ಪುತ್ತೂರು, ಫೆ.06: ಹಾಡು ಕೇವಲ ಶಬ್ಧವಲ್ಲ. ಅದೊಂದು ಭಾವನೆ. ಸಂಗೀತ ಹಾಗೂ ಸಾಹಿತ್ಯ ಧರ್ಮದ ಭಾಗವಾಗಿದೆ. ಈ ಕಲೆಯನ್ನು ಕಾಂಚನ ಸಂಸ್ಥೆ ಹಾಗೂ ಈ ಊರಿನ ಜನತೆ ಬೆಳೆಸಿಕೊಂಡು ಬರುತ್ತಿರುವುದು ಬಹಳ ಸಂತೋಷ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು.
ಪುತ್ತೂರಿನಲ್ಲಿ ಶುಕ್ರವಾರ ನಡೆದ 72ನೇ ವರ್ಷದ ಕಾಂಚನೋತ್ಸವ 2026 ಕಾರ್ಯಕ್ರಮದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಮಾತನಾಡಿದರು.

“ಇಂದು ನಾನು ಕೃಷಿಗೆ ಸಂಬಂಧಿಸಿದ ಅಂತರರಾಷ್ಟ್ರೀಯ ಸಮ್ಮೇಳನ ಕಾರ್ಯಕ್ರಮದಲ್ಲಿ ಭಾಗವಹಿಸಬೇಕಿತ್ತು. ಅಂತರರಾಷ್ಟ್ರೀಯ ಕಾರ್ಯಕ್ರಮವನ್ನು ಬಿಟ್ಟು ಈ ಕಾರ್ಯಕ್ರಮಕ್ಕೆ ಹೋಗುತ್ತಿದ್ದೀರಲ್ಲಾ ಎಂದು ಕೆಲವು ಮಾಧ್ಯಮ ಸ್ನೇಹಿತರು ಕೇಳಿದರು. ಅದಕ್ಕೆ ನಾನು ಹೇಳಿದೆ, ಹಳ್ಳಗಳು ಸೇರಿ ನದಿಯಾಗುತ್ತವೆ, ನದಿಗಳು ಸೇರಿ ಸಮುದ್ರವಾಗುತ್ತವೆ. ಸಮುದ್ರಗಳು ಸೇರಿ ಮಹಾಸಾಗರವಾಗುತ್ತವೆ. ಹಲವು ಸಂಸ್ಕೃತಿಗಳು ಸೇರಿ ಈ ಕರಾವಳಿ ಭಾಗ ಕರ್ನಾಟಕಕ್ಕೆ ದೊಡ್ಡ ಹೆಸರು ತಂದುಕೊಟ್ಟಿದೆ. ಈ ಮಹಾಸಾಗರದಲ್ಲಿ ಬಂದು ಮಾತನಾಡುವ ಅವಕಾಶ ಸಿಕ್ಕಿರುವುದು ನನ್ನ ಭಾಗ್ಯ. ಈ ಕಾಂಚನ ಭೂಮಿ, ಅನೇಕ ಸಂಗೀತ ವಿದ್ವಾಂಸರನ್ನು ತಯಾರು ಮಾಡಿದೆ. ನಾವು ನಮ್ಮ ಮೂಲ ಮರೆತರೆ ಯಶಸ್ಸು ಸಾಧಿಸುವುದಿಲ್ಲ. ಹೀಗಾಗಿ ನಮ್ಮ ಮೂಲವಾದ ಸಂಸ್ಕೃತಿ, ಸಾಹಿತ್ಯಕ್ಕೆ ಬೇರಾಗಿರುವ ಈ ಹಳ್ಳಿಗೆ ಹೋಗಬೇಕು ಎಂದು ಹೇಳಿದೆ. ನಾನು ಡಿಸಿಎಂ ಇರಬಹುದು ಆದರೆ ಸಂಗೀತದ ಅಡಿಪಾಯಕ್ಕೆ ಬಂದು ದಿಗ್ಗಜರನ್ನು ಭೇಟಿ ಮಾಡುವುದು ನನ್ನ ಭಾಗ್ಯ” ಎಂದು ತಿಳಿಸಿದರು.

*ಪ್ರತಿಭೆಗಳು ಅನಾವರಣಗೊಳ್ಳಲು ಅವಕಾಶ ಸಿಗಬೇಕು*
“ಅವಕಾಶ ಸಿಕ್ಕಾಗ ಪ್ರತಿಭೆಗಳು ಅನಾವರಣಗೊಳ್ಳುತ್ತವೆ. ಇದಕ್ಕೆ ನಾವು ಅವಕಾಶ ಮಾಡಿಕೊಡಬೇಕು. ಈ ದೃಷ್ಟಿಯಿಂದ ಕೆಲಸ ಮಾಡುತ್ತಿರುವ ಈ ಸಂಸ್ಥೆಗೆ ಶಕ್ತಿ ತುಂಬಬೇಕು ಎಂಬ ಉದ್ದೇಶದಿಂದ ಈ ಕಾರ್ಯಕ್ರಮಕ್ಕೆ ಬಂದಿದ್ದೇನೆ. ನಮ್ಮ ಸಂಸ್ಕೃತಿ ನಮ್ಮ ದೇಶದ ಆಸ್ತಿ. ನಮ್ಮ ಸ್ನೇಹಿತ ರಾಜಶೇಖರ ಅವರು ಧರ್ಮಸ್ಥಳದ ಘನತೆ ಉಳಿಸಲು ಹೋರಾಟ ಮಾಡಿದ್ದು, ಅವರ ಆಹ್ವಾನಕ್ಕೆ ನಾನು ಈ ಕಾರ್ಯಕ್ರಮಕ್ಕೆ ಬಂದಿದ್ದೇನೆ. ನೀವು ನಮಗೆ ಅರ್ಜಿ ಕೊಟ್ಟಿದ್ದೀರಿ, ಈಗ ನಾನು ಆ ವಿಚಾರವಾಗಿ ಮಾತನಾಡುವುದಿಲ್ಲ. ಸಮಯ ಬಂದಾಗ ನಾನು ಸೂಕ್ತ ಸಹಾಯ ಮಾಡುತ್ತೇನೆ” ಎಂದರು.

“ದೇವರು ನಮಗೆ ವರ ಹಾಗೂ ಶಾಪ ನೀಡುವುದಿಲ್ಲ. ಕೇವಲ ಅವಕಾಶ ಮಾತ್ರ ನೀಡುತ್ತಾನೆ. ನಮಗೆ ಸಿಕ್ಕ ಅವಕಾಶದಲ್ಲಿ ನಾವು ಯಾವ ರೀತಿ ಸೇವೆ ಮಾಡುತ್ತೇವೆ ಎಂಬುದು ಮುಖ್ಯ. ಸಾಹಿತ್ಯ ಹಾಗೂ ಸಂಗೀತ ಲೋಕಕ್ಕೆ ನೀವು ಶಕ್ತಿ ನೀಡುತ್ತಿದ್ದು, ಕೇವಲ ಡಿ.ಕೆ. ಶಿವಕುಮಾರ್ ಮಾತ್ರವಲ್ಲ, ಇಡೀ ಸರ್ಕಾರ ನಿಮ್ಮ ಜತೆಗಿದೆ ಎಂಬ ಮಾತನ್ನು ಹೇಳಲು ಬಯಸುತ್ತೇನೆ. ಕಳೆದ ವರ್ಷ ರಾಜ್ಯೋತ್ಸವ ಪ್ರಶಸ್ತಿ ಆಯ್ಕೆ ಮಾಡವಾಗ ನಾನು ಹಾಗೂ ಮುಖ್ಯಮಂತ್ರಿಗಳು 70 ಪ್ರಶಸ್ತಿಗಳ ಪೈಕಿ ಈ ಕರಾವಳಿ ಭಾಗಕ್ಕೆ 11 ಪ್ರಶಸ್ತಿಯನ್ನು ನೀಡಿದೆವು. ನಿಮ್ಮಲ್ಲಿರುವ ಸಾಧಕರಿಗೆ ಪ್ರಶಸ್ತಿ ಇಲ್ಲ ಎನ್ನಲು ಆಗುವುದಿಲ್ಲ. ನಿಮ್ಮಲ್ಲಿರುವ ಶಿಕ್ಷಣ, ಸಾಹಿತ್ಯ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿ ಸಾಧಕರಿದ್ದಾರೆ. ಈ ಭಾಗ ಭೂತಾರಾಧನೆ, ನಾಗಾರಾಧನೆ, ಕಂಬಳ, ಯಕ್ಷಗಾನ, ಹುಲಿವೇಷದಂತಹ ಸಂಸ್ಕೃತಿ ಹೊಂದಿದ್ದು, ದೇವಾಲಯಗಳು, ಬ್ಯಾಂಕುಗಳು, ವಿದ್ಯಾಸಂಸ್ಥೆಗಳು ಹೀಗೆ ಅನೇಕ ಕ್ಷೇತ್ರಗಳಲ್ಲಿ ಪ್ರಸಿದ್ಧಿ ಹೊಂದಿದೆ. 300 ಕಿ.ಮೀ.ಗಿಂತ ಹೆಚ್ಚು ಕರಾವಳಿ ಭಾಗವಿರುವ ಈ ಪ್ರದೇಶವನ್ನು ಅಭಿವೃದ್ಧಿ ಮಾಡಿ, ಈ ಭಾಗದ ಪ್ರತಿಭೆ ಇಲ್ಲೇ ಉಳಿಸಿಕೊಳ್ಳಲು ಕಾರ್ಯಕ್ರಮ ರೂಪಿಸಲಾಗುತ್ತಿದೆ” ಎಂದು ಹೇಳಿದರು.

“ಅಮ್ಮನ ನೆನಪು ಪ್ರೀತಿಯ ಮೂಲ, ಗುರುವಿನ ನೆನಪು ಜ್ಞಾನದ ಮೂಲ, ದೇವರ ನೆನಪು ಭಕ್ತಿಯ ಮೂಲ, ಈ ಮೂರರ ನೆನಪು ಮನುಷ್ಯತ್ವಕ್ಕೆ ಮೂಲ, ಮನುಷ್ಯತ್ವ ಮೋಕ್ಷಕ್ಕೆ ಮೂಲ. ಶ್ರೀಗಳು ಬಂಡೆ ಎಂದು ಮಾತನಾಡಿದರು. ಕಲ್ಲು ಪ್ರಕೃತಿ, ಕಡಿದರೆ ಆಕೃತಿ, ಪೂಜಿಸಿದರೆ ಸಂಸ್ಕೃತಿ. ಕಲ್ಲು ಶಿಲೆಯಾಗಬೇಕಾದರೆ ಕೆತ್ತನೆ ಮಾಡಬೇಕು. ಕಬ್ಬಿಣ, ಹಿತ್ತಾಳೆ, ತಾಮ್ರ, ಚಿನ್ನ ಬೆಳ್ಳಿ ಕಾಯಿಸಿದಾಗ ಮಾತ್ರ ಸ್ವರೂಪ ಬರುತ್ತದೆ. ಅದೇ ರೀತಿ ಈ ಬಂಡೆಗೆ ಅನೇಕ ಪೆಟ್ಟು ಬಿದ್ದು ಈಗ ಉಪಮುಖ್ಯಮಂತ್ರಿಯಾಗಿ ಇಲ್ಲಿಗೆ ಬಂದಿದ್ದೇನೆ. ಇಂದು ಶುಭಂ ಕರೋತಿ ಕಲ್ಯಾಣಂ, ಆರೋಗ್ಯ ಧನಸಂಪದಂ, ಜ್ಞಾನಶಕ್ತಿ ಸ್ವರೂಪಸ್ಯ ದೀಪ ಜ್ಯೋತಿ ಪ್ರಕಾಶಿತಂ ಎಂಬ ಶ್ಲೋಕದ ಆಶಯದಂತೆ ಎಲ್ಲರಿಗೂ ಮಂಗಳವಾಗಲಿ, ಶುಭವಾಗಲಿ, ಆರೋಗ್ಯ ಸಿಗಲಿ ಎಂದು ಜ್ಯೋತಿ ಬೆಳಗಿಸಿದ್ದೇನೆ. ಈ ದೀಪದಲ್ಲಿ ನಮ್ಮ ಕಣ್ಣಿಗೆ ಬೆಳಕು ಮಾತ್ರ ಕಾಣುತ್ತದೆ. ಅದರ ಹಿಂದೆ ಇರುವ ಎಣ್ಣೆ ಹಾಗೂ ಬತ್ತಿ ಕಾಣುವುದಿಲ್ಲ” ಎಂದರು.

“ನೀವು ಸಂಗೀತ, ಸಾಹಿತ್ಯ ಕಲಿಸುತ್ತಿದ್ದೀರಿ. ರುಪರಪಹರಿಸದ, ದಾಯಾದಿ ದಕ್ಕಿಸದ, ನೀರಿನಲ್ಲಿ ನೆನೆಯದ, ಅಗ್ನಿಯಲ್ಲಿ ಸುಡದ ಗುಪ್ತ ನಿಧಿ ಸಂಗೀತ ವಿದ್ಯೆ. ಇಂತಹ ಪವಿತ್ರವಾದ ಕಾರ್ಯಕ್ರಮದಲ್ಲಿ ಭಾಗವಹಿಸುವುದು ಬಹಳ ಸಂತೋಷ. ಈ ವಿದ್ಯೆಯನ್ನು ಸುಖ ಹಾಗೂ ದುಃಖದಲ್ಲಿ ಅನುಭವಿಸಬಹುದು. ಅಲೆಕ್ಸಾಂಡರ್ ಭಾರತವನ್ನು ವಶಪಡಿಸಿಕೊಳ್ಳಲು ಹೊರಟಾಗ ತನ್ನ ಗುರು ಅರಿಸ್ಟಾಟಲ್ ಬಳಿ ಹೋಗುತ್ತಾನೆ. ಆಗ ಅರಿಸ್ಚಾಟಲ್ ನೀನು ಭಾರತವನ್ನು ಗೆಲ್ಲಬೇಕಾದರೆ ಭಾರತದಿಂದ ಐದು ವಸ್ತು ತೆಗೆದುಕೊಂಡು ಬಂದರೆ ಭಾರತ ಗೆದ್ದಂತೆ ಎಂದು ಹೇಳಿದರಂತೆ. ರಾಮಾಯಣ, ಮಹಾಭಾರತದಂತಹ ಪವಿತ್ರ ಗ್ರಂಥ, ಕೃಷ್ಣನ ಕೊಳಲು, ಗಂಗಾ ಜಲ ಹಾಗೂ ಭಾರತದ ತತ್ವಜ್ಞಾನಿಯನ್ನು ತೆಗೆದುಕೊಂಡು ಬಂದರೆ ಭಾರತವನ್ನೇ ವಶಪಡಿಸಿಕೊಂಡಂತೆ ಎಂದು ಹೇಳಿದರಂತೆ. ಈ ಕೊಳಲನ್ನು ಬಿದಿರಿನಿಂದ ತಯಾರು ಮಾಡುತ್ತಾರೆ. ಆದರೆ ಈ ಬಿದಿರಿಗೆ ತನ್ನಲ್ಲಿ ಇಂತಹ ನಾದವಿದೆ ಎಂಬುದೇ ಗೊತ್ತಿಲ್ಲ. ಇದನ್ನು ನುಡಿಸುವವರಿಗೆ ಮಾತ್ರ ಇದರ ಅರಿವಿದೆ. ಪ್ರತಿಯೊಬ್ಬ ಮನುಷ್ಯನಲ್ಲೂ ಅವನದೇ ಆದ ವೈಶಿಷ್ಟ್ಯವಿರುತ್ತದೆ” ಎಂದರು.

“ಪರೋಪಕಾರಾಯ ಫಲಂತಿ ವೃಕ್ಷಾಃ ಪರೋಪಕಾರಾಯ ವಹಂತಿ ನದ್ಯಃ | ಪರೋಪಕಾರಾಯ ದುಹಂತಿ ಗಾವಃ ಪರೋಪಕಾರಾರ್ಥಮಿದಂ ಶರೀರಂ. ಅಂದರೆ ನದಿ ನೀರು, ಮರದ ಹಣ್ಣು, ಹಸುವಿನ ಹಾಲು ಹೇಗೆ ಬೇರೆಯವರ ಉಪಕಾರಕ್ಕೆ ಇದೆಯೋ ಅದೇ ರೀತಿ ನಮ್ಮ ದೇಹ, ಬದುಕು ಕೂಡ ಪರೋಪಕಾರಕ್ಕೆ ಇರಬೇಕು. ಶ್ರೀಗಳು ಹಾಗೂ ಧರ್ಮಾಧಿಕಾರಿಗಳು ತಮ್ಮ ಬದುಕನ್ನು ಸಮಾಜಕ್ಕಾಗಿ ತ್ಯಾಗ ಮಾಡಿದ್ದಾರೆ. ನಾವು ಎಷ್ಟೇ ಸಂಪಾದನ ಮಾಡಿದರೂ ಎಂತಹುದೇ ಊಟ ಮಾಡಿದರೆ, ಬಟ್ಟೆ ಹಾಕಿದರೂ 1 ಲಕ್ಷದ ಮೇಲೆ ಹೆಚ್ಚು ವೆಚ್ಚವಾಗುವುದಿಲ್ಲ. ಇದು ಪವಿತ್ರವಾದ ಭೂಮಿ. ಮರಕ್ಕೆ ಬೇರು ಎಷ್ಟು ಮುಖ್ಯವೋ, ಮುನುಷ್ಯನಿಗೆ ನಂಬಿಕೆ ಬಹಳ ಮುಖ್ಯ” ಎಂದು ಹೇಳಿದರು.

“ಮಹಾಭಾರತದಲ್ಲಿ ಭೀಷ್ಮ ಧರ್ಮರಾಯನಿಗೆ ಒಂದು ಮಾತು ಹೇಳುತ್ತಾನೆ. ಮನುಷ್ಯ ಹುಟ್ಟುವಾಗ ನಾಲ್ಕು ಋಣದಲ್ಲಿ ಜನಿಸುತ್ತಾನೆ. ಅದು ತಂದೆ ತಾಯಿ, ದೇವರು, ಗುರು ಹಾಗೂ ಸಮಾಜದ ಋಣವಾಗಿದ್ದು, ಈ ನಾಲ್ಕು ಋಣವನ್ನು ಧರ್ಮದ ಮೂಲಕವೇ ತೀರಿಸಬೇಕು ಎಂದು ಹೇಳುತ್ತಾನೆ” ಎಂದರು.

“ನಾನು ಇತ್ತೀಚೆಗೆ ನಮ್ಮ ಕ್ಷೇತ್ರದಲ್ಲಿ ಕನಕೋತ್ಸವ ಕಾರ್ಯಕ್ರಮ ಮಾಡಿದೆ. ಹಳ್ಳಿಯಲ್ಲಿರುವ ಪ್ರತಿಭೆಗಳಿಗೆ ವೇದಿಕೆ ನೀಡಬೇಕು ಎಂದು ಈ ಕಾರ್ಯಕ್ರಮ ಆಯೋಜಿಸಿದ್ದೆವು. ನಮ್ಮ ಕ್ಷೇತ್ರದಲ್ಲಿ 75 ಸಾವಿರ ಮನೆ ಮುಂದೆ ರಂಗೋಲಿ ಬಿಡುವ ಮೂಲಕ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ವಾಯ್ಸ್ ಆಫ್ ಕನಕಪುರ ಎಂಬ ಕಾರ್ಯಕ್ರಮದಲ್ಲಿ 8 ಸಾವಿರ ಮಕ್ಕಳು, ಯುವಕರು ತಮ್ಮ ಗಾನ ಪ್ರತಿಭೆಯನ್ನು ಪ್ರದರ್ಶಿಸಿದರು. ಕೌಟುಂಬಿಕ ವೇಷಭೂಷಣ ಸ್ಪರ್ಧೆಯಲ್ಲಿ 9 ಸಾವಿರ ದಂಪತಿಗಳು ಭಾಗವಹಿಸಿದ್ದರು. ಚಿತ್ರಕಲೆ ಸ್ಪರ್ಧೆಯಲ್ಲಿ 17 ಸಾವಿರ ಮಕ್ಕಳು ಭಾಗವಹಿಸಿದ್ದರು. ಎಸ್ಎಸ್ಎಲ್ ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ತ್ತಮ ಅಂಕ ಗಳಿಸಿದ 8700 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಿತರಿಸಲಾಯಿತು” ಎಂದು ತಿಳಿಸಿದರು. ಹೊಸನಗರದ ಶ್ರೀ ರಾಮಚಂದ್ರಪುರ ಮಠಾಧೀಶರಾದ ಶ್ರೀ ರಾಘವೇಶ್ವರ ಭಾರತಿ ಸ್ವಾಮೀಜಿ, ಧರ್ಮಸ್ಥಳದ ಧರ್ಮಾಧಿಕಾರಿ ಡಾಕ್ಟರ್ ಶ್ರೀ ವೀರೇಂದ್ರ ಹೆಗ್ಗಡೆ, ಶಾಸಕ ಅಶೋಕ್ ಕುಮಾರ್ ರೈ, ವೇದಬ್ರಹ್ಮ ವಿಷ್ಣು ಪ್ರಸಾದ್ ಹೆಬ್ಬಾರ್, ಡಾ. ನಾಗರತ್ನ ಹೆಬ್ಬಾರ್ ಮತ್ತಿತರರು ಉಪಸ್ಥಿತರಿದ್ದರು.

