ಉಡುಪಿ. ಡಿ.06 : ಕರಾವಳಿ ಭಾಗದಲ್ಲಿ ಹೈಕೋರ್ಟ್ ಪೀಠ ಸ್ಥಾಪನೆ ಹಾಗೂ ಮಂಗಳೂರಿನಲ್ಲಿ ಸಂಚಾರ ಹೈಕೋರ್ಟ್ ಪೀಠ ಸ್ಥಾಪನೆ ಉದ್ದೇಶಕ್ಕಾಗಿ ಹೈಕೋರ್ಟ್ ಪೀಠ ಹೋರಾಟ ಸಮಿತಿಯ ನಿಯೋಗ ಕರ್ನಾಟಕ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳಾದ ಗೌರವಾನ್ವಿತ ವಿಭು ಬಖ್ರು ರವರನ್ನು ಉಡುಪಿ ಸರ್ಕ್ಯೂಟ್ ಹೌಸ್ ನಲ್ಲಿ ಭೇಟಿಯಾಗಿ ಯಾಗಿ ಮನವಿಯನ್ನು ಸಲ್ಲಿಸಲಾಯಿತು.

ಹೈಕೋರ್ಟ್ ಪೀಠ ಹೋರಾಟ ಸಮಿತಿಯ ಸಂಚಾಲಕರೂ ವಿಧಾನ ಪರಿಷತ್ ನ ಸದಸ್ಯರಾದ ಶ್ರೀ ಐವನ್ ಡಿಸೋಜ ರವರು ಮುಖ್ಯ ನ್ಯಾಯಮೂರ್ತಿಗಳಾದ ವಿಭು ಬಖ್ರು ಅವರಿಗೆ ಮನವಿಯನ್ನು ಸಲ್ಲಿಸಿದರು.
ಕರಾವಳಿ ಭಾಗದಲ್ಲಿ ಹೈಕೋರ್ಟ್ ಪೀಠ ಸ್ಥಾಪಿಸುವ ಕಾರ್ಯ ಬಹಳ ಮುಖ್ಯವಾಗಿದೆ. ಪ್ರಸ್ತುತ ಈಗ ಸಾಮಾನ್ಯ ಜನರು ದೂರದ ಬೆಂಗಳೂರಿಗೆ ಹೋಗಿ ಕಾನೂನು ಹೋರಾಟದಲ್ಲಿ ತೊಡಗಿಸಿಕೊಳ್ಳಲು ಬಹಳ ಕಷ್ಟವಾಗಿದ್ದು, ಹಾಗೂ ಮಳೆಗಾಲದ ಸಂದರ್ಭದಲ್ಲಿ ದೂರದ ಬೆಂಗಳೂರಿನ ಸಂಪರ್ಕ ಆಗಾಗ ಕಡಿತಗೊಳ್ಳುವುದರಿಂದ ಜನರು ಹೈಕೋರ್ಟಿಗೆ ಸಂಚರಿಸಲು ಕಷ್ಟವನ್ನು ಅನುಭವಿಸಬೇಕಾಗಿದೆ. ಅಲ್ಲದೆ ಕರಾವಳಿ ಭಾಗ ಉಡುಪಿ ಚಿಕ್ಕಮಂಗಳೂರು ಕೊಡಗು ಜಿಲ್ಲೆಗಳ ದಾವೆಗಳ ವಿಲೇವಾರಿಯಲ್ಲಿ ವಿಳಂಬವಾಗುತ್ತಿದ್ದು ಇದರಿಂದ ಈ ಭಾಗದ ಜನರಿಗೆ ಬಹಳ ತೊಂದರೆಯಾಗುತ್ತಿದೆ ಎಂದು ಮುಖ್ಯ ನ್ಯಾಯಮೂರ್ತಿಗಳಿಗೆ ವಿವರಿಸಿದರು.
ಕರ್ನಾಟಕ ರಾಜ್ಯ ಸರ್ಕಾರದ ಮಾನ್ಯ ಮುಖ್ಯಮಂತ್ರಿಗಳು ಕರಾವಳಿ ಭಾಗದಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಗೆ ಒಲವನ್ನು ತೋರಿಸಿರುವುದರಿಂದ, ಮೊದಲಿಗೆ ಸಂಚಾರಿ ಹೈಕೋರ್ಟ್ ಪೀಠ ಸ್ಥಾಪಸುಲು ಒಪ್ಪಿಗೆ ನೀಡಬೇಕೆಂದು ವಿನಂತಿಸಿದರು.

ಈ ಮನವಿಗೆ ಪೂರಕವಾಗಿ ಸ್ಪಂದಿಸಿದ ಗೌರವಾನ್ವಿತ ಮುಖ್ಯ ನ್ಯಾಯಮೂರ್ತಿಗಳು ತಮ್ಮ ಮನವೀಯ ಬಗ್ಗೆ ಆದಷ್ಟು ಬೇಗ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. ಸಮಿತಿಯ ನಿಯೋಗದಲ್ಲಿ ಮಂಗಳೂರು ವಕೀಲ ಸಂಘದ ಅಧ್ಯಕ್ಷರಾದ ಶ್ರೀ ರಾಘವೇಂದ್ರ ಹೆಚ್. ವಿ. ಮಂಗಳೂರಿನ ಪ್ರಧಾನ ಜಿಲ್ಲಾ ಸರಕಾರಿ ವಕೀಲರಾದ ಶ್ರೀ ಎಂ ಪಿ ನರೋನ್ಹ, ಪ್ರಧಾನ ಕಾರ್ಯದರ್ಶಿ ಶ್ರೀಧರ್ ಎಚ್, ಉಡುಪಿ ವಕೀಲರ ಸಂಘದ ಅಧ್ಯಕ್ಷ ಶ್ರೀ ರೆನೋಲ್ಡ್ ಪ್ರವೀಣ್ ಕುಮಾರ್, ಪ್ರಧಾನ ಕಾರ್ಯದರ್ಶಿ ಶ್ರೀ ಚಂದ್ರಶೇಖರ್ ಶೆಟ್ಟಿ, ಉಪಾಧ್ಯಕ್ಷ ಶ್ರೀ ದೇವದಾಸ್ ವಿ. ಶೆಟ್ಟಿಗಾರ್, ಬ್ರಹ್ಮಾವರ ವಕೀಲರ ಸಂಘದ ಅಧ್ಯಕ್ಷ ಶ್ರೀ ಕಾಡೂರು ಪ್ರವೀಣ್ ಶೆಟ್ಟಿ ಉಪಸ್ಥಿತರಿದ್ದರು.

