ಮಂಗಳೂರು: ಮಂಗಳೂರಿನ ಮೊದಲ ಬಿಝಿನೆಸ್ ಹೋಟೆಲ್ ಎಂದೇ ಖ್ಯಾತಿ ಪಡೆದಿದ್ದ ಮೋತಿ ಮಹಲ್ ಇದೀಗ ಮುಚ್ಚುವ ಹಂತಕ್ಕೆ ತಲುಪಿದ್ದು,
ಎಪ್ರಿಲ್ ಅಂತ್ಯದೊಳಗೆ ಅದರ ಭೂ ಮಾಲಕರಿಗೆ ಬಿಟ್ಟುಕೊಡಬೇಕಾಗಿದೆ. ಜಮೀನು ವಾಜ್ಯದಲ್ಲಿ ಸುಪ್ರೀಂ ಕೋರ್ಟ್‌ನ ತೀರ್ಪಿನಂತೆ ಹೋಟೆಲ್ ಮೋತಿಮಹಲ್ ಅನ್ನು ಯಥಾ ಸ್ಥಿತಿಯಲ್ಲಿ ಜಮೀನಿನ ಮಾಲಕರಿಗೆ ಬಿಟ್ಟುಕೊಡಬೇಕಾಗಿದೆ.
ಇದರೊಂದಿಗೆ 3 ಕೋಟಿ ರೂ. ಮೊತ್ತದ ಪರಿಹಾರಧನವನ್ನು ಅವರಿಗೆ ಪಾವತಿಸಬೇಕಾಗಿದೆ. ಹಂಪನಕಟ್ಟೆಯ ಮಿಲಾಗ್ರಿಸ್ ಚರ್ಚ್ ಪಕ್ಕದಲ್ಲಿರುವ ಹೋಟೆಲ್ ಮೋತಿಮಹಲ್ ಇರುವ ಜಮೀನಿನ ಒಡೆತನವು ಸದ್ಯ ಜೆಪ್ಪುವಿನ ಸಂತ ಅಂಥೋನಿ ವೃದ್ಧಾಶ್ರಮಕ್ಕೆ ಸೇರಿದೆ.
ಸ್ಥಳೀಯ ಚರ್ಚ್‌ನ ಆಡಳಿತ ಸಮಿತಿ ಮತ್ತು ಹೋಟೆಲ್ ಮಾಲಕರ ನಡುವೆ ಆರಂಭಗೊಂಡ ಕಾನೂನು ಸಮರವು ಇದೀಗ ತಾರ್ಕಿಕ ಅಂತ್ಯಕ್ಕೆ ಬಂದಿದೆ. ಸುದೀರ್ಘ ಕಾನೂನು ಸಮರದಲ್ಲಿ ಅದರ ಮೂಲ ಭೂಮಾಲಕರಿಗೆ ಜಯವಾಗಿದೆ.
ಮಂಗಳೂರಿನ ಹೃದಯಭಾಗವಾಗಿರುವ ಹಂಪ ಕಟ್ಟೆಯಲ್ಲಿ ಹೋಟೆಲ್ ಮೋತಿ ಮಹಲ್‌ನ್ನು ಮಂಗಳೂರಿನ ಖ್ಯಾತ ಉದ್ಯಮಿ ಎ.ಜೆ. ಶೆಟ್ಟಿ 1966ರಲ್ಲಿ ಸ್ಥಾಪಿಸಿದ್ದರು.
ಆ ಕಾಲದಲ್ಲೇ ಜಿಮ್ ಮತ್ತು ಈಜುಕೊಳ ಸಹಿತ ವಿಲಾಸಿ ಸೌಲಭ್ಯಗಳಿದ್ದ ಪ್ರಪ್ರಥಮ ಹೋಟೆಲ್ ಮೋತಿ ಮಹಲ್. ಪ್ರಸಿದ್ಧ ಮಂಗಳ ಮಲ್ಟಿ ಕ್ಯೂಸಿನ್ ರೆಸ್ಟೋರೆಂಟ್, ಮಧುವನ್ ವೆಜ್ ರೆಸ್ಟೋರೆಂಟ್, ಮೆಹ್ಫಿಲ್ ಬಾರ್, ತೈಚಿನ್ ಚೈನೀಸ್ ರೆಸ್ಟೊರೆಂಟ್, ಮೋತಿ ಸ್ವೀಟ್ಸ್ ವಿಭಾಗ, ಶೀತಲ್ ಹೆಸರಿನ ಈಜುಕೊಳ ಹೊಂದಿದ್ದ ಹೋಟೆಲ್ ಮೋತಿಮಹಲ್ ಮಂಗಳೂರಿನ ಪ್ರಪ್ರಥಮ ಬಿಝಿನೆಸ್ ಹಾಗು ಲಕ್ಸುರಿ ಹೋಟೆಲ್ ಆಗಿ ಪ್ರಸಿದ್ಧಿಯನ್ನು ಪಡೆದಿತ್ತು.
ನಗರದ ಆಧುನಿಕ ಜೀವನಶೈಲಿಗೆ ಪೂರಕವಾಗಿರುವ ಹೋಟೆಲ್ನಲ್ಲಿ 90 ಕೊಠಡಿಗಳಿವೆ. 1,000 ಮಂದಿಗೆ ಆಸನಗಳ ಸಭಾಂಗಣವಿದೆ. ಕಳೆದ ಸುಮಾರು ಆರು ದಶಕಗಳಲ್ಲಿ ಹೋಟೆಲ್ ಮೋತಿ ಮಹಲ್ ಕೇವಲ ಹೋಟೆಲ್ ಮಾತ್ರವಾಗಿರದೆ ಮಂಗಳೂರಿನ ಒಂದು ಪ್ರಮುಖ ಹೆಗ್ಗುರುತಾಗಿ ಗುರುತಿಸಲ್ಪಟ್ಟಿದೆ.
ಕುಟುಂಬ ಸಮೇತ ಹೋಗುವ ಹೋಟೆಲ್, ಬಿಝಿನೆಸ್ ಮೀಟಿಂಗ್ ಗಳಿಗೆ , ಶುಭ ಸಮಾರಂಭಗಳಿಗೆ , ಪಾರ್ಟಿಗಳಿಗೆ ಇತ್ಯಾದಿ ಎಲ್ಲ ರೀತಿಯ ಸಣ್ಣ ದೊಡ್ಡ ಕಾರ್ಯಕ್ರಮಗಳಿಗೆ ಮೋತಿ ಮಹಲ್‌ಗೆ ಜನ ಹೋಗುತ್ತಿದ್ದರು. ಮೋತಿ ಮಹಲ್‌ನ ವೆಜ್ ರೆಸ್ಟೋರೆಂಟ್ ಇವತ್ತಿಗೂ ಹಿಂದಿನ ಖ್ಯಾತಿಯನ್ನು ಉಳಿಸಿಕೊಂಡಿದೆ.