ನವದೆಹಲಿ: ‘ಆಪರೇಷನ್ ಸಿಂದೂರ್’ ಕಾರ್ಯಾಚರಣೆಯ ನಂತರದ ರಾಜತಾಂತ್ರಿಕ ಕಾರ್ಯತಂತ್ರದ ಭಾಗವಾಗಿ, ಪಾಕಿಸ್ತಾನ ಪ್ರಚೋದಿತ ಭಯೋತ್ಪಾದನೆ ಬಗ್ಗೆ ಜಾಗತಿಕ ಸಮುದಾಯಕ್ಕೆ ವಾಸ್ತವಾಂಶಗಳನ್ನು ವಿವರಿಸಲು ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರನ್ನು ಒಳಗೊಂಡ ಡಿಎಂಕೆ ಕನಿಮೊಳಿ ನೇತೃತ್ವದ ಸರ್ವಪಕ್ಷಗಳ ನಿಯೋಗವು ಇಂದು ಬೆಳಗ್ಗೆ ವಿದೇಶಕ್ಕೆ ಪ್ರಯಾಣ ಬೆಳೆಸಿದೆ.
ಗುರುವಾರ ಬೆಳಗ್ಗೆ ದೆಹಲಿ ವಿಮಾನ ನಿಲ್ದಾಣ ಮೂಲಕ ಬೆಳಗ್ಗೆ 11 ಗಂಟೆಗೆ ಹೊರಟ ತಂಡದಲ್ಲಿ ಕ್ಯಾ. ಚೌಟ ಅವರ ಜತೆಗೆ ಡಿಎಂಕೆ ಪಕ್ಷದ ಸಂಸದೆ ಕನಿಮೋಳಿ, ಸಮಾಜವಾದಿ ಪಕ್ಷದ ರಾಜೀವ್ ರೈ, ನ್ಯಾಷನಲ್ ಕಾನ್ಫರೆನ್ಸ್ ಸಂಸದ ಮಿಯಾನ್ ಅಲ್ತಾಫ್ ಅಹ್ಮದ್, ಆರ್‌ಜೆಡಿ ಪಕ್ಷದ ಪ್ರೇಮ್ ಚಂದ್ ಗುಪ್ತಾ, ಎಎಪಿ ಪಕ್ಷದ ಅಶೋಕ್ ಮಿತ್ತಲ್, ನೇಪಾಳದ ಮಾಜಿ ರಾಯಭಾರಿ ಮಂಜೀವ್ ಪುರಿ ಹಾಗೂ ಫ್ರಾನ್ಸ್‌ನ ಮಾಜಿ ರಾಯಭಾರಿ ಜಾವೇದ್ ಅಶ್ರಫ್ ಈ ನಿಯೋಗದಲ್ಲಿದ್ದಾರೆ. ಈ ನಿಯೋಗವು ಮೊದಲು ರಷ್ಯಾ ದೇಶಕ್ಕೆ ತೆರಳುತ್ತಿದೆ. ನಂತರ ಸ್ಲೊವೇನಿಯಾ (ಮೇ 25), ಗ್ರೀಸ್ (ಮೇ 27), ಲಾಟ್ವಿಯಾ (ಮೇ 29) ಮತ್ತು ಸ್ಪೇನ್‌ಗೂ (ಮೇ 31) ಭೇಟಿ ನೀಡಲಿದ್ದಾರೆ.
ವಿದೇಶಕ್ಕೆ ತೆರಳುವ ಮುನ್ನ ಮಾಧ್ಯಮದ ಜತೆಗೆ ಮಾತನಾಡಿದ ದಕ್ಷಿಣ ಕನ್ನಡ ಸಂಸದ ಕ್ಯಾ. ಚೌಟ, ” ಮೊದಲ ಬಾರಿಗೆ ಸಂಸದನಾಗಿರುವ ಹಾಗೂ ಸೇನೆಯಲ್ಲಿ ಸೇವೆ ಸಲ್ಲಿಸಿದ ಓರ್ವ ಯೋಧನಾಗಿರುವ ನನಗೆ ಭಯೋತ್ಪಾದನೆ ವಿರುದ್ಧ ಅದರಲ್ಲೂ ನಿರ್ದಿಷ್ಟವಾಗಿ ಪಾಕಿಸ್ತಾನ ಪ್ರೇರಿತ ಜಿಹಾದಿ ಉಗ್ರಗಾಮಿತ್ವದ ಅಪಾಯಗಳ ಬಗ್ಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದಲ್ಲಿ ಮುನ್ನಡೆಯುತ್ತಿರುವ ಭಾರತದ ದೃಢ ಮತ್ತು ಒಗ್ಗಟ್ಟಿನ ಸಂದೇಶವನ್ನು ಜಾಗತಿಕ ಮಟ್ಟದಲ್ಲಿ ಸಾರುವುದಕ್ಕೆ ಈ ಅಪರೂಪದ ಅವಕಾಶ ದೊರಕಿರುವುದು ಹಾಗು ನಿಯೋಗದ ಭಾಗವಾಗಿರುವುದು ಬಹಳ ಹೆಮ್ಮೆ ಮತ್ತು ಸೌಭಾಗ್ಯದ ಸಂಗತಿ.
ಪ್ರಧಾನಮಂತ್ರಿ ಮೋದಿ ಅವರ ಸಂದೇಶದಂತೆ ಭಯೋತ್ಪಾದನೆ ಮತ್ತು ಮಾತುಕತೆ ಒಟ್ಟಿಗೆ ನಡೆಯಲು ಸಾಧ್ಯವಿಲ್ಲ. ಹಾಗೆಯೇ ಭಯೋತ್ಪಾದನೆ ಮತ್ತು ವ್ಯಾಪಾರ ಒಟ್ಟಿಗೆ ಸಾಗಲು ಸಾಧ್ಯವಿಲ್ಲ. ಅಷ್ಟೇಅಲ್ಲ, ನೀರು ಮತ್ತು ರಕ್ತ ಎಂದಿಗೂ ಒಟ್ಟಿಗೆ ಹರಿಯಲು ಸಾಧ್ಯವಿಲ್ಲ ಎಂಬುದನ್ನು ಸ್ಪಷ್ಟವಾಗಿ ಹೇಳಿದ್ದಾರೆ. ಭಾರತದ ನಿಲುವು ಬಹಳ ಸ್ಪಷ್ಟವಾಗಿದ್ದು, ಹೀಗಿರುವಾಗ ನಮ್ಮ ಸರ್ವಪಕ್ಷ ನಿಯೋಗವು ಪಾಕಿಸ್ತಾನ ಹರಡಲು ಯತ್ನಿಸುತ್ತಿರುವ ಸುಳ್ಳಿನ ಕಥೆಯನ್ನು ಜಾಗತಿಕವಾಗಿಯೂ ಬಯಲಿಗೆಳೆಯಲಿದೆ. ಪಾಕಿಸ್ತಾನ ಪ್ರೇರಿತ ಭಯೋತ್ಪಾದನೆಯ ವಿರುದ್ಧ ಹೋರಾಡುವ ನಮ್ಮ ಸಂಕಲ್ಪ ದೃಢವಾಗಿದೆ. ನಮ್ಮ ದೇಶವು ವಿಕಸಿತ ಭಾರತದತ್ತ ಹೆಜ್ಜೆ ಹಾಕುತ್ತಿರುವ ಈ ಮಹತ್ವದ ಕಾಲಘಟ್ಟದಲ್ಲಿ, ನಮ್ಮ ದೇಶದ ಜನತೆ, ಭವಿಷ್ಯ ಮತ್ತು ಪ್ರಗತಿಯ ಮೇಲೆ ಭಯೋತ್ಪಾದನೆಯ ಕರಿನೆರಳು ಬೀಳಲು ನಾವೆಂದಿಗೂ ಬಿಡುವುದಿಲ್ಲ” ಎಂದು ಹೇಳಿದ್ದಾರೆ.