ಮಂಗಳೂರು:ಕೊಂಕಣಿಯ ಪ್ರತಿಷ್ಠಿತ ಸಾಂಸ್ಕೃತಿಕ ಸಂಘಟನೆ ‘ಮಾಂಡ್ ಸೊಭಾಣ್’ ತನ್ನ 40ನೇ ವರ್ಷಾಚರಣೆಯ (1986–2026) ಸ್ಮರಣೀಯ ಅಂಗವಾಗಿ, ಇದೇ ಬರುವ ನವೆಂಬರ್‌ನಲ್ಲಿ **‘ಪ್ರಥಮ ವಿಶ್ವ ಕೊಂಕಣಿ ಸಂಗೀತ ಮಹಾ ಸಮಾವೇಶ’**ವನ್ನು ಆಯೋಜಿಸುತ್ತಿದೆ. ಈ ಐತಿಹಾಸಿಕ ಕಾರ್ಯಕ್ರಮದ ಮುಹೂರ್ತ ಹಾಗೂ ಲಾಂಛನ ಬಿಡುಗಡೆ ಸಮಾರಂಭವು ಶುಕ್ರವಾರ, ಏಪ್ರಿಲ್ 10, 2026 ರಂದು ಸಂಜೆ 4:00 ಗಂಟೆಗೆಶಕ್ತಿನಗರದ ಕಲಾಂಗಣದಲ್ಲಿ ನಡೆಯಲಿದೆ. ಎಂದು ಮಾಂಡ್ ಸೊಭಾಣ್ ಅಧ್ಯಕ್ಷ ಲುವಿ ಜೆ ಪಿಂಟೊ,ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು

ಕಾರ್ಯಕ್ರಮದಲ್ಲಿ ಕರ್ನಾಟಕ ವಿಧಾನಸಭೆಯ ಸಭಾಧ್ಯಕ್ಷರಾದ ಶ್ರೀ ಯು.ಟಿ. ಖಾದರ್ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ರಾಜ್ಯದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ದಿನೇಶ್ ಗುಂಡೂರಾವ್ ಅವರು ಸಮಾವೇಶದ ಲಾಂಛನವನ್ನು ಬಿಡುಗಡೆಗೊಳಿಸಲಿದ್ದಾರೆ. ಗೌರವ ಅತಿಥಿಗಳಾಗಿ ಶಾಸಕ ಶ್ರೀ ವೇದವ್ಯಾಸ ಕಾಮತ್, ವಿಧಾನ ಪರಿಷತ್ ಸದಸ್ಯ ಶ್ರೀ ಐವನ್ ಡಿಸೋಜ ಹಾಗೂ ಗೋವಾದ ಖ್ಯಾತ ಕಲಾವಿದ ಶ್ರೀ ಮೈಕಲ್ ಗ್ರೇಶಿಯಸ್ ಉಪಸ್ಥಿತರಿರುವರು.
ಗಿನಿಸ್ ದಾಖಲೆಯತ್ತ ದಾಪುಗಾಲು: ನವೆಂಬರ್ 03 ರಿಂದ 15 ರವರೆಗೆ ಮಂಗಳೂರಿನಲ್ಲಿ ನಡೆಯಲಿರುವ ಈ ಮಹಾ ಸಮಾವೇಶದಲ್ಲಿ 12 ದಿನ, 12 ಗಂಟೆ, 12 ನಿಮಿಷಗಳ ಸುದೀರ್ಘ ಸಮೂಹ ಗಾಯನದ ಮೂಲಕ ‘ಗಿನಿಸ್ ವಿಶ್ವ ದಾಖಲೆ’ ನಿರ್ಮಿಸಲು ಸಿದ್ಧತೆ ನಡೆಸಲಾಗಿದೆ. ಕರ್ನಾಟಕ, ಗೋವಾ, ಮಹಾರಾಷ್ಟ್ರ, ಕೇರಳ ಸೇರಿದಂತೆ ವಿದೇಶಗಳಿಂದಲೂ ಸುಮಾರು 6000ಕ್ಕೂ ಹೆಚ್ಚು ಗಾಯಕರು ಇದರಲ್ಲಿ ಪಾಲ್ಗೊಳ್ಳಲಿದ್ದಾರೆ. ಕ್ರೈಸ್ತ, ಜಿಎಸ್‌ಬಿ, ದಾಲ್ದಿ, ಕುಡ್ಮಿ, ಖಾರ್ವಿ, ಸಿದ್ದಿ ಸೇರಿದಂತೆ ವಿವಿಧ ಸಮುದಾಯಗಳ ಗಾಯಕರು ಒಟ್ಟು 5000ಕ್ಕೂ ಹೆಚ್ಚು ಕೊಂಕಣಿ ಹಾಡುಗಳನ್ನು ಈ ವೇದಿಕೆಯಲ್ಲಿ ಪ್ರಸ್ತುತಪಡಿಸಲಿದ್ದಾರೆ.
ಕೊಂಕಣಿ ಸಂಗೀತ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ ಸಂಘಟಕ ಹಾಗೂ ಕಲಾ ಪ್ರೇಮಿ ಎರಿಕ್ ಒಝೇರಿಯೊ ಅವರಿಗೆ ಅರ್ಪಣೆಯಾಗಿ ಈ ಕಾರ್ಯ ಕ್ರಮವನ್ನು ಆಯೋಜಿಸಲಾಗಿದೆ. ಈ ಮಹತ್ವದ ಮುಹೂರ್ತ ಹಾಗೂ ಲಾಂಛನ ಬಿಡುಗಡೆ ಕಾರ್ಯಕ್ರಮಕ್ಕೆ ಕೊಂಕಣಿ ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಪ್ರೋತ್ಸಾಹಿಸಬೇಕೆಂದು ಮಾಂಡ್ ಸೊಭಾಣ್ ಅಧ್ಯಕ್ಷರಾದ ಲುವಿ ಜೆ. ಪಿಂಟೊ ಹಾಗೂ ಪದಾಧಿಕಾರಿಗಳು ವಿನಂತಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಕಲಾಂಗಣ್ ಪಿರ್ಜೆಂತ್ ರೊಯ್ ಕ್ಯಾಸ್ತೆಲಿನೊ, ಸಂಗೀತ ನಿರ್ದೇಶಕ ಜೊಯೆಲ್ ಪಿರೇರಾ, ಸಂಘಟಕ ಸ್ಟ್ಯಾನಿ ಆಲ್ವಾರಿಸ್, ಉಪಾಧ್ಯಕ್ಷ ನವೀನ್ ಲೋಬೊ ಹಾಗೂ ಕಾರ್ಯದರ್ಶಿ ರೊನಾಲ್ಡ್ ಕ್ರಾಸ್ತಾ ಉಪಸ್ಥಿತರಿದ್ದರು.