ಮಂಗಳೂರು: ಕೊಂಕಣಿ ಕ್ಯಾಥೋಲಿಕ್ ವಕೀಲರ ಸಂಘದ ಪದಾಧಿಕಾರಿಗಳ ಪದಗ್ರಹಣ ಹಾಗೂ ಕಾನೂನು ಸಂಬಂಧಿತ ವೃತ್ತಿಯಲ್ಲಿ ನಿರತರಾಗಿರುವ ಕ್ಯಾಥೊಲಿಕ್ ಸಮುದಾಯದ ಜನರಿಗಾಗಿ ನಡೆಸುವ ವಿಶೇಷ ಬಲಿ ಪೂಜೆ ಮತ್ತು ಪ್ರಾರ್ಥನಾ ವಿಧಿ ‘ರೆಡ್ ಮಾಸ್’ ಸೆ. 5 ರಂದು ಮಂಗಳೂರಿನ ಜಪ್ಪು ಸಂತ ಅಂತೋನಿ ಆಶ್ರಮ ಚಾಪೆಲ್‌ನಲ್ಲಿ ನಡೆಯಿತು. ಮಂಗಳೂರಿನ ಬಿಷಪ್ ಅತಿ ವಂದನೀಯ ಡಾ. ಪೀಟರ್ ಪಾವ್ಲ್ ಸಲ್ಡಾನ್ಹಾ ನೇತೃತ್ವದಲ್ಲಿ ನಡೆದ ಬಲಿ ಪೂಜೆಯಲ್ಲಿ ಒಂಭತ್ತು ಮಂದಿ ಗುರುಗಳು ಉಪಸ್ಥಿತರಿದ್ದರು. ಬಿಷಪ್ ಅವರು ತಮ್ಮ ಪ್ರವಚನದಲ್ಲಿ ವಕೀಲರು ಸತ್ಯ ಮತ್ತು ನ್ಯಾಯದ ಪರ ನಿಲ್ಲುವಂತೆ ಮನವಿ ಮಾಡಿದರು.
ಬಲಿ ಪೂಜೆಯ ಬಳಿಕ ಕೊಂಕಣಿ ಕ್ಯಾಥೋಲಿಕ್ ವಕೀಲರ ಸಂಘದ 2025–2027 ಅವಧಿಗೆ ಆಯ್ಕೆಗೊಂಡ ಪದಾಧಿಕಾರಿಗಳ ಪದಗ್ರಹಣ ನೆರವೇರಿತು. ಬಿಷಪ್ ಅವರು ಪ್ರಮಾಣ ವಚನ ಬೋಧಿಸಿದರು.
ಅಧ್ಯಕ್ಷರಾಗಿ ಸುಶಾಂತ್ ಸಿ.ಎ. ಸಲ್ಡಾನ್ಹಾ, ಉಪಾಧ್ಯಕ್ಷರಾಗಿ ಅಲೋಶಿಯಸ್ ಎಸ್. ಲೋಬೊ ಮತ್ತು ರಿಚಾರ್ಡ್ ಕೋಸ್ಟಾ ಎಂ., ಖಜಾಂಚಿಯಾಗಿ ರಾಕೇಶ್ ಮಸ್ಕರೇನ್ಹಸ್, ಕಾರ್ಯದರ್ಶಿಯಾಗಿ ಲೋಲಿನಾ ಡಿ’ಸೋಜಾ, ಜತೆ ಕಾರ್ಯದರ್ಶಿಯಾಗಿ ಝೀಟಾ ಪ್ರಿಯಾ ಮೊರಾಸ್, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ರೇಷ್ಮಾ ಪ್ರಿಯಾ ಡಿ’ಸೋಜಾ, ಲಿಥರ್ಜಿಕ್ ಕಾರ್ಯದರ್ಶಿಯಾಗಿ ಲೈನೆಟ್ ಪ್ರಿಯಾ ಡಿ’ಸೋಜಾ ಮತ್ತು ಇತರ ಕೌನ್ಸಿಲ್ ಸದಸ್ಯರು ಅಧಿಕಾರ ವಹಿಸಿಕೊಂಡರು.
ಸಂಘದ ಪೋಷಕ ಸಂತ ಸೈಂಟ್ ಥಾಮಸ್ ಮೋರ್ ಅವರಿಗೆ ಗೌರವ ಸಲ್ಲಿಸಲಾಯಿತು. ಗಣನೀಯ ಸಾಧಕರನ್ನು ಸನ್ಮಾನಿಸಲಾಯಿತು: ಭರತನಾಟ್ಯದಲ್ಲಿ ಗೋಲ್ಡನ್ ಬುಕ್ ಆಫ್ ರೆಕಾರ್ಡ್ ನಲ್ಲಿ ಹೆಸರು ದಾಖಲಿಸಿದ ರೆಮೋನಾ ಇವೆಟ್ ಪಿರೇರಾ, ದಕ್ಷಿಣ ಕನ್ನಡ ಮತ್ತು ಬಂಟ್ವಾಳ ವಕೀಲರ ಸಂಘಗಳ ಅಧ್ಯಕ್ಷ ರಿಚಾರ್ಡ್ ಕೋಸ್ಟಾ ಎಂ., ಜಿಲ್ಲೆಯ ಪ್ರಧಾನ ಸರ್ಕಾರಿ ವಕೀಲ ಎಂ.ಪಿ. ನೊರೊನ್ಹಾ ಅವರನ್ನು ಸನ್ಮಾನಿಸಲಾಯಿತು. ಸಂಘದ ಮಾಜಿ ಅಧ್ಯಕ್ಷ ಸಂತೋಷ್ ಪೀಟರ್ ಡಿ’ಸೋಜಾ ಅವರ ಸಮರ್ಪಿತ ಸೇವೆಗೆ ವಿಶೇಷ ಧನ್ಯವಾದಗಳನ್ನು ಅರ್ಪಿಸಲಾಯಿತು.
ಸಂಘದ ಆಧ್ಯಾತ್ಮಿಕ ಸಚೇತಕ ವಂದನೀಯ ಫಾ. ಜೆ.ಬಿ. ಕ್ರಾಸ್ತಾ, ಸೈಂಟ್ ಅಲೋಶಿಯಸ್ ಕಾಲೇಜಿನ ರೆಕ್ಟರ್ ಫಾ. ಮೆಲ್ವಿನ್ ಪಿಂಟೊ, ಎಲಿಯಾಸ್ ಫೆರ್ನಾಂಡಿಸ್, ನವೀನ್ ಡಿ’ಸೋಜಾ, ಅನಿಲ್ ಲೋಬೊ ಮತ್ತು ಇತರರು ಅತಿಥಿಗಳಾಗಿ ಉಪಸ್ಥಿತರಿದ್ದರು. ನೂತನ ಅಧ್ಯಕ್ಷ ಸುಶಾಂತ್ ಸಿ.ಎ. ಸಲ್ಡಾನ್ಹಾ ಸ್ವಾಗತಿಸಿ ಕಾರ್ಯದರ್ಶಿ ಲೋಲಿನಾ ಡಿ’ಸೋಜಾ ವಂದಿಸಿದರು.