• Home  
  • ಮಂಗಳೂರು ಸಂಸದ ಹಾಗೂ ಶಾಸಕ ಪೂಂಜಾರಿಂದ ಸಚಿವ ನಿತಿನ್ ಗಡ್ಕರಿ ಭೇಟಿ
- DAKSHINA KANNADA - HOME - LATEST NEWS

ಮಂಗಳೂರು ಸಂಸದ ಹಾಗೂ ಶಾಸಕ ಪೂಂಜಾರಿಂದ ಸಚಿವ ನಿತಿನ್ ಗಡ್ಕರಿ ಭೇಟಿ

ನವದೆಹಲಿ: ಕುಕ್ಕೆ ಸುಬ್ರಹ್ಮಣ್ಯ, ಧರ್ಮಸ್ಥಳ, ಕೊಲ್ಲೂರು ದೇವಸ್ಥಾನಗಳಿಗೆ ಯಾತ್ರಾರ್ಥಿಗಳಿಗೆ ಬಂದು ಹೋಗುವುದಕ್ಕೆ ಅನುಕೂಲವಾಗುವಂತೆ ಪೆರಿಯಶಾಂತಿ-ಪೈಚಾರ್ ಹಾಗೂ ಗುರುವಾಯನಕೆರೆ -ಬಜಗೋಳಿ ನಡುವೆ ಸ್ಪರ್ ರಸ್ತೆ ನಿರ್ಮಿಸುವಂತೆ ಕೋರಿ ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್‌ ಚೌಟ ಅವರು ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ.

ಬೆಳ್ತಂಗಡಿ ಶಾಸಕ ಹರೀಶ್‌ ಪೂಂಜ ಅವರ ಜತೆಗೆ ಇಂದು ನವದೆಹಲಿಯಲ್ಲಿ ಗಡ್ಕರಿ ಅವರನ್ನು ಭೇಟಿ ಮಾಡಿರುವ ಕ್ಯಾ. ಚೌಟ ಅವರು, ದಕ್ಷಿಣ ಕನ್ನಡ ಸೇರಿದಂತೆ ಕರಾವಳಿಯಲ್ಲಿರುವ ಪ್ರಮುಖ ದೇವಸ್ಥಾನಗಳನ್ನು ಸಂಪರ್ಕಿಸುವ ಪ್ರಮುಖ ಹೆದ್ದಾರಿಗಳನ್ನು ಸಂಪರ್ಕಿಸುವ ಈ ಎರಡು ಸ್ಪರ್‌ ರಸ್ತೆಗಳನ್ನು ಅಭಿವೃದ್ಧಿಪಡಿಸುವ ಮೂಲಕ ಇಲ್ಲಿಗೆ ಬರುವ ಯಾತ್ರಾರ್ಥಿಗಳಿಗೆ ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸಬೇಕೆಂದು ವಿನಂತಿಸಿದ್ದಾರೆ.

ರಾ.ಹೆ -75 ಹಾಗೂ ರಾ.ಹೆ 275ನ್ನು ಸಂಪರ್ಕಿಸುವ ಪೆರಿಯಶಾಂತಿ-ಪೈಚಾರು ರಸ್ತೆಯನ್ನು ಸ್ಪರ್‌ ರಸ್ತೆಯನ್ನಾಗಿ ಅಭಿವೃದ್ಧಿಪಡಿಸಬೇಕು. ಸದ್ಯ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಬರುವಾಗ ಬೆಂಗಳೂರು ಕಡೆಯ ಯಾತ್ರಾರ್ಥಿಗಳು ಶಿರಾಡಿ ಘಾಟಿ ಮೂಲಕ ರಾ.ಹೆ-75 ಹಾಗೂ ಕೇರಳ ಕಡೆಯಿಂದ ಬರುವವರು ರಾ.ಹೆ- 275 ಹೆದ್ದಾರಿಯನ್ನು ದಾಟಿ ಬರಬೇಕು.

ಹೀಗಿರುವಾಗ, ರಾ.ಹೆ-75 & ರಾ.ಹೆ 275 ಲಿಂಕ್‌ ಮಾಡುವ ಪೆರಿಯಶಾಂತಿ-ಪೈಚಾರು ರಸ್ತೆಯನ್ನು ಸ್ಪರ್‌ ರಸ್ತೆಯಾಗಿ ಮೇಲ್ದರ್ಜೆಗೇರಿಸುವುದರಿಂದ ಭಕ್ತರು-ಪ್ರವಾಸಿಗರಿಗೆ ಕುಕ್ಕೆ-ಧರ್ಮಸ್ಥಳಕ್ಕೆ ಬರುವುದಕ್ಕೆ ನೇರ ಸಂಪರ್ಕ ರಸ್ತೆಯಾಗಲಿದೆ ಎಂದು ಕ್ಯಾ. ಚೌಟ ಸಚಿವ ಗಡ್ಕರಿಗೆ ಮನವರಿಕೆ ಮಾಡಿದ್ದಾರೆ.

ಇನ್ನೊಂದೆಡೆ ರಾ.ಹೆ-73 ಹಾಗೂ ರಾ.ಹೆ 169 ಹೆದ್ದಾರಿಯನ್ನು ಸಂಪರ್ಕಿಸುವಲ್ಲಿ ಬೆಳ್ತಂಗಡಿಯ ಗುರುವಾಯನಕೆರೆ-ಬಜಗೋಳಿ ರಸ್ತೆಯನ್ನು ಸ್ಪರ್‌ ರಸ್ತೆಯನ್ನಾಗಿ ಅಭಿವೃದ್ಧಿಪಡಿಸಬೇಕು. ಈ ಹೊಸ ರಸ್ತೆ ನಿರ್ಮಿಸುವುದರಿಂದ ಧರ್ಮಸ್ಥಳ ಕ್ಷೇತ್ರ ಹಾಗೂ ಕೊಲ್ಲೂರು ಶ್ರೀ ಮೂಕಾಂಬಿಕಾ ಕ್ಷೇತ್ರಕ್ಕೆ ಬಂದು ಹೋಗುವ ಯಾತ್ರಾರ್ಥಿಗಳಿಗೆ ಪ್ರಯಾಣ ಅವಧಿ ಕಡಿಮೆಗೊಳಿಸುವ ಜತೆಗೆ ಪ್ರವಾಸೋದ್ಯಮದ ಅಭಿವೃದ್ಧಿಗೂ ಹೆಚ್ಚಿನ ಉತ್ತೇಜನ ದೊರೆಯಲಿದೆ.

ಜತೆಗೆ, ಈ ಮಾರ್ಗದಲ್ಲಿ ಹಾಲಿ ಇರುವ ಹೆದ್ದಾರಿಗಳಲ್ಲಿನ ವಾಹನಗಳ ದಟ್ಟನೆ ಕಡಿಮೆ ಮಾಡುವುದಕ್ಕೂ ಸಹಕಾರಿಯಾಗಲಿದೆ.

ಈ ಹಿನ್ನಲೆಯಲ್ಲಿ ಗುರುವಾಯನಕೆರೆ-ಬಜಗೋಳಿ ಸ್ಪರ್‌ ರಸ್ತೆ ನಿರ್ಮಾಣ ಯೋಜನೆಯ ಬಗ್ಗೆಯೂ ಪರಿಶೀಲನೆ ನಡೆಸಿ ಮಂಜೂರಾತಿ ನೀಡುವಂತೆ ಕ್ಯಾ. ಚೌಟ ಅವರು ಇದೇ ವೇಳೆ ಸಚಿವ ಗಡ್ಕರಿ ಅವರಲ್ಲಿ ಕೋರಿದ್ದಾರೆ.

ಈ ಎರಡು ಸ್ಪರ್‌ ರಸ್ತೆಗಳನ್ನು ಅಭಿವೃದ್ಧಿಪಡಿಸಿದರೆ, ದಕ್ಷಿಣ ಕನ್ನಡ ಸೇರಿದಂತೆ ಕರಾವಳಿ ಭಾಗದ ಟೆಂಪಲ್‌ ಟೂರಿಸಂ ಪ್ರೋತ್ಸಾಹಕ್ಕೆ ಹೆಚ್ಚಿನ ಅನುಕೂಲವಾಗುವ ಮೂಲಕ ಜಿಲ್ಲೆಯ ಮೂಲಸೌಕರ್ಯ ಸೌಲಭ್ಯಗಳು ಕೂಡ ಮತ್ತಷ್ಟು ಅಭಿವೃದ್ಧಿಯಾಗಲಿದೆ. ಹೀಗಿರುವಾಗ, ಈ ಪರ್ಯಾಯ ರಸ್ತೆಗಳನ್ನು ಅಭಿವೃದ್ಧಿಪಡಿಸುವುದರಿಂದ ಸ್ಥಳೀಯ ಆರ್ಥಿಕತೆಗೆ ಬೂಸ್ಟ್‌ ದೊರೆಯುವುದಲ್ಲದೆ ಪರಿಸರದ ಮೇಲಾಗುವ ಪ್ರತಿಕೂಲ ಪರಿಣಾಮಗಳನ್ನು ಕೂಡ ಕಡಿಮೆಗೊಳಿಸಬಹುದು ಎಂದು ಕ್ಯಾ. ಚೌಟ ಅವರು ಮನವಿಯಲ್ಲಿ ಉಲ್ಲೇಖಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಕ್ಯಾ. ಚೌಟ ಅವರು, ಎರಡು ಪ್ರಮುಖ ಸ್ಪರ್‌ ರಸ್ತೆಗಳಿಗೆ ಸಂಬಂಧಿಸಿದ ಮನವಿಯಲ್ಲಿ ಆಲಿಸಿರುವ ಸಚಿವ ಗಡ್ಕರಿ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಈ ಪರ್ಯಾಯ ರಸ್ತೆಗಳ ಸಾಧಕ-ಬಾಧಕಗಳ ಬಗ್ಗೆ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದ್ದಾರೆ.ಈ ಎರಡು ಮೂಲಸೌರ್ಯ ಅಭಿವೃದ್ಧಿ ಯೋಜನೆಗಳು ನಮ್ಮ ಭಾಗದ ರಸ್ತೆ ಸಂಪರ್ಕ ಉತ್ತಮಪಡಿಸುವ ಜತೆಗೆ ದೇವಸ್ಥಾನಗಳಿಗೆ ದರ್ಶನಕ್ಕೆ ಬರುವ ಭಕ್ತರಿಗೂ ಸುಖಕರ ಪ್ರಯಾಣ ಒದಗಿಸುವುದಕ್ಕೆ ಸಹಕಾರಿಯಾಗಲಿದೆ.

ಆ ಮೂಲಕ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ವಿಕಸಿಕ ಭಾರತದ ಪರಿಕಲ್ಪನೆಯನ್ನು ಮತ್ತಷ್ಟು ಗಟ್ಟಿಗೊಳಿಸಲಿದೆ ಎಂದು ಹೇಳಿದ್ದಾರೆ.

Share News

About Us

Lorem ipsum dol consectetur adipiscing neque any adipiscing the ni consectetur the a any adipiscing.

Email Us: [email protected]

Contact: +5-784-8894-678