ಮಂಗಳೂರು: ಮಧ್ಯಪ್ರಾಚ್ಯ ದೇಶಗಳಲ್ಲಿ ನಡೆಯುತ್ತಿರುವ ಯುದ್ಧದ ಪರಿಣಾಮವಾಗಿ ವಾಣಿಜ್ಯ ಅನಿಲ ಪೂರೈಕೆಯಲ್ಲಿ ಉಂಟಾಗಿರುವ ವ್ಯತ್ಯಯವು ಈಗ ಮಂಗಳೂರಿನ ಸರ್ಕಾರಿ ವೆನ್ಲಾಕ್ ಆಸ್ಪತ್ರೆಯ ರೋಗಿಗಳ ಹಿತೈಷಿಗಳಿಗೆ ಉಚಿತವಾಗಿ ರಾತ್ರಿ ಊಟ ನೀಡುವ ‘ಕಾರುಣ್ಯ’ ಯೋಜನೆಗೆ ತಟ್ಟಿದೆ.

ಎಂಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಕಳೆದ ಎಂಟು ವರ್ಷಗಳಿಂದ ವೆನ್ಲಾಕ್ ಆಸ್ಪತ್ರೆ ಹಾಗೂ ಕಳೆದ ಆರು ತಿಂಗಳಿಂದ ಲೇಡಿಗೋಷನ್ ಆಸ್ಪತ್ರೆಯಲ್ಲಿ ಸುಮಾರು 400 ಮಂದಿಗೆ ನಿರಂತರವಾಗಿ ರಾತ್ರಿ ಊಟ ನೀಡಲಾಗುತ್ತಿದೆ. ಆದರೆ, ಪ್ರಸ್ತುತ ಅಡುಗೆ ಅನಿಲದ ಪೂರೈಕೆ ಸ್ಥಗಿತಗೊಂಡಿರುವುದರಿಂದ ಅಡುಗೆ ತಯಾರಿಸಲು ಸಂಕಷ್ಟ ಎದುರಾಗಿದೆ.
ಯಾವ ಕಾರಣಕ್ಕೂ ಬಡವರ ಹಸಿವು ನೀಗಿಸುವ ಈ ಕಾಯಕ ನಿಲ್ಲಬಾರದು ಎಂಬ ದೃಢ ನಿರ್ಧಾರದಿಂದ, ಟ್ರಸ್ಟ್ ಈಗ ಅನಿಲದ ಬದಲಿಗೆ ಕಟ್ಟಿಗೆ ಒಲೆಯನ್ನು ಹಚ್ಚಿ ಅಡುಗೆ ತಯಾರಿಸುತ್ತಿದೆ. ಅನಿಲದ ಕೊರತೆಯಿಂದಾಗಿ ಈ ಹಿಂದೆ ನೀಡಲಾಗುತ್ತಿದ್ದ ಚಪಾತಿ-ಪಲ್ಯ ಮತ್ತು ಇಡ್ಲಿ-ಸಾರಿನ ಬದಲಿಗೆ, ಸದ್ಯಕ್ಕೆ ಕೇವಲ ವೆಜ್ ಬಿರಿಯಾನಿ ಅಥವಾ ಅನ್ನ-ಸಾಂಬಾರ್ ಮಾತ್ರ ಸಿದ್ಧಪಡಿಸಲಾಗುತ್ತಿದೆ.
ಅಡುಗೆ ಅನಿಲದ ಸಮಸ್ಯೆ ಸಂಪೂರ್ಣವಾಗಿ ಬಗೆಹರಿಯುವವರೆಗೆ ಈ ಸೇವೆಯನ್ನು ಮೊದಲಿನಂತೆ ಮುಂದುವರಿಸಲು ಜಿಲ್ಲಾಡಳಿತ ಅಥವಾ ಸಾರ್ವಜನಿಕರು ಕನಿಷ್ಠ 4 ರಿಂದ 5 ಗ್ಯಾಸ್ ಸಿಲಿಂಡರ್‌ಗಳ ವ್ಯವಸ್ಥೆ ಮಾಡಿಕೊಡಬೇಕೆಂದು ಟ್ರಸ್ಟ್ ಮನವಿ ಮಾಡಿದೆ.
ಮಾನವೀಯತೆಯ ದೃಷ್ಟಿಯಿಂದ ನಡೆಯುತ್ತಿರುವ ಈ ಪುಣ್ಯ ಕಾರ್ಯಕ್ಕೆ ಸಹೃದಯಿಗಳು ಸಾಥ್ ನೀಡಬೇಕೆಂದು ಎಂಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ ಪ್ರಕಟಣೆಯಲ್ಲಿ ತಿಳಿಸಿದೆ.