ಶಿವಮೊಗ್ಗ: ಸಾಮಾನ್ಯವಾಗಿ ರಾಜಕೀಯ ಪಕ್ಷಗಳ ಕಾರ್ಯಕ್ರಮಗಳ ವೇದಿಕೆಯನ್ನು ಸಚಿವರು, ಶಾಸಕರು, ಜನಪ್ರತಿನಿಧಿಗಳು ಮತ್ತು ಮುಖಂಡರು ಆವರಿಸಿಕೊಂಡಿರುತ್ತಾರೆ. ಅದರಲ್ಲೂ ಪುರುಷರದ್ದೇ ಪಾರುಪಥ್ಯ ಇರುತ್ತದೆ. ಮಹಿಳಾ ನಾಯಕಿಯರು ಮತ್ತು ಕಾರ್ಯಕರ್ತೆಯರನ್ನು ರಾಜಕೀಯ ಪಕ್ಷಗಳ ವೇದಿಕೆಗಳಲ್ಲಿ ಕಡೆಗಣಿಸಲಾಗುತ್ತದೆ ಎಂಬ ಆರೋಪಗಳು ಸುಳ್ಳಲ್ಲ.
ಇದಕ್ಕೆ ಅಪವಾದ ಎಂಬಂತೆ ಶಿವಮೊಗ್ಗದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕ್ರಮದ ವೇದಿಕೆಯನ್ನು ಸಂಪೂರ್ಣವಾಗಿ ಮಹಿಳೆಯರಿಗೆ ಮೀಸಲಿರಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಭಾಗಿಯಾದ ಸಚಿವ, ಶಾಸಕರು ಮತ್ತು ಮುಖಂಡರು ವೇದಿಕೆಯ ಕೆಳಗೆ ಸಭಿಕರ ಸಾಲಿನಲ್ಲಿ ಆಸೀನರಾಗಿದ್ದರು. ಅಪರೂಪದಲ್ಲೇ ಅಪರೂಪದ ಈ ಕ್ಷಣಗಳಿಗೆ ಸಾಕ್ಣಿಯಾಗಿದ್ದು ಇಂದು ಶಿವಮೊಗ್ಗದ ಬಂಜಾರ ಭವನದಲ್ಲಿ ನಡೆದ ಶಿವಮೊಗ್ಗ ಜಿಲ್ಲಾ ಮಹಿಳಾ ಕಾಂಗ್ರೆಸ್ ನೂತನ ಅಧ್ಯಕ್ಷೆ ಶ್ವೇತಾ ಬಂಡಿರವರ ಪದಗ್ರಹಣ ಸಮಾರಂಭ. ಈ ಕಾರ್ಯಕ್ರಮದ ವೇದಿಕೆ ಸಂಪೂರ್ಣವಾಗಿ ಕಾಂಗ್ರೆಸ್ ಮಹಿಳಾ ನಾಯಕಿಯರಿಗೆ ಮೀಸಲಾಗಿತ್ತು.
ಶ್ವೇತಾ ಬಂಡಿ ಜೊತೆ ಮಹಿಳಾ ಕಾಂಗ್ರೆಸ್ ರಾಜ್ಯಾಧ್ಯಕ್ಷೆ ಸೌಮ್ಯ ರೆಡ್ಡಿ, ವಿಧಾನ ಪರಿಷತ್ ಸದಸ್ಯೆ ಬಲ್ಲೀಸ್ ಬಾನು, ಶಿವಮೊಗ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್‌ಕುಮಾರ್ ಮತ್ತು ಶಿವಮೊಗ್ಗ ಜಿಲ್ಲಾಮಟ್ಟದ ಮಹಿಳಾ ನಾಯಕಿಯರು ವೇದಿಕೆಯಲ್ಲಿ ಆಸೀನಾರಾಗಿದ್ದರು. ಸ್ಥಳೀಯ ಮಹಿಳಾ ನಾಯಕಿಯರಿಗೆ ವೇದಿಕೆ ಒದಗಿಸುವ ಉದ್ದೇಶದಿಂದ ಪುರುಷ ನಾಯಕರಿಗೆ ವೇದಿಕೆಯಲ್ಲಿ ಅವಕಾಶ ನೀಡದೇ ವೇದಿಕೆ ಕೆಳಗೆ ಕೂರಿಸಲಾಯಿತು.
ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಶಿಕ್ಷಣ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ, ಶಾಸಕರಾದ ಬೇಲೂರು ಗೋಪಾಲಕೃಷ್ಣ, ವಿಧಾನ ಪರಿಷತ್ ಶಾಸಕ ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ ಭಂಡಾರಿ, ಶಿವಮೊಗ್ಗ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಪ್ರಸನ್ನ ಕುಮಾರ್ ಸೇರಿದಂತೆ ಹಲವು ಮುಖಂಡರು ವೇದಿಕೆ ಕೆಳಗೆ ಆಸೀನರಾಗಿ ಕಾರ್ಯಕ್ರಮ ವೀಕ್ಷಿಸಿದರು. ಮಂಜುನಾಥ ಭಂಡಾರಿ ಅವರು ಕೇವಲ ಭಾಷಣಕ್ಕಾಗಿ ಒಮ್ಮೆ ವೇದಿಕೆ ಏರಿದ್ದರು, ಮಾತು ಮುಗಿಸಿದ ಬಳಿಕ ವೇದಿಕೆಯಿಂದ ಕೆಳಗಿಳಿದು ಬಂದರು.
ಇಂದಿನ ಕಾರ್ಯಕ್ರಮದ ವೇದಿಕೆ ಕೇವಲ ಮಹಿಳೆಯರಿಗೆ ಸೀಮಿತವಾಗಬೇಕು ಮತ್ತು ವೇದಿಕೆಯಲ್ಲಿ ಮಹಿಳಾ ನಾಯಕಿಯರು ಆಸೀನರಾಗಬೇಕೆಂದು ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಮಂಜುನಾಥ ಭಂಡಾರಿ ಅವರು ನಿರ್ಧರಿಸಿದ್ದರು ಎಂದು ತಿಳಿದುಬಂದಿದೆ. ಮಂಜುನಾಥ ಭಂಡಾರಿಯವರ ಈ ಆಲೋಚನೆಗೆ ಕಾಂಗ್ರೆಸ್ ಪಕ್ಷ ಮತ್ತು ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.