪನಿರ್ದೇಶಕರು ಸಭೆಗೆ ಮಾಹಿತಿ ನೀಡಿದರು.