• Home  
  • ಜೆಮೀಮಾ ರೊಡ್ರಿಗಸ್; ಅಂದು ಅವಮಾನ ಇಂದು ವಿಶ್ವದಿಂದಲೇ ಸನ್ಮಾನ; ಭಾರತ ಮಹಿಳಾ ತಂಡಕ್ಕೆ ಕರಾವಳಿ ಹುಡುಗಿಯೇ ಆಸರೆ!
- DAKSHINA KANNADA - INETRNATIONAL - NATIONAL

ಜೆಮೀಮಾ ರೊಡ್ರಿಗಸ್; ಅಂದು ಅವಮಾನ ಇಂದು ವಿಶ್ವದಿಂದಲೇ ಸನ್ಮಾನ; ಭಾರತ ಮಹಿಳಾ ತಂಡಕ್ಕೆ ಕರಾವಳಿ ಹುಡುಗಿಯೇ ಆಸರೆ!

ಮಂಗಳೂರು: ಜೆಮೀಮಾ ರೊಡ್ರಿಗಸ್ ಬಗ್ಗೆ ಇಂದು ಜಗತ್ತು ಮಾತನಾಡುತ್ತಿದೆ. ಅಸಾಧ್ಯ ಎಣಿಸಿದ್ದನ್ನು ಸಾಧ್ಯವಾಗಿಸಿದ ಕುಡ್ಲದ ಕುವರಿ. 339 ರನ್ ಸಿಡಿಸಿ ಘರ್ಜಿಸುತ್ತಿದ್ದ ಬಲಿಷ್ಟ ಆಸ್ಟ್ರೇಲಿಯಾ ತಂಡದ ವಿಶ್ವ ಕಪ್ ಗೆಲ್ಲುವ ಕಣಸಿಗೆ ಸಿಂಹಸ್ವಪ್ನಳಾದ ಆಟಗಾರ್ತಿ. ಇನ್ನೇನು ಭಾರತ ಆಸಿಸ್ ಗೆ ಶರಣಾಗುತ್ತದೆ ಎನ್ನುವಷ್ಟರಲ್ಲಿ ದಿಟ್ಟವಾಗಿ ಹೋರಾಡಿದ ಯುವತಿ.

ಭಾರತ ವನಿತೆಯರ ತಂಡ ಫೈನಲ್ ಗೆ ಲಗ್ಗೆ ಇಡಲು ಜೆಮೀಮಾ ರೊಡ್ರಿಗಸ್ ಶ್ರಮ ಅವಿರತ. 134 ಎಸೆತಗಳಲ್ಲಿ ಅಜೇಯ 127 ರನ್ ಸಿಡಿಸಿ ಭಾರತದ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ. ಗೆಲುವಿನ ಬಳಿಕ ಆಕೆಯ ಕಣ್ಣಿರು ಅಪ್ಪನಿಗೆ ಸಮರ್ಪಿತವಾಗಿತ್ತು. ಅಪ್ಪನಿಗಾದ ಅವಮಾನಕ್ಕಾಗಿ ಗೆದ್ದೆ ಎನ್ನುವ ಭಾವುಕತೆ. ಅವಮಾನವಾದ ನೆಲದಲ್ಲೇ ತಂದೆ ಹೆಮ್ಮೆ ಪಡುವ ಸಾಧನೆಯನ್ನು ಜೆಮೀಮಾ ಮಾಡಿ ತೋರಿಸಿದ್ದಾಳೆ. ಅವಮಾನಿಸಿದವರಿಗೆ ಬ್ಯಾಟ್ ನಿಂದಲೇ ಉತ್ತರಿಸಿ ವಿಶ್ವವೇ ಸಮ್ಮಾನ ಮಾಡುವ ಸಾಧನೆ ಮೆರೆದಿದ್ದಾರೆ.

ಅಪ್ಪ ಅಂದರೆ ಆಕಾಶ.. ಹೆಣ್ಣು ಮಕ್ಕಳ ಪಾಲಿಗಂತೂ ಅಪ್ಪನೇ ಹೀರೋ.. ಅಪ್ಪನೇ ಸರ್ವಸ್ವ.. ಅಂತಹ ಅಪ್ಪನಿಗೆ ಅವಮಾನವಾದರೆ ಯಾವ ಮಗಳು ತಾನೇ ಸಹಿಸಿಯಾಳು..?

ಮಗಳ ಕ್ರಿಕೆಟ್ ಭವಿಷ್ಯಕ್ಕಾಗಿ ತಮ್ಮ ಜೀವನವನ್ನೇ ಸವೆಸಿದ ತಂದೆ ಅವರು.. ಬದುಕು ಕಟ್ಟಿಕೊಳ್ಳಬೇಕಾದ ವಯಸ್ಸಿನಲ್ಲಿ ಮಗಳಿಗೆ ಕ್ರಿಕೆಟ್ ಭವಿಷ್ಯ ಕಟ್ಟಿಕೊಡಲು ನಿಂತಿದ್ದ ತಂದೆ.. ಅದೆಷ್ಟೋ ದಿನಗಳನ್ನು ನಿದ್ದೆಯಿಲ್ಲದೆ ಕಳೆದಿದ್ದ ತಂದೆಗೆ ಕ್ರಿಕೆಟ್ ಮೈದಾನದಲ್ಲಿ ಮಗಳ ಪ್ರತಿ ಹೆಜ್ಜೆಯೂ ಹೊಸ ಭರವಸೆ ಮೂಡಿಸುತ್ತಿತ್ತು. 17 ವರ್ಷ ತುಂಬುವ ಮೊದಲೇ ಏಕದಿನ ಕ್ರಿಕೆಟ್’ನಲ್ಲಿ ಮಗಳು ದ್ವಿಶತಕ (ದೇಶೀಯ ಕ್ರಿಕೆಟ್) ಬಾರಿಸಿ ಬಿಟ್ಟಳು.

ಜೆಮಿಮಾ ರೊಡ್ರಿಗಸ್ ಮುಂಬೈ ಹುಡುಗಿಯ ಮೂಲ ಕರಾವಳಿ ಜಿಲ್ಲೆ ಮಂಗಳೂರು. ತಂದೆ ಐವನ್ ರೊಡ್ರಿಗಸ್ ಅವರು ಹೊನ್ನಾವರ ಮೂಲದವರಾಗಿದ್ದು, ಅವರ ತಾಯಿ ಮನೆ ಕಟೀಲ್. ಮುಂಬೈನಲ್ಲಿ ನೆಲೆಸಿರುವ ಕರಾವಳಿ ಕುಟುಂಬದಲ್ಲಿ ಹುಟ್ಟಿದವಳು ಜೆಮಿಮಾ. ತಂದೆ-ತಾಯಿ ಕೋಚಿಂಗ್ ಕ್ಲಾಸ್’ಗಳನ್ನು ನಡೆಸುತ್ತಾ ಮಗಳ ಕ್ರಿಕೆಟ್ ಭವಿಷ್ಯಕ್ಕೆ ಬುನಾದಿ ಹಾಕಿದ್ದರು. ಆಕೆಯ ತಾಯಿ ಲವಿಟಾ ಮೊಂತೇರೊ, ಬಂಟ್ವಾಳದ ತೊಡಂಬಿಲ ನಿವಾಸಿ. ಅಂದರೆ ಜಮೀಮಾ ಅವರ ಅಜ್ಜಿ ಮನೆ ತೊಡಂಬಿಲ.

17ನೇ ವರ್ಷಕ್ಕೆ ಮೊದಲ ಬಾರಿ ಭಾರತ ತಂಡಕ್ಕೆ ಆಯ್ಕೆಯಾದಾಗ ಜೆಮಿಮಾ ರಾಡ್ರಿಗ್ಸ್ ಜೊತೆ ಮಾತನಾಡಿದ್ದೆ. ‘’ಭಾರತ ಪರ ಏಕದಿನ ದ್ವಿಶತಕ ಬಾರಿಸಬೇಕೆಂಬ ಕನಸಿದೆ’’ ಎಂದಿದ್ದಳು. ಮಿಥಾಲಿ ರಾಜ್ ಅವರಿಗೆ ಸರಿಯಾದ ಆಟಗಾರ್ತಿ ಇವರೇ ಎಂದು ಆಗಲೇ ಅನ್ನಿಸಿತ್ತು.
ಭಾರತ ತಂಡಕ್ಕೆ ಪದಾರ್ಪಣೆ ಮಾಡುತ್ತಿದ್ದಂತೆ ಜೆಮಿಮಾ ರಾಡ್ರಿಗ್ಸ್’ಗೆ ಮುಂಬೈ ಜಿಮ್ಖಾನ ಕ್ಲಬ್‌ನ ಸದಸ್ಯತ್ವ ಸಿಕ್ಕಿತ್ತು.

ಕ್ಲಬ್ ಎಂದ ಮೇಲೆ ಅಲ್ಲಿ ಕುಟುಂಬದ ಕಾರ್ಯಕ್ರಮಗಳು, ಸಾಮಾಜಿಕ ಕಾರ್ಯಕ್ರಮಗಳ ಆಯೋಜನೆ ಸಾಮಾನ್ಯ. ಮಗಳ ಸದಸ್ಯತ್ವದ ಹೆಸರಲ್ಲಿ ಜೆಮಿಮಾ ತಂದೆ ಜಿಮ್ಖಾನಾ ಕ್ಲಬ್’ನಲ್ಲಿ ಸ್ನೇಹಿತರು, ಕುಟುಂಬದವರನ್ನು ಸೇರಿಸಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದರು. ಅದೇ ಅವರಿಗೆ ಮುಳುವಾಯಿತು. ಕ್ಲಬ್ ಆವರಣವನ್ನು ಧಾರ್ಮಿಕ ಕಾರ್ಯಕ್ರಮಗಳಿಗೆ ಮತ್ತು ಮತಾಂತರಕ್ಕೆ ಬಳಸುತ್ತಿದ್ದರು ಎಂಬ ಆರೋಪವನ್ನು ಇವಾನ್ ರಾಡ್ರಿಗ್ಸ್ ಮೇಲೆ ಹೊರಿಸಲಾಯಿತು. ಜೆಮಿಮಾ ರಾಡ್ರಿಗ್ಸ್’ಗೆ ನೀಡಿದ್ದ ಜಿಮ್ಖಾನಾ ಕ್ಲಬ್’ನ 3 ವರ್ಷದ ಸದಸ್ಯತ್ವವನ್ನು ರದ್ದುಗೊಳಿಸಲಾಯಿತು.

ತಂದೆಯ ಮೇಲೆ ಹೊರಿಸಲಾದ ಆರೋಪ, ಕ್ಲಬ್ ಸದಸ್ಯತ್ವ ರದ್ದು ಪಡಿಸುವ ಮೂಲಕ ತನ್ನ ಹೆಸರಿಗೆ ಅಂಟಿಸಿದ ಕಳಂಕದಿಂದ ಜೆಮಿಮಾ ಘಾಸಿಗೊಂಡು ಬಿಟ್ಟಳು. ಕಾಕತಾಳೀಯವೋ, ಉದ್ದೇಶಪೂರ್ವಕವೋ ಎಂಬಂತೆ ಭಾರತ ತಂಡದಲ್ಲಿ ಅವರ ಸ್ಥಾನವೂ ಅಲುಗಾಡಲಾರಂಭಿಸಿತು.

ಜೆಮಿಮಾ ಮೂಲತಃ ಅಗ್ರಕ್ರಮಾಂಕದ ಬ್ಯಾಟರ್. ಅವರನ್ನು ಕೆಳಕ್ರಮಾಂಕಕ್ಕೆ ತಳ್ಳಲಾಯಿತು. ಈ ವಿಶ್ವಕಪ್ ಟೂರ್ನಿಯ ಕೆಲ ಪಂದ್ಯಗಳಲ್ಲಿ ಆಕೆಯನ್ನು ಆಡಿಸಲೇ ಇಲ್ಲ. ಅಮೋಲ್ ಮಜುಮ್ದಾರ್’ನಂತಹ ಯೋಗ್ಯ ಕೋಚ್ ಕಣ್ಣಳತೆಯಲ್ಲೇ ಇದೆಲ್ಲಾ ನಡೆದು ಹೋಯಿತು.

ಇಂಗ್ಲೆಂಡ್ ವಿರುದ್ಧ ಗೆಲ್ಲಲೇಬೇಕಾದ ಪಂದ್ಯದಲ್ಲಿ ಸೋತಾಗ, ಕೈಯಲ್ಲಿದ್ದ ಗೆಲುವನ್ನು ಕೈಚೆಲ್ಲಿದಾಗ ತಂಡದ ಆಡಳಿತ ಮಂಡಳಿಗೆ ಜೆಮಿಮಾ ನೆನಪಾಗಿದ್ದರು.

ನ್ಯೂಜಿಲೆಂಡ್ ವಿರುದ್ಧದ ಮಾಡು ಇಲ್ಲ ಮಡಿ ಪಂದ್ಯದಲ್ಲಿ ಜೆಮಿಮಾರನ್ನು ಆಕೆಯ ನೆಚ್ಚಿನ ಮೂರನೇ ಕ್ರಮಾಂಕದಲ್ಲಿ ಆಡಿಸಲಾಯಿತು. 55 ಎಸೆತಗಳಲ್ಲಿ ಅಜೇಯ 76 ರನ್. ಭಾರತದ ಗೆಲುವಿಗೆ ತನ್ನ ಕೊಡುಗೆ ನೀಡಿದ್ದರು ಜೆಮಿಮಾ.

ಸ್ಮೃತಿ ಮಂಧನ ಸಹಿತ 59 ರನ್’ಗಳ ಒಳಗೆ ಭಾರತದ ಎರಡು ವಿಕೆಟ್’ಗಳು ಬಿದ್ದಾಗ ಅಲ್ಲಿಂದ ಎದ್ದು ಬಂದು ವಿಜಯ ವೇದಿಕೆ ಮೇಲೆ ನಿಲ್ಲುವುದು ಸುಲಭದ ಕೆಲಸವಾಗಿರಲಿಲ್ಲ. ಅದು ಸಾಧ್ಯವಾಗುವಂತೆ ಮಾಡಿದ್ದು ಜೆಮಿಮಾ ರಾಡ್ರಿಗ್ಸ್ ಬಾರಿಸಿದ ಶತಕ ಮತ್ತು ಆಕೆ ಹರ್ಮನ್ ಪ್ರೀತ್ ಕೌರ್ ಜೊತೆ ಆಡಿದ ದೊಡ್ಡ ಶತಕದ ಜೊತೆಯಾಟ.
ಅದು ಜೆಮಿಮಾ ಎಂತಹ ಕ್ವಾಲಿಟಿ ಕ್ರಿಕೆಟರ್ ಎಂಬುದನ್ನು ಕ್ರಿಕೆಟ್ ಜಗತ್ತಿಗೆ ಪರಿಚಯಿಸಿದ ಇನ್ನಿಂಗ್ಸ್..

ವಿಶ್ವಕಪ್ ಸೆಮಿಫೈನಲ್.. 339 ರನ್ ಟಾರ್ಗೆಟ್.. ಅದೂ ಆಸ್ಟ್ರೇಲಿಯಾ ವಿರುದ್ಧ. ದೊಡ್ಡ ಶತಕ ಬಾರಿಸಿದ ಜೆಮಿಮಾ ಅಸಾಧ್ಯವನ್ನು ಸಾಧ್ಯವಾಗಿಸಿಯೇ ಬಿಟ್ಟಳು. ಪಂದ್ಯ ಗೆದ್ದುಕೊಟ್ಟವಳು ಮೈದಾನದಲ್ಲೇ ಬಿಕ್ಕಿ ಬಿಕ್ಕಿ ಅತ್ತು ಬಿಟ್ಟಳು. ಪ್ರೇಕ್ಷಕರ ಗ್ಯಾಲರಿಯಲ್ಲಿ ಕುಳಿತಿದ್ದ ತಂದೆಯತ್ತ ಕೈ ತೋರಿಸಿ ‘ನಿಮಗಾದ ಅವಮಾನಕ್ಕೆ ನಾನು ಉತ್ತರ ಕೊಟ್ಟಿದ್ದೇನೆ’ ಎಂಬಂತೆ ಸನ್ನೆ ಮಾಡಿದಳು. 3ನೇ ಕ್ರಮಾಂಕದಲ್ಲಿ ಆಡುವ ಅವಕಾಶ ಕೊಟ್ಟವರಿಗೆ ಕೈ ಜೋಡಿಸಿ ಕೃತಜ್ಞತೆ ಅರ್ಪಿಸಿದಳು.

Share News

About Us

Lorem ipsum dol consectetur adipiscing neque any adipiscing the ni consectetur the a any adipiscing.

Email Us: [email protected]

Contact: +5-784-8894-678