ಮಂಗಳೂರು, ಮಾ.09: ದಕ್ಷಿಣ ಕನ್ನಡ ಜಿಲ್ಲೆಯು ಶೈಕ್ಷಣಿಕವಾಗಿ ಉನ್ನತ ಸ್ಥಾನದಲ್ಲಿದ್ದರೂ, ಇಲ್ಲಿನ ಪ್ರತಿಭಾವಂತರು ವೃತ್ತಿ ಬದುಕಿಗೆ ಹೊರರಾಜ್ಯ ಮತ್ತು ವಿದೇಶಗಳನ್ನು ಅವಲಂಭಿಸುತ್ತಿದ್ದು, ಇದರಿಂದ ಸ್ಥಳೀಯ ಕೌಶಲ್ಯ ಉದ್ಯೋಗಗಳಿಗೆ ಅರ್ಹರು ಲಭ್ಯವಾಗದಿರುವುದು ಕಳವಳಕಾರಿಯಾಗಿದೆ ಎಂದು ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಜಯಲಕ್ಷ್ಮೀ ಹೇಳಿದ್ದಾರೆ.

ಜಿಲ್ಲಾ ಕೌಶಲ್ಯ ಅಭಿವೃದ್ಧಿ ಯೋಜನೆ ಕುರಿತು ಮಾಹಿತಿ ನೀಡಿದ ನೋಡಲ್ ಅಧಿಕಾರಿ, ಕೆ.ಪಿ.ಟಿ. ಹಿರಿಯ ಉಪನ್ಯಾಸಕ ಹರೀಶ್ ಸಿ.ಪಿ. ಮಾತನಾಡಿ, ಮುಂದಿನ 5 ವರ್ಷದಲ್ಲಿ ಜಿಲ್ಲೆಯಲ್ಲಿರುವ ಕೈಗಾರಿಕೆ, ಉದ್ಯಮಗಳಲ್ಲಿ ಲಭ್ಯವಿರುವ ಉದ್ಯೋಗಗಳು, ಅಲ್ಲಿಗೆ ಅಗತ್ಯವಿರುವ ಕೌಶಲ್ಯಗಳಿಗೆ ತಕ್ಕಂತೆ ಜಿಲ್ಲೆಯಲ್ಲಿರುವ ಶಿಕ್ಷಣ ಸಂಸ್ಥೆಗಳಿಂದ ಮಾನವ ಸಂಪನ್ಮೂಲಗಳು ಲಭ್ಯವಾಗುವಂತೆ ಯೋಜನೆ ರೂಪಿಸುವುದು ಯೋಜನೆಯ ಮುಖ್ಯ ಉದ್ದೇಶವಾಗಿದೆ ಎಂದರು.
ಜಿಲ್ಲೆಯಲ್ಲಿ ಲಭ್ಯವಾಗುವ ಉದ್ಯೋಗಗಳಿಗೆ ಕೌಶಲ್ಯಯುತ ವಿದ್ಯಾರ್ಥಿಗಳನ್ನು ಸೃಷ್ಟಿಸಲು ಜಿಲ್ಲೆಯಲ್ಲಿರುವ ಉನ್ನತ ಶಿಕ್ಷಣ ಸಂಸ್ಥೆಗಳು, ಪಾಲಿಟೆಕ್ನಿಕ್, ಐಟಿಐ, ಕೆಜಿಟಿಟಿಐ ಮತ್ತಿತರ ಶಿಕ್ಷಣ ಸಂಸ್ಥೆಗಳಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸೃಷ್ಟಿಸಲು ಒತ್ತು ನೀಡಲಾಗುವುದು. ಇದಕ್ಕಾಗಿ ಕೈಗಾರಿಕೆ, ಉದ್ಯಮಗಳಿಂದಲೂ ಸೂಕ್ತ ಮಾಹಿತಿ ಪಡೆದು,ಅದಕ್ಕೆ ತಕ್ಕಂತೆ ಮಾನವ ಸಂಪನ್ಮೂಲಗಳನ್ನು ಒದಗಿಸುವುದು ಇದರ ಉದ್ದೇಶ ಎಂದು ಅವರು ಹೇಳಿದರು.
ಜಿಲ್ಲೆಯಲ್ಲಿ ಪ್ರತಿಭಾವಂತರು ಉದ್ಯೋಗಕ್ಕಾಗಿ ವಲಸೆ ಹೋಗುತ್ತಿದ್ದು, ಈ ಬಗ್ಗೆ ಅಧ್ಯಯನ ಮಾಡಲಾಗುವುದು. ಜಿಲ್ಲೆಯ ಐಟಿಐಗಳಲ್ಲಿ 22 ವಿವಿಧ ವೃತ್ತಿಗಳು, ಪಾಲಿಟೆಕ್ನಿಕ್‍ಗಳಲ್ಲಿ 10 ವಿಭಾಗಗಳು, ಜಿಟಿಟಿಸಿಯಲ್ಲಿ 2 ವಿಭಾಗಗಳನ್ನು ಕಲಿಸಲಾಗುತ್ತಿದೆ. ಇದು ಜಿಲ್ಲೆಯಲ್ಲಿ ಸಾಕಷ್ಟು ಕೌಶಲ್ಯಯುತ ಮಾನವ ಸಂಪನ್ಮೂಲಗಳನ್ನು ಒದಗಿಸಲು ಪೂರಕವಾಗಿದೆ. ಆದರೂ ಜಿಲ್ಲೆಯಲ್ಲಿ ಕೌಶಲ್ಯ ಉದ್ಯೋಗಗಳಿಗೆ ಸಾಕಷ್ಟು ಬೇಡಿಕೆ ಇದ್ದರೂ, ಅರ್ಹರು ಲಭ್ಯವಾಗದಿರುವ ಬಗ್ಗೆ ಕೈಗಾರಿಕಾ ಕ್ಷೇತ್ರದಿಂದ ಮಾಹಿತಿ ಬಂದಿದೆ ಎಂದು ಅವರು ಹೇಳಿದರು.
ಕೆನರಾ ಸಣ್ಣ ಕೈಗಾರಿಕಾ ಸಂಘದ ಅಧ್ಯಕ್ಷ ಎಂ.ಡಿ. ಪೂಜಾರಿ ಮಾತನಾಡಿ, ಐಟಿಐ, ಡಿಪ್ಲೊಮಾ ಮತ್ತಿತರ ತಾಂತ್ರಿಕ ಶಿಕ್ಷಣ ಕಲಿತು ಹೊರಬರುವ ವಿದ್ಯಾರ್ಥಿಗಳಿಗೆ ಸೂಕ್ತ ಉದ್ಯೋಗ ದೊರಕುವಂತಾಗಲು ಆಯಾ ಶಿಕ್ಷಣ ಸಂಸ್ಥೆಗಳು ನಿರಂತರ ಗಮನಹರಿಸಬೇಕು. ಅವರಿಗೆ ಸಮರ್ಪಕ ತರಬೇತಿ ದೊರಕಿದರೆ, ಉದ್ಯೋಗ ಮಾರುಕಟ್ಟೆಯಲ್ಲಿ ಸಮರ್ಥರಾಗಲಿದ್ದಾರೆ. ಇತೀಚೆಗೆ ಐಟಿಐ, ಡಿಪ್ಲೊಮಾ ಸೇರಿದಂತೆ ತಾಂತ್ರಿಕ ಶಿಕ್ಷಣ ಕಲಿತ ವಿದ್ಯಾರ್ಥಿಗಳು ಡೆಲಿವರಿ ಉದ್ಯೋಗ ಸೇರಿದಂತೆ ಬೇರೆ ಕ್ಷೇತ್ರದತ್ತ ಮುಖ ಮಾಡುತ್ತಿರುವುದು ಕಳವಳಕಾರಿಯಾಗಿದೆ. ಇದನ್ನು ತಪ್ಪಿಸಿ, ಕಲಿತ ಶಿಕ್ಷಣದಲ್ಲಿಯೇ ಉದ್ಯೋಗ ದೊರಕಿಸಲು ಜಿಲ್ಲಾ ಕೌಶಲ್ಯ ಅಭಿವೃದ್ಧಿ ಯೋಜನೆಯು ಒತ್ತು ನೀಡಬೇಕು ಎಂದು ಹೇಳಿದರು.
ಸಭೆಯಲ್ಲಿ ನಗರಾಭಿವೃದ್ಧಿ ಯೋಜನಾ ನಿರ್ದೇಶಕ ಡಾ. ಸಂತೋಷ್ ಕುಮಾರ್, ಕೈಗಾರಿಕಾ ಜಂಟಿ ನಿರ್ದೇಶಕ ಗೋಕುಲ್‍ದಾಸ್ ನಾಯಕ್, ಎನ್‍ಐಟಿಕೆ ಉಪನ್ಯಾಸಕ ಪ್ರೊ ಉದಯ ಭಟ್ ಮತ್ತಿತರರು ಇದ್ದರು. ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಪ್ರದೀಪ್ ಡಿಸೋಜ ಸ್ವಾಗತಿಸಿದರು.