ಮಂಗಳೂರು: ಬಂಟ್ವಾಳ ತಾಲೂಕಿನ ಮಾಣಿಲದ ಅಪ್ರಾಪ್ತೆಯ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಆರೋಪಿ ಮಹೇಶ್ ಭಟ್ ಗೆ ಜಾಮೀನು ಮಂಜೂರಾಗಿದೆ. ಕದ್ದುಮುಚ್ಚಿ ಓಡಾಡುತ್ತಿದ್ದ ಭಟ್ ಜಾಮೀನು ಮಂಜೂರಾಗುತ್ತಿದ್ದಂತೆ ಊರಲ್ಲಿ ಮತ್ತೆ ಪ್ರತ್ಯಕ್ಷವಾಗಿದ್ದಾನೆ.
ಈ ನಡುವೆ ಮಹೇಶ್ ಭಟ್ ವಿರುದ್ಧ ಷಡ್ಯಂತ್ರ ನಡೆಸಲಾಗಿದೆ ಎನ್ನುವ ಚರ್ಚೆಗಳು ಆತನ ಆಪ್ತ ವಲಯದಿಂದಲೇ ಕೇಳಿಬಂದಿದೆ. ರಾಜಕೀಯವಾಗಿ ಮುನ್ನಲೆಗೆ ಬರುತ್ತಿರುವ ಮಹೇಶ್ ಭಟ್ ವಿರುದ್ಧ ಸ್ಥಳೀಯ ನಾಯಕರೇ ಷಡ್ಯಂತ್ರ ಮಾಡಿದ್ದಾರೆ ಎಂಬ ಮಾತು ವಿಟ್ಲದಲ್ಲಿ ಚರ್ಚೆಗೆ ಗ್ರಾಸವಾಗಿದೆ. ದಲಿತ ಬಾಲಕಿಯನ್ನು ಮುಂದಿಟ್ಟುಕೊಂಡು ಅವರದ್ದೇ ಪಕ್ಷದವರು ಭಟ್ ನ ವಿರುದ್ಧ ಈ ರೀತಿ ಮಾಡಿದ್ದಾರೆ ಎನ್ನಲಾಗುತ್ತಿದೆ.
ಮಹೇಶ್ ಭಟ್ ಸ್ಥಳೀಯ ಸಹಕಾರಿ ಬ್ಯಾಂಕೊಂದರಲ್ಲಿ ನಿರ್ದೇಶಕನಾಗಿದ್ದು, ಜೊತೆಗೆ ರಾಜಕೀಯ ಪಕ್ಷವೊಂದರಲ್ಲಿ ಗುರುತಿಸಿಕೊಂಡಿದ್ದಾರೆ.
ಮಹೇಶ್ ಭಟ್ ಭೂಮಾಲಿಕನಾಗಿ ಹಾಗೂ ಸ್ಥಳೀಯ ಪ್ರಭಾವಿ ವ್ಯಕ್ತಿಯಾಗಿ ಮುನ್ನೆಲೆಗೆ ಬರುತ್ತಿದ್ದಾನೆ. ಇದರಿಂದ ಕಸಿವಿಸಿಗೊಂಡ ಸ್ಥಳೀಯ ತನ್ನದೇ ಪಕ್ಷದ ನಾಯಕರು ಪ್ರತ್ಯಕ್ಷವಾಗಿ ಆತನಿಗೆ ಬೆಂಬಲಿಸಿ ಪರೋಕ್ಷವಾಗಿ ಆತನನ್ನು ಮುಗಿಸಲು ಯತ್ನಿಸುತ್ತಿದ್ದಾರೆ ಎಂದು ಅವರ ಆಪ್ತರೊಬ್ಬರು ತಿಳಿಸಿದ್ದಾರೆ.
ತಲೆ ಮರೆಸಿಕೊಂಡಿದ್ದೇಕೆ ಮಹೇಶ್?
ಒಂದು ಮೂಲದ ಪ್ರಕಾರ ಆತನ ವಿರುದ್ಧ ಷಡ್ಯಂತ್ರ ನಡೆದಿದೆ ಎನ್ನುವವರು ಆತ ಮರಿಯಾದೆಗೆ ಅಂಜಿ ತಲೆ ಮರೆಸಿಕೊಂಡಿದ್ದ ಎನ್ನುತ್ತಿದ್ದಾರೆ. ಒಂದೊಮ್ಮೆ ಬಹಿರಂಗವಾಗಿ ಓಡಾಡುತ್ತಿದ್ದಾರೆ ಬಂಧನದ ಭೀತಿಯೂ ಇತ್ತು ಎನ್ನುತ್ತಿದ್ದಾರೆ.
ಆದರೆ, ಬಾಲಕಿಯ ಪರವಾಗಿ ಹೋರಾಟ ನಡೆಸುವವರ ಪ್ರಕಾರ ಆರೋಪಿ ತಪ್ಪೇ ಮಡದಿದ್ದರೆ ತಲೆ ಮರೆಸಿಕೊಳ್ಳುವ ಅಗತ್ಯ ಏನಿತ್ತು. ಠಾಣೆಗೆ ಹಾಜರಾಗಬಹುದಿತ್ತು. ಆತನಿಂದ ಪ್ರಮಾಧ ನಡೆದಿದೆ ಎಂದು ದಲಿತ ಸಂಘಟನೆಗಳು ಆರೋಪಿಸುತ್ತಿವೆ.
ಭಟ್ ಬಳಗದಿಂದ ಬಾಲಕಿಗೆ ಜೀವ ಬೆದರಿಕೆ?
ಈ ನಡುವೆ ದಲಿತ ಸಂಘಟನೆಗಳು ಆರೋಪಿಸುವ ಪ್ರಕಾರ ಗ್ರಾಮದ ಕೆಲವು ಪ್ರಭಾವಿಗಳು ಹಾಗೂ ಸಹಕಾರಿ ಸಂಘದ ಇತರ ನಿರ್ದೇಶಕರು ಸೇರಿಕೊಂಡು ಬಾಲಕಿಗೆ ಜೀವ ಬೆದರಿಕೆಯೊಡ್ಡಿದ್ದಾರೆ ಎಂದು ಆರೋಪಿಸಿದ್ದಾರೆ. ಕೊಲೆ ಬೆದರಿಕೆ ಹಿನ್ನೆಲೆ ಬಾಲಕಿ ಹೆದರಿಕೊಂಡಿದ್ದಾಳೆ ಎಂದು ಸಂಘಟನೆ ನಾಯಕರು ಪ್ರತಿಭಟನೆ ಸಂದರ್ಭ ಆರೋಪಿಸಿದ್ದರು. ಆದರೆ, ಈ ಬಗ್ಗೆ ಬಾಲಕಿಯಾಗಲಿ ಕುಟುಂಬವಾಗಲಿ ಎಲ್ಲೂ ಬಾಯಿ ಬಿಟ್ಟಿಲ್ಲ. ಬಾಲಕಿ ಹಾಗೂ ಕುಟುಂಬದ ವಿಚಾರಣೆ ವೇಳೆ ನ್ಯಾಯಾಧೀಶರಿಗೆ ಪ್ರಬಲ ಸಾಕ್ಷಿ ಸಿಕ್ಕಿಲ್ಲ. ಜತೆಗೆ ವೈದ್ಯಕೀಯ ಪರೀಕ್ಷೆ ವರದಿಯಲ್ಲೂ ಯಾವುದೇ ಆರೋಪಗಳಿಗೆ ಪುರಾವೆ ಸಿಗದ ಕಾರಣ ಆರೋಪಿಗೆ ಕೋರ್ಟ್ ಜಾಮೀನು ನೀಡಿದೆ.