canaratvnews

*ವಿದ್ಯೆಯು ಮಾನವನಿಗೆ ಸನ್ಮಾರ್ಗ ತೋರಿಸುವ ದೀಪ: ಖತೀಬ್ ಅಬ್ದುಲ್ ನಾಸಿರ್ ಸಅದಿ*

ಮಂಗಳೂರು:“ಜನರು ಸಂಪಾದಿಸುವ ಆಸ್ತಿಗಳಲ್ಲೇ ಅತ್ಯುತ್ತಮವಾದದ್ದು ವಿದ್ಯೆ. ವಿದ್ಯೆ ಪಡೆದವನು ಎಲ್ಲವನ್ನೂ ಕರಗತ ಮಾಡಿಕೊಳ್ಳಲು ಸಾಧ್ಯ ಮತ್ತು ಇದು ಮಾನವನಿಗೆ ಸನ್ಮಾರ್ಗವನ್ನು ತೋರಿಸುವ ದೀಪವಾಗಿದೆ” ಎಂದು ಖತೀಬ್ ಅಬ್ದುಲ್ ನಾಸಿರ್ ಸಅದಿ ಅವರು ಹೇಳಿದರು.

ಅವರು ಇತ್ತೀಚೆಗೆ ಬಜಾಲ್ ನಂತೂರು ಹಯಾತುಲ್ ಇಸ್ಲಾಂ ಹೈಯರ್ ಸೆಕೆಂಡರಿ ಮದ್ರಸದ ಮದ್ರಸಾ ಹಾಲ್‌ನಲ್ಲಿ ಜಮಾಅತ್ ಅಧ್ಯಕ್ಷ ಅಬ್ದುಲ್ ರವೂಫ್ ಅವರ ಅಧ್ಯಕ್ಷತೆಯಲ್ಲಿ ನಡೆದ. ‘ಮದ್ರಸ ಪ್ರಾರಂಭೋತ್ಸವ ಹಾಗೂ ಫತ್ಹೇ ಮುಬಾರಕ್’

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಶಿಕ್ಷಣವು ಕೇವಲ ಅಂಕಗಳಿಗೆ ಸೀಮಿತವಾಗದೆ ವ್ಯಕ್ತಿಯ ವ್ಯಕ್ತಿತ್ವವನ್ನು ರೂಪಿಸಿ, ನೈತಿಕ ಮೌಲ್ಯಗಳನ್ನು ಬೆಳೆಸಬೇಕು. ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಯಶಸ್ಸು ಸಾಧಿಸಲು ಶಿಕ್ಷಣವೇ ಮುಖ್ಯ ಆಧಾರ ಎಂದು ಅವರು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಅಬ್ದುಲ್ ರವೂಫ್ ಮಾತನಾಡಿ, “ವಿದ್ಯಾರ್ಥಿಗಳಿಗೆ ಅಗತ್ಯವಾದ ಎಲ್ಲಾ ಸೌಕರ್ಯಗಳನ್ನು ಒದಗಿಸಲು ಜಮಾಅತ್ ಬದ್ಧವಾಗಿದೆ. ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಜೊತೆಗೆ ಶಿಸ್ತು, ಸಂಸ್ಕಾರ ಹಾಗೂ ನೈತಿಕ ಮೌಲ್ಯಗಳನ್ನು ಅಳವಡಿಸಿಕೊಂಡು ಉನ್ನತ ಶಿಕ್ಷಣ ಪಡೆದು ಸಮಾಜಕ್ಕೆ ಮಾದರಿಯಾಗಬೇಕು” ಎಂದರು.

ಕಾರ್ಯಕ್ರಮದಲ್ಲಿ ಮದ್ರಸ ಉಸ್ತುವಾರಿ ನಝೀರ್ ಬಜಾಲ್, ಅಶ್ರಫ್ ತೋಟ, ಸಂಚಾಲಕ ಬಿ. ಫಕ್ರುದ್ದೀನ್, ಪ್ರಧಾನ ಕಾರ್ಯದರ್ಶಿ ಅಬ್ದುಲ್ ಹಮೀದ್, ಕೋಶಾಧಿಕಾರಿ ನಝೀರ್ ಪಾಂಡೆಲ್ ಉಪಸ್ಥಿತರಿದ್ದರು. ಹಾಗೆಯೇ ಮೊಯಿದಿನ್ ಕುಂಜಿ ಇಕ್ಬಾಲ್ ಅಹ್ಸನಿ, ಎಂ. ಎಚ್. ಮುಹಮ್ಮದ್, ಹನೀಫ್ ಕೆಳಗಿನಮನೆ, ಅಧ್ಯಾಪಕರಾದ ಅಬ್ದುಲ್ ರಹ್ಮಾನ್ ಮದನಿ, ಸಮೀರ್ ಸಅದಿ ಹಾಗೂ ನಿಸಾರ್ ಹಾಶಿಮಿ ಉಪಸ್ಥಿತರಿದ್ದರು.
ಮದ್ರಸಾ ಸದರ್ ಮುಅಲ್ಲಿಮ್ ಅಬ್ದುಲ್ ಹಕೀಂ ಮದನಿ ಸ್ವಾಗತಿಸಿದರು. ಅಬೂಬಕ್ಕರ್ ಸಖಾಫಿ ವಂದಿಸಿದರು.
Share News
Exit mobile version