• Home  
  • ಮಂಗಳೂರು ಏರ್‌ಪೋರ್ಟ್‌ ಸಂಪರ್ಕಿಸುವ ಮರಕಡ ರಸ್ತೆ ಅಗಲೀಕರಣ, ತುರ್ತು ರಿಪೇರಿಗೆ ಆಗ್ರಹ
- DAKSHINA KANNADA

ಮಂಗಳೂರು ಏರ್‌ಪೋರ್ಟ್‌ ಸಂಪರ್ಕಿಸುವ ಮರಕಡ ರಸ್ತೆ ಅಗಲೀಕರಣ, ತುರ್ತು ರಿಪೇರಿಗೆ ಆಗ್ರಹ

ಮಂಗಳೂರು: ಮಂಗಳೂರು ನಗರದಿಂದ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಯಲ್ಲಿ ಮರವೂರು ಸೇತುವೆಯಿಂದ ಮರಕಡ ನಡುವಿನ ರಸ್ತೆಯನ್ನು ಅಗಲೀಕರಣಗೊಳಿಸಿ ಅಭಿವೃದ್ದಿಪಡಿಸುವುದಕ್ಕೆ ಆದ್ಯತೆ ಮೇರೆಗೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ, ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಅವರಿಗೆ ಪತ್ರ ಬರೆದಿದ್ದಾರೆ.

ಮಂಗಳೂರು ನಗರದಿಂದ ಏರ್ ಪೋರ್ಟ್ ಗೆ ಸಂಪರ್ಕಿಸುವ ಮುಖ್ಯರಸ್ತೆಯು ಮರಕಡದವರೆಗೆ ಈಗಾಗಲೇ ಚತುಷ್ಪಥ ರಸ್ತೆಯಾಗಿ ಅಭಿವೃದ್ದಿಯಾಗಿದೆ. ಆದರೆ ಅಲ್ಲಿಂದ ಮುಂದಕ್ಕೆ ಮರವೂರು ಸೇತುವೆ ಮತ್ತು ಮರಕಡ ನಡುವಿನ ರಸ್ತೆ ಬಹಳ ಕಿರಿದಾಗಿದ್ದು ವಾಹನಗಳ ಸುಗಮ ಹಾಗೂ ಸುರಕ್ಷಿತ ಸಂಚಾರಕ್ಕೆ ಹೆಚ್ಚಿನ ಅಡ್ಡಿಯುಂಟು ಮಾಡುತ್ತಿದೆ. ಅಲ್ಲದೆ, ರಸ್ತೆಯೂ ಕಳಪೆ ಗುಣಮಟ್ಟದಿಂದ ಕೂಡಿದ್ದು ವಾಹನ ದಟ್ಟಣೆಗೆ ಕಾರಣವಾಗುತ್ತಿದೆ. ಇದು ಏರ್ ಪೋರ್ಟ್ ಪ್ರಯಾಣಕ್ಕೆ ಪ್ರಮುಖ ರಸ್ತೆಯಾಗಿರುವುದರಿಂದ ಪ್ರಯಾಣಿಕರ ಸಂಚಾರ ಸಮಯದಲ್ಲಿ ವ್ಯತ್ಯಯವಾಗಿ ನಾನಾ ರೀತಿಯ ಸಮಸ್ಯೆ ಎದುರಾಗುತ್ತಿದೆ. ಹೀಗಾಗಿ, ಕಿರಿದಾದ ಹಾಗೂ ಹದಗೆಟ್ಟಿರುವ ರಸ್ತೆಯಿಂದಾಗಿ ಏರ್‌ಪೋರ್ಟ್‌ ಪ್ರಯಾಣಿಕರಿಗೆ ಹಾಗೂ ಸ್ಥಳೀಯ ನಿವಾಸಿಗಳಿಗೆ ಹೆಚ್ಚಿನ ತೊಂದರೆಯಾಗುತ್ತಿದ್ದು, ಆದಷ್ಟು ಬೇಗೆ ಮರವೂರು ಸೇತುವೆ ಹಾಗೂ ಮರಕಡ ನಡುವಿನ ರಸ್ತೆ ಚತುಷ್ಪಥವಾಗಿ ಪರಿವರ್ತಿಸುವುದಕ್ಕೆ ಅಗತ್ಯ ಕೈಗೊಳ್ಳಬೇಕೆಂದು ಕ್ಯಾ. ಚೌಟ ಮನವಿ ಮಾಡಿದ್ದಾರೆ.

ಈ ರಸ್ತೆ ಅಭಿವೃದ್ದಿಗೊಂಡರೆ ಮಂಗಳೂರಿನ ವಿಮಾನ ನಿಲ್ದಾಣದವರೆಗೂ ಸಂಪೂರ್ಣವಾಗಿ ನಾಲ್ಕು ಪಥದ ರಸ್ತೆಯಾಗುತ್ತದೆ. ಮಾತ್ರವಲ್ಲದೇ ನಗರದಿಂದ ಏರ್ ಪೋರ್ಟ್ ಗೆ ಸಂಪರ್ಕಿಸುವ ಅವಧಿಯೂ ಕಡಿಮೆಯಾಗಲಿದೆ. ಇನ್ನೊಂದೆಡೆ, ಮಳೆಗಾಲ ಪ್ರಾರಂಭವಾಗಿರುವುದರಿಂದ ಈ ರಸ್ತೆಯಲ್ಲಿ ಅಲ್ಲಲ್ಲಿ ಹೊಂಡ-ಗುಂಡಿ ಬಿದ್ದಿದ್ದು, ಪ್ರಯಾಣಕೂ ದುಸ್ತರವಾಗುತ್ತಿದೆ. ಹೀಗಿರುವಾಗ, ಈ ರಸ್ತೆಯ ಶಾಶ್ವತ ಅಭಿವೃದ್ಧಿ ಮತ್ತು ಕಾಂಕ್ರೀಟೀಕರಣ ಕಾರ್ಯವನ್ನು ಕೈಗೊಳ್ಳುವವರೆಗೂ, ಈ ರಸ್ತೆಯಲ್ಲಿರುವ ಹೊಂಡ ಮುಚ್ಚಿಸಿ ರಸ್ತೆ ಮೂಲಭೂತ ನಿರ್ವಹಣೆಗಾಗಿ ತುರ್ತು ಕ್ರಮಗಳು ಕೈಗೊಳ್ಳಬೇಕೆಂದು ಸಚಿವರಿಗೆ ಬರೆದಿರುವ ಪತ್ರದಲ್ಲಿ ಸಂಸದರು ಒತ್ತಿ ಹೇಳಿದ್ದಾರೆ.

ನಗರಾಭಿವೃದ್ಧಿ ಇಲಾಖೆಯು ಈ ನಿರ್ದಿಷ್ಟ ಪ್ರದೇಶದ ನಾಲ್ಕು ಪಥಗಳ ನಿರ್ಮಾಣ ಮತ್ತು ಕಾಂಕ್ರೀಟೀಕರಣವನ್ನು ಆದ್ಯತೆ ಮೇಲೆ ಪರಿಗಣಿಸಬೇಕು. ಇದು ಸಂಚಾರ ದಟ್ಟಣೆ ಕಡಿಮೆಗೊಳಿಸುವುದಲ್ಲದೆ ವಾಣಿಜ್ಯ ನಗರವಾಗಿರುವ ಮಂಗಳೂರು ಹಾಗೂ ಸುತ್ತಲಿನ ಪ್ರದೇಶದ ಆರ್ಥಿಕ ಸಾಮರ್ಥ್ಯವನ್ನು ಬೆಂಬಲಿಸಲು ಸಹ ಅತ್ಯಗತ್ಯವಾಗಿದೆ. ಹೀಗಾಗಿ ಶೀಘ್ರದಲ್ಲೇ ಸಂಬಂಧಪಟ್ಟ ಅಧಿಕಾರಿಗಳಿಗೆ ಈ ಮಂಗಳೂರು ಭಾಗದ ಅತ್ಯಂತ ಪ್ರಮುಖವಾಗಿರುವ ಈ ರಸ್ತೆಯಲ್ಲಿ ಅಭಿವೃದ್ಧಿಯಾಗದೆ ಬಾಕಿ ಉಳಿದಿರುವ ಭಾಗದ ಅಲ್ಪಾವಧಿಯ ನಿರ್ವಹಣೆ ಮತ್ತು ದೀರ್ಘಾವಧಿಯ ಅಭಿವೃದ್ಧಿ ಎರಡನ್ನೂ ಪ್ರಾರಂಭಿಸಲು ಸೂಕ್ತ ನಿರ್ದೇಶನ ನೀಡಬೇಕೆಂದು ಕ್ಯಾ.ಚೌಟ ಅವರು ಸಚಿವರಲ್ಲಿ ಕೋರಿದ್ದಾರೆ.

Share News

About Us

Lorem ipsum dol consectetur adipiscing neque any adipiscing the ni consectetur the a any adipiscing.

Email Us: [email protected]

Contact: +5-784-8894-678