ಮಂಗಳೂರು, ಜ.4: ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾನೂನು ಕಾಲೇಜು,ಮಂಗಳೂರು ಇವರ ಜಂಟಿ ಆಶ್ರಯದಲ್ಲಿ ಮುಂಬಯಿಯ ಕವಯಿತ್ರಿ
ಜಯಲಕ್ಷ್ಮೀ ಎಸ್. ಜೋಕಟ್ಟೆಯವರ ಕವಿತೆಗಳು ಸಂಕಲನವು ಅವರ ಹುಟ್ಟುಹಬ್ಬದ ದಿನವಾದ ಜನವರಿ 3ರಂದು ಎಸ್ ಡಿ ಎಂ ಲಾ ಕಾಲೇಜ್ ಸಭಾಗೃಹದಲ್ಲಿ ಬಿಡುಗಡೆಗೊಂಡಿತು.

ಕವಿತಾಸಂಕಲನ ಬಿಡುಗಡೆ ಮಾಡಿದ ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ಡಾ. ಎಂ. ಪಿ. ಶ್ರೀನಾಥ್ ಅವರು ಮಾತನಾಡುತ್ತಾ ಜಯಲಕ್ಷ್ಮೀ ಅವರ ಹುಟ್ಟುಹಬ್ಬದಂದೇ ಅವರ ಚೊಚ್ಚಲ ಕವಿತಾ ಸಂಕಲನ ಕನ್ನಡ ಸಾಹಿತ್ಯ ಪರಿಷತ್ತು ವೇದಿಕೆಯಿಂದ ಬಿಡುಗಡೆ ಆಗುತ್ತಿರುವುದು ಸಂತೋಷವಾದರೆ ಅವರು ಇಂದು ನಮ್ಮ ಜೊತೆಗಿಲ್ಲ ಅನ್ನುವುದಕ್ಕೆ ದು:ಖವೂ ಆಗುತ್ತಿದೆ. ಮುಂಬಯಿಯಲ್ಲಿ ಸಕ್ರಿಯ ಪತ್ರಕರ್ತರಾಗಿರುವ ಅವರ ಪತಿ ಶ್ರೀನಿವಾಸ ಜೋಕಟ್ಟೆಯವರು ನನಗೆ ಮೂರು ದಶಕಗಳಿಂದ ಪರಿಚಿತರು. ಮುಂಬಯಿಯ ಸಾಹಿತ್ಯ ವಲಯವನ್ನು ನಾವು ಮರೆಯುವಂತಿಲ್ಲ,ಅಲ್ಲಿನ ವಿವಿ ಕನ್ನಡವಿಭಾಗದ ವಿದ್ಯಾರ್ಥಿ ನಾನು. ಅಲ್ಲಿನವರ ನಾಡಪ್ರೇಮ ಶ್ಲಾಘನೀಯ ಎಂದು ಮುಂಬಯಿ ಕನ್ನಡಿಗರ ಕನ್ನಡ ಚಟುವಟಿಕೆಗಳನ್ನು ಇಲ್ಕಿ ನೆನಪಿಸಿ ಕೊಂಡರು.
ಮುಖ್ಯ ಅತಿಥಿ ಮಂಗಳೂರಿನ ಹಿರಿಯ ಸಾಹಿತಿ, ಉಪನ್ಯಾಸಕಿ ಡಾ. ಮೀನಾಕ್ಷಿ ರಾಮಚಂದ್ರ ಅವರು ಎರಡು ದಶಕಗಳ ನಂತರ ಮತ್ತೆ ಶ್ರೀನಿವಾಸ ಜೋಕಟ್ಟೆ ಅವರ ಜೊತೆ ವೇದಿಕೆಯಲ್ಲಿದ್ದೇನೆ. ಆದರೆ ಇಂದು ಖುಷಿ ನೋವು ಎರಡೂ ಜೊತೆಗಿದೆ. ಜಯಲಕ್ಷ್ಮೀ ಅವರ ಎಲ್ಲ ಕವಿತೆಗಳನ್ನು ಓದಿ ಬರೆಯುವೆ. ನಾವು ಬದುಕಿನಲ್ಲಿನ ನೋವನ್ನು ಮರೆತು ದೃಢ ಮನಸ್ಸು ಕಾಪಾಡಿಕೊಂಡು ಮುಂದುವರಿಯಬೇಕಾದ ಅನಿವಾರ್ಯತೆ ನಮ್ಮ ಎದುರಿಗಿದೆ. ಮುಂದಿನ ದಿನಗಳು ಆಶಾದಾಯಕವಾಗಿರಲಿ ಎಂದು ಹಾರೈಸುವೆ ಎಂದರು.
‘ಜಯಲಕ್ಷ್ಮೀ ಜೋಕಟ್ಟೆಯವರ ಕವಿತೆಗಳು’ ಕೃತಿಯ ಸಂಪಾದಕರಾದ ಅವರ ಪತಿ ಶ್ರೀನಿವಾಸ ಜೋಕಟ್ಟೆ ಮಾತನಾಡುತ್ತಾ ಏಳೆಂಟು ವರ್ಷ ಕವಿತಾ ಕ್ಷೇತ್ರದಲ್ಲಿ ಆಸಕ್ತಿ ಹೊಂದಿದ್ದ ಜಯಲಕ್ಷ್ಮೀ ಅವರು ಕನ್ನಡದ ಹಲವು ಪತ್ರಿಕೆಗಳಲ್ಲಿ ಕವನಗಳನ್ನು ಪ್ರಕಟಿಸಿದ್ದರು. ಅವರು ತಾವು ಬರೆದಂತೆ ಕವಿತೆಗಳನ್ನು ವಿಮರ್ಶಕಿ ಸುನಂದಾ ಪ್ರಕಾಶ ಕಡಮೆ ಅವರಿಗೆ ಪ್ರತಿಕ್ರಿಯೆಗಾಗಿ ಕಳುಹಿಸುತ್ತಿದ್ದರು. ಸುನಂದಾ ಕಡಮೆ ಅವರು ಆ ಕವನಗಳನ್ನು ಕಂಪ್ಯೂಟರ್ ನಲ್ಲಿ ಡಿಲೀಟ್ ಮಾಡದೆ ಹಾಗೆಯೇ ಉಳಿಸಿಕೊಂಡಿದ್ದರಿಂದಲೇ ಈ ಕವಿತಾ ಸಂಕಲನ ಹೊರಬರಲು ಸಾಧ್ಯವಾಯಿತು ಎನ್ನುತ್ತಾ, ನಂತರ ಜಯಲಕ್ಷ್ಮಿಯವರು ತಮ್ಮ ಕವಿತಾ ರಚನೆ ನಿಲ್ಲಿಸಿ ನನ್ನ ಬರಹಗಳಿಗೇ ಹೆಚ್ಚಿನ ಮಹತ್ವ ನೀಡುತ್ತಾ ಬಂದರು ಎಂದು ನೆನಪಿಸಿಕೊಂಡರು.
ವೇದಿಕೆಯಲ್ಲಿ ಉಪಸ್ಥಿತರಿದ್ದ ಮಂಗಳೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ಮಂಜುನಾಥ ಎಸ್. ರೇವಣಕರ್ ಅವರು ಚೊಚ್ಚಲ ಕವಿತಾಸಂಕಲನಕ್ಕೆ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಜಯಲಕ್ಷ್ಮೀ ಅವರ ಮಧುಬನ- ಮಳೆಗಾನ ಎಂಬ ಕವಿತೆಯನ್ನು ಹಳೆಮನೆ ರಾಜಶೇಖರ ಉಜಿರೆ ವಾಚನಮಾಡಿದರು.
ರೇಮಂಡ್ ಡಿಕುನಾ ತಾಕೊಡೆ, ಹಿರಿಯ ಪತ್ರಕರ್ತರು ಮಂಗಳೂರು ಇವರು ಸ್ವಾಗತಿಸಿದರು.ಶ್ರೀಮತಿ ಅರುಣ ನಾಗರಾಜ ಸಾಹಿತಿಗಳು ಮಂಗಳೂರು ಇವರು ವಂದನಾರ್ಪಣೆ ಸಲ್ಲಿಸಿದರು. ಕಾರ್ಯಕ್ರಮದ ನಿರೂಪಣೆಯನ್ನು ವಿಮರ್ಶಕ ಹಳೆಮನೆ ರಾಜಶೇಖರ ಉಜಿರೆ ಇವರು ಮಾಡಿದರು.