ಮಂಗಳೂರು,ಡಿ 26:ಕ್ರಿಸ್ಮಸ್ ಹಬ್ಬವನ್ನು ಗುರಿಯಾಗಿಸಿಕೊಂಡು ಕರ್ನಾಟಕ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ಕ್ರೈಸ್ತ ಸಮುದಾಯದ ಮೇಲೆ ನಡೆಯುತ್ತಿರುವ ಹಲ್ಲೆಗಳು ಖಂಡನೀಯವಾಗಿದ್ದು, ಸಂಬಂಧಪಟ್ಟ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಸಮುದಾಯದ ಭದ್ರತೆಗೆ ತಕ್ಷಣ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮಂಗಳೂರು ಧರ್ಮಕ್ಷೇತ್ರ ಆಗ್ರಹಿಸಿದೆ

.ಕೇರಳದ ಪಾಲಕ್ಕಾಡ್‌ನಲ್ಲಿ ಕ್ರಿಸ್ಮಸ್ ಕ್ಯಾರಲ್ಸ್ ತಂಡದ ಮೇಲೆ ಮತಾಂಧರು ಹಲ್ಲೆ ನಡೆಸಿರುವ ಘಟನೆ ಖಂಡನೀಯವಾಗಿದೆ. ಇನ್ನೂ ಕೆಲವೆಡೆ ಕ್ರಿಸ್ಮಸ್ ಸಂಬಂಧಿತ ವಸ್ತುಗಳನ್ನು ಮಾರಾಟ ಮಾಡುತ್ತಿದ್ದವರನ್ನು ತಡೆದು ಹಿಂಸೆಗೆ ಒಳಪಡಿಸಿರುವ ಘಟನೆಗಳು ವರದಿಯಾಗಿವೆ. ನವದೆಹಲಿಯಲ್ಲಿ ಸಾಂತಾಕ್ಲಾಸ್ ಟೋಪಿ ಧರಿಸಿದ್ದ ಕ್ರೈಸ್ತ ಮಹಿಳೆಯರು ಹಾಗೂ ಮಕ್ಕಳ ಗುಂಪಿನ ವಿರುದ್ಧ ಮತಾಂತರದ ಆರೋಪ ಹೊರಿಸಿ ಹಿಂದೂ ಸಂಘಟನೆಗಳ ಕಾರ್ಯಕರ್ತರು ಅನುಚಿತವಾಗಿ ವರ್ತಿಸಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮವೊಂದಕ್ಕೆ ಉದ್ದೇಶಪೂರ್ವಕವಾಗಿ ಪ್ರವೇಶ ಮಾಡಿ ಸತ್ಯನಿಷ್ಠ ಆರ್ಯ ಹಾಗೂ ಆತನ ಬೆಂಬಲಿಗರು ಚರ್ಚ್ ನ ಪಾದ್ರಿಯೊಬ್ಬರಿಗೆ ಬೆದರಿಕೆ ಹಾಕಿರುವುದು ಸಂವಿಧಾನದ ಆಶಯಗಳಿಗೆ ವಿರುದ್ಧವಾದ ಕೃತ್ಯವಾಗಿದೆ.
ಒಂದೆಡೆ ದೇಶದ ಪ್ರಧಾನಮಂತ್ರಿಗಳು ದೆಹಲಿಯ ಚರ್ಚ್ ನಲ್ಲಿ ಕ್ರಿಸ್ಮಸ್ ಪ್ರಾರ್ಥನೆಯಲ್ಲಿ ಪಾಲ್ಗೊಳ್ಳುತ್ತಿದ್ದರೆ, ಮತ್ತೊಂದೆಡೆ ದೇಶದ ವಿವಿಧ ರಾಜ್ಯಗಳಲ್ಲಿ ಮತಾಂಧ ಶಕ್ತಿಗಳು ಕ್ರಿಸ್ಮಸ್ ಆಚರಣೆಯನ್ನು ಧ್ವಂಸಗೊಳಿಸುತ್ತಿರುವುದು ತೀವ್ರವಾಗಿ ಖಂಡನೀಯವಾಗಿದೆ.
ಇತ್ತೀಚಿನ ಕ್ರಿಸ್ಮಸ್ ಆಚರಣೆಗಳ ಸಂದರ್ಭದಲ್ಲಿ ಕೇರಳ, ನವದೆಹಲಿ, ಉತ್ತರ ಪ್ರದೇಶ, ರಾಜಸ್ಥಾನ, ಉತ್ತರಾಖಂಡ ಹಾಗೂ ಒಡಿಶಾ ಸೇರಿದಂತೆ ಹಲವು ರಾಜ್ಯಗಳಲ್ಲಿ ಹಲ್ಲೆ, ಗಲಾಟೆ ಹಾಗೂ ಹಬ್ಬದ ಸಂಭ್ರಮವನ್ನು ಹಾಳು ಮಾಡುವ ಘಟನೆಗಳು ನಡೆದಿರುವುದು ಸಂವಿಧಾನಾತ್ಮಕ ಮೌಲ್ಯಗಳಲ್ಲಿ ನಂಬಿಕೆ ಇಟ್ಟು ಬದುಕುತ್ತಿರುವ ಕ್ರೈಸ್ತ ಸಮುದಾಯಕ್ಕೆ ಆಳವಾದ ನೋವು ತಂದಿದೆ.
ಕ್ರೈಸ್ತ ಸಂಪ್ರದಾಯಗಳ ಮೇಲೆ ಇತ್ತೀಚೆಗೆ ನಡೆದ ದಾಳಿಗಳು ಕೇವಲ ಒಂದು ಸಮುದಾಯದ ಮೇಲಿನ ಹಲ್ಲೆಗಳಲ್ಲ; ಅವು ಭಾರತದ ಸಾಂವಿಧಾನಿಕ ಮೌಲ್ಯಗಳು ಹಾಗೂ ಆರಾಧನೆಯ ಸ್ವಾತಂತ್ರ್ಯದ ಮೇಲಿನ ನೇರ ದಾಳಿಗಳಾಗಿವೆ. ಆರಾಧನೆಯ ಸ್ವಾತಂತ್ರ್ಯಕ್ಕೆ ಬೆದರಿಕೆ ಹಾಕುವುದು ಸಂವಿಧಾನ ವಿರೋಧಿ ಕೃತ್ಯವಾಗಿದ್ದು, ಇದು ಪ್ರಜಾಪ್ರಭುತ್ವದ ಮೂಲ ತತ್ವಗಳಿಗೆ ಧಕ್ಕೆ ತರುವಂತಾಗಿದೆ.
ಭಾರತವು ಜಾತ್ಯಾತೀತ ರಾಷ್ಟ್ರವಾಗಿದ್ದು, ಪ್ರತಿಯೊಬ್ಬ ನಾಗರಿಕನಿಗೂ ತನ್ನ ಧರ್ಮವನ್ನು ಸ್ವತಂತ್ರವಾಗಿ ಪಾಲನೆ ಮಾಡುವ ಹಕ್ಕನ್ನು ಸಂವಿಧಾನ ಒದಗಿಸಿದೆ. ಹಬ್ಬದ ಆಚರಣೆಗಳ ಸಂದರ್ಭದಲ್ಲಿ ಅಶಾಂತಿ ಸೃಷ್ಟಿಸುವ ಉದ್ದೇಶ ಹೊಂದಿರುವ ಮೂಲಭೂತವಾದಿ ಗುಂಪುಗಳ ವಿರುದ್ಧ ಸರಕಾರಗಳು ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಈ ಮೂಲಕ ದೇಶದ ಕ್ರೈಸ್ತ ಬಾಂಧವರು ಶಾಂತಿಯುತವಾಗಿ ಹಾಗೂ ನೆಮ್ಮದಿಯಿಂದ ಬದುಕು ಸಾಗಿಸಲು ಕೇಂದ್ರ ಹಾಗೂ ರಾಜ್ಯ ಸರಕಾರಗಳು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಮಂಗಳೂರು ಧರ್ಮಕ್ಷೇತ್ರದ ಸಾರ್ವಜನಿಕ ಸಂಪರ್ಕಾಧಿಕಾರಿಗಳಾದ ವಂದನೀಯ ಡಾ. ಜೆ.ಬಿ. ಸಲ್ದಾನಾ ಮತ್ತು ರೋಯ್ ಕ್ಯಾಸ್ತಲಿನೊ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.