canaratvnews

ಭಜರಂಗದಳ, ಬಿಜೆಪಿಯ ಕುತಂತ್ರದಿಂದ ಕ್ರೈಸ್ತ ಸನ್ಯಾಸಿನಿಯರ ಬಂಧನ: ಜೆ.ಆರ್. ಲೋಬೊ

ಮಹಾನಗರ, ಆಗಸ್ಟ್ 1: ಛತ್ತೀಸ್‌ಗಢದಲ್ಲಿ ಕೇರಳ ಮೂಲದ ಇಬ್ಬರು ಕ್ರೈಸ್ತ ಸನ್ಯಾಸಿನಿಯರನ್ನು ಸುಳ್ಳು ಆರೋಪ ಹೊರಿಸಿ ಬಂಧಿಸಲಾಗಿದೆ. ಅವರನ್ನು ತತ್‌ಕ್ಷಣ ಬಿಡುಗಡೆ ಮಾಡಬೇಕು ಎಂದು ಮಾಜಿ ಶಾಸಕ ಜೆ.ಆರ್. ಲೋಬೊ ಆಗ್ರಹಿಸಿದ್ದಾರೆ.

ಶುಕ್ರವಾರ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಕೇರಳದ ತ್ರಿಶೂರು ಮೂಲದ ಕ್ರೈಸ್ತ ಸನ್ಯಾಸಿನಿಯರಾದ ವಂದನ ಫ್ರಾನ್ಸಿಸ್ ಮತ್ತು ಪ್ರೀತಿ ಮೇರಿ ಅವರನ್ನು ಮೂವರು ಯುವತಿಯರು ಹಾಗೂ ಓರ್ವ ಯುವಕನೊಂದಿಗೆ ಪ್ರಯಾಣಿಸುತ್ತಿದ್ದಾಗ ಮತಾಂತರ ಹಾಗೂ ಮಾನವ ಕಳ್ಳ ಸಾಗಾಣಿಕೆಯ ಸುಳ್ಳು ಆರೋಪ ಹೊರಿಸಿ ಬಂಧಿಸಲಾಗಿದೆ. ಭಜರಂಗದಳ ಹಾಗೂ ಬಿಜೆಪಿಯ ಕುತಂತ್ರದಿಂದ ಬಂಧಿಸಲಾಗಿದೆ. ಇದು ಧಾರ್ಮಿಕ ಹಾಗೂ ಮಾನವ ಹಕ್ಕುಗಳ ಕಗ್ಗೊಲೆ. ಕೇರಳದಲ್ಲಿ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಅಲ್ಲಿನ ಬಿಜೆಪಿ ಘಟನೆ ಖಂಡಿಸಿದೆ. ಇದು ನ್ಯಾಯಾಂಗ ವಿಚಾರವಾಗಿದ್ದು, ನಮಗೆ ಮಧ್ಯ ಪ್ರವೇಶ ಸಾಧ್ಯವಿಲ್ಲ ಎಂದು ಛತ್ತಿಸ್‌ಗಡ ಸರಕಾರ ಹೇಳುತ್ತಿದೆ. ಆದರೆ, ಸರಕಾರದ ಪಿತೂರಿಯಿಂದಲೇ ಸನ್ಯಾಸಿನಿಯರನ್ನು ಬಂಽಸಲಾಗಿದೆ. ಬಿಜೆಪಿ ತನ್ನ ದ್ವಂದ್ವ ನಿಲುವನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದರು.

ಮಂಗಳೂರಿನಲ್ಲಿ ಶೇ. 90 ಕ್ರೈಸ್ತರು ಇರಬೇಕಿತ್ತು.

ಕ್ರೈಸ್ತರ ಮೇಲೆ ಮತಾಂತರ ನಡೆಸಿದ್ದೇ ಆಗಿದ್ದರೆ, ಮಂಗಳೂರಿನಲ್ಲಿ ಶೇ. 90ರಷ್ಟು ಕ್ರೈಸ್ತರೇ ಇರಬೇಕಿತ್ತು. ಒಂದು ಕಾಲದಲ್ಲಿ ಮಂಗಳೂರಿನ ಶಿಕ್ಷಣ ಸಂಸ್ಥೆಗಳನ್ನು ಕ್ರೈಸ್ತರು ನಡೆಸುತ್ತಿದ್ದರು. ಆರಂಭದಲ್ಲಿ ಮಂಗಳೂರಿನಲ್ಲಿ ಸರಕಾರಿ ಕಾಲೇಜು, ಅಲೋಶಿಯಸ್ ಕಾಲೇಜು ಹಾಗೂ ಆಗ್ನೆಸ್ ಕಾಲೇಜುಗಳು ಮಾತ್ರವೇ ಇತ್ತು. ಅವರು ಎಷ್ಟು ಮತಾಂತರ ಮಾಡಿದ್ದಾರೆ ಎಂದು ಪ್ರಶ್ನಿಸಿದರು. ಪ್ರಧಾನಿ ನರೇಂದ್ರ ಮೋದಿ ಅವರಿಗೆ ಜಗತ್ತು ಸುತ್ತಲು ಸಮಯವಿದೆ. ಆದರೆ, ಮಣಿಪುರಕ್ಕೆ ಭೇಟಿ ನೀಡಲು ಸಮಯವಿಲ್ಲ ಎಂದು ಆರೋಪಿಸಿದರು.

ದ.ಕ. ಜಿಲ್ಲಾ ಕಾಂಗ್ರೆಸ್ ಖಂಡನೆ

ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ ಮಾತನಾಡಿ, ಕ್ರೈಸ್ತ ಸನ್ಯಾಸಿನಿಯರ ಮೇಲೆ ಸುಳ್ಳು ಆರೋಪ ಹೊರಿಸಿ ಬಂಧಿಸಿರುವ ಘಟನೆಯನ್ನು ದ.ಕ. ಜಿಲ್ಲಾ ಕಾಂಗ್ರೆಸ್ ಖಂಡಿಸುತ್ತದೆ. ಛತ್ತೀಸ್‌ಘಡ ಸರಕಾರ ಹಾಗೂ ಅಲ್ಲಿನ ಪೊಲೀಸ್ ಇಲಾಖೆ ಸನ್ಯಾಸಿನಿಯರ ಜತೆಗಿದ್ದವರ ಹೇಳಿಕೆಯನ್ನು ಪಡೆದುಕೊಂಡಿಲ್ಲ. ಕೇವಲ ಭಜರಂಗದಳದವರ ಹೇಳಿಕೆ ಪಡೆದುಕೊಂಡು ನಾನ್ ಬೇಲೇಬಲ್ ಕೇಸ್ ದಾಖಲಿಸಿರುವುದು ಖಂಡನೀಯ. ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಮಾತ್ರವೇ ಈ ರೀತಿಯಾಗುತ್ತಿದೆ. ಕೇಂದ್ರ ಸರಕಾರ ಈ ವಿಚಾರದಲ್ಲಿ ಮಧ್ಯ ಪ್ರವೇಶಿಸಿ ಸನ್ಯಾಸಿನಿಯರನ್ನು ಬಿಡುಗಡೆ ಮಾಡಬೇಕು ಎಂದರು.
ಸನ್ಯಾಸಿನಿಯರ ಬಂಧನದ ವಿಚಾರದಲ್ಲಿ ಬಿಜೆಪಿ ಇಬ್ಬಗೆಯ ನೀತಿ ಅನುಸರಿಸುತ್ತಿದೆ. ಈ ಹಿಂದೆ ಗೋಮಾಂಸ ನಿಷೇಧ ಎಂದು ಹೇಳಿ ಮೇಘಾಲಯ, ಗೋವಾದಲ್ಲಿ ಗೋಮಾಂಸ ನಮ್ಮ ಆಹಾರ ನಾವು ನಿಷೇಽಸುವುದಿಲ್ಲ ಎಂದಿದ್ದರು. ಗೋಮಾಂಸ ರಫ್ತಿಯಲ್ಲಿ ಭಾರತ ಎರಡನೇ ಸ್ಥಾನದಲ್ಲಿದ್ದು, ಉತ್ತರ ಪ್ರದೇಶದಿಂದಲೇ ರಫ್ತಾಗುತ್ತಿದೆ. ಮುಸ್ಲಿಮರ ಹೆಸರಿನಲ್ಲಿ ಹಿಂದೂಗಳೇ ರಫ್ತು ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.
ಕಾಂಗ್ರೆಸ್ ಮುಖಂಡರಾದ ಟಿ.ಕೆ. ಸುಧೀರ್, ಶಾಹುಲ್ ಹಮೀದ್, ಅಪ್ಪಿ, ಶಾಲೆಟ್ ಪಿಂಟೊ, ಚೇತನ್ ಬೆಂಗ್ರೆ, ಅಲ್ವಿನ್ ಪ್ರಕಾಶ್, ಜೋನ್ ಮೊಂತೇರೊ, ನೆಲ್ಸನ್ ಮೊಂತೇರೊ, ಪ್ರಕಾಶ್ ಸಾಲ್ಯಾನ್, ಪ್ರೇಮ್‌ನಾಥ್, ಉದಯ ಆಚಾರ್ ಇದ್ದರು.

Share News
Exit mobile version