ಮಂಗಳೂರು, ಜೂ. 3: ಐಪಿಎಲ್ ಇತಿಹಾಸದಲ್ಲೇ ಚರಿತ್ರೆ ನಿರ್ಮಾಣವಾಗಿದ್ದು, ಆರ್ ಸಿಬಿ ಮೊದಲ ಬಾರಿಗೆ ಐಪಿಎಲ್ ಗೆದ್ದು ಬೀಗಿದೆ. ಕಳೆದ 18 ವರ್ಷಗಳಿಂದ ವಿರಾಟ್ ಕೊಹ್ಲಿ ಉಳಿಸಿಕೊಂಡು ಬಂದಿದ್ದ ನಿಯತ್ತಿನ ಫಲವಾಗಿದೆ.

ಕೊಹ್ಲಿ ಕಳೆದ 18 ವರ್ಷಗಳಿಂದ ಆರ್ ಸಿಬಿ ಪರವಾಗಿಯೇ ಆಡಿದ್ದರು. ಪ್ರತೀ ಐಪಿಎಲ್ ಸಂದರ್ಭದಲ್ಲೂ ಅಭಿಮಾನಿಗಳು ಕಪ್ ನಮ್ಮದೇ ಎನ್ನುತ್ತಿದ್ದರು. ಕನ್ನಡಿಗರು ಕೂಡ ಆರ್ ಸಿಬಿ ಬಿಟ್ಟು ಇತರ ಫ್ಯಾಂಚಯಿಸಿಗೆ ಹೋದರೂ ಕೊಹ್ಲಿ ಆರ್ ಸಿಬಿಗೆ ಕೈ ಕೊಡಲಿಲ್ಲ. ಹಣದಾಸೆಗೆ ಬೇರೆ ತಂಡ ಸೇರಲಿಲ್ಲ. ಒಂದಲ್ಲ ಒಂದು ದಿನ ಆರ್ ಸಿಬಿಗೂ ದೀಪಾವಳಿ ಬರಬಹುದೆಂಬ ನಿರೀಕ್ಷೆಯಲ್ಲಿದ್ದರು. ಅದು 2025ರ ಜೂನ್ 3ರಂದು ನಿಜವಾಗಿದೆ. ರಾಜ್ಯ, ದೇಶದೆಲ್ಲೆಡೆ ಆರ್ ಸಿಬಿ ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ. ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸುತ್ತಿದ್ದಾರೆ. ಕೊಹ್ಲಿಗೆ ಗೆಲುವಿನ ವಿದಾಯ ಹೇಳುತ್ತಿದ್ದಾರೆ.
ಸಿಎಂ ಸಿದ್ದರಾಮಯ್ಯ ಅಭಿನಂದನೆ:
ಐಪಿಎಲ್ ಫೈನಲ್ ಪಂದ್ಯದಲ್ಲಿ ಪಂಜಾಬ್ ತಂಡವನ್ನು ಬಗ್ಗುಬಡಿದು ಕಪ್ ಮುಡಿಗೇರಿಸಿಕೊಂಡ ಆರ್‌ಸಿಬಿ ತಂಡಕ್ಕೆ ಅಭಿನಂದನೆಗಳು. ಇಡೀ ಪಂದ್ಯಾವಳಿಯಲ್ಲಿ ಒಂದು ತಂಡವಾಗಿ ಸಂಘಟಿತ ಪ್ರದರ್ಶನ ನೀಡುವ ಮೂಲಕ ಕೋಟ್ಯಂತರ ಅಭಿಮಾನಿಗಳ ಕನಸನ್ನು ಈ ದಿನ ಆರ್‌ಸಿಬಿಯ ಹುಡುಗರು ನನಸಾಗಿಸಿದ್ದಾರೆ.
ಆರ್‌ಸಿಬಿಯ ಈ ವಿಜಯದಲ್ಲಿ ವಿರಾಟ್ ಕೋಹ್ಲಿಯ 18 ವರ್ಷಗಳ ಕಾಲದ ತಪಸ್ಸಿದೆ, ನಿಷ್ಠೆ, ಬದ್ಧತೆಯಿದೆ. ಬೌಲಿಂಗ್, ಬ್ಯಾಟಿಂಗ್, ಫೀಲ್ಡಿಂಗ್ ಹೀಗೆ ಎಲ್ಲಾ ವಿಭಾಗದಲ್ಲೂ ಆರ್‌ಸಿಬಿ ಪ್ರತಿ ಆಟಗಾರರು ಚಾಂಪಿಯನ್ ಪ್ರದರ್ಶನ ನೀಡಿದ್ದಾರೆ ಎನ್ನುವುದರಲ್ಲಿ ಅನುಮಾನವೇ ಇಲ್ಲ.
ಇದು ಇತಿಹಾಸ ಸೃಷ್ಟಿಸಿದ ದಿನ..
ಕೊನೆಯದಾಗಿ, ಈ ಸಲ ಕಪ್ ನಮ್ದೆ ಎಂದು ತಮ್ಮ ಎಕ್ಸ್ ಖಾತೆಯಲ್ಲಿ ಸಂಭ್ರಮ ಹಂಚಿಕೊಂಡಿದ್ದಾರೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಭಿಮಾನಿಗಳು ಹಾಗೂ ತಂಡದ 17 ವರ್ಷದ ಕನಸು ಕೊನೆಗೂ ಸಾಕಾರವಾಗಿದೆ. ಅಹಮದಾಬಾದ್‌ನಲ್ಲಿ ನಡೆದ ಐಪಿಎಲ್ ಫೈನಲ್‌ನಲ್ಲಿ ಆರ್‌ಸಿಬಿ ಸಂಘಟಿತ ಪ್ರದರ್ಶನ ನೀಡಿ, ಪಂಜಾಬ್ ಕಿಂಗ್ಸ್ ತಂಡವನ್ನು ಮಣಿಸಿ, ಚೊಚ್ಚಲ ಬಾರಿಗೆ ಟ್ರೋಫಿಗೆ ಮುತ್ತಿಟ್ಟ ದಾಖಲೆಯನ್ನು ಬರೆಯಿತು. ಮೂರು ಐಪಿಎಲ್ ಫೈನಲ್‌ನಲ್ಲಿ ನಿರಾಸೆ ಹೊಂದಿದ್ದ ಆರ್‌ಸಿಬಿ, ನಾಲ್ಕನೇ ಪ್ರಯತ್ನದಲ್ಲಿ ಯಶಸ್ವಿಯಾಗಿ ಟ್ರೋಫಿ ಎತ್ತುವಲ್ಲಿ ಸಫಲವಾಯಿತು. ಈ ಮೂಲಕ ರಜತ್ ಪಾಟಿದಾರ್ ಮುಂದಾಳತ್ವದ ಆರ್‌ಸಿಬಿ ಐಪಿಎಲ್ ದಾಖಲೆಯ ಪುಟಕ್ಕೆ ಎಂಟ್ರಿ ಪಡೆಯಿತು.
18ನೇ ಆವೃತ್ತಿಯ ಐಪಿಎಲ್ ನಮ್ಮದೇ ಎನ್ನುವ ಆಸೆಯೊಂದಿಗೆ ಆರ್‌ಸಿಬಿ ಅಭಿಯಾನವನ್ನು ಆರಂಭಿಸಿತು. ಅಮೋಘ ಪ್ರದರ್ಶನ ನೀಡಿದ ಆರ್‌ಸಿಬಿ ತನ್ನ ಘೋಷ ವಾಕ್ಯ ಈ ಸಲಾ ಕಪ್ ನಮ್ದೇ ಎನ್ನುವುದನ್ನು ನಿಜವಾಗಿಸಿತು. ಅಹಮದಾಬಾದ್ ಮೈದಾನದಲ್ಲಿ ಕೆಂಪು ಸಮೂದ್ರದ ಮಧ್ಯೆ ಆರ್‌ಸಿಬಿ ಪಂಜಾಬ್ ತಂಡವನ್ನು ಮಣಿಸಿ ಅಬ್ಬರಿಸಿತು. ಈ ಮೂಲಕ ಆರ್‌ಸಿಬಿ 17 ವರ್ಷಗಳ ಬಳಿಕ ಮಾಡದ ಸಾಧನೆಯನ್ನು 2025ರಲ್ಲಿ ಮಾಡಿ ಬೀಗಿತು.
ಆರ್ ಸಿಬಿ ನೀಡಿದ 191 ರನ್ ಗಳ ಸವಾಲಿನ ಗುರಿ ಬೆನ್ನು ಹತ್ತಿದ ಪಂಜಾಬ್ ಕಿಂಗ್ಸ್ ತಂಡ ನಿಗಧಿತ 20 ಓವರ್ ನಲ್ಲಿ 7 ವಿಕೆಟ್ ನಷ್ಟಕ್ಕೆ 184 ರನ್ ಗಳನ್ನಷ್ಟೇ ಗಳಿಸಲು ಶಕ್ತವಾಯಿತು. ಪಂಜಾಬ್ ಪರ ಪ್ರಿಯಾಂಶ್ ಆರ್ಯ 24 ರನ್ ಗಳಿಸಿದರೆ, ಪ್ರಭ್ ಸಿಮ್ರನ್ ಸಿಂಗ್ 26 ರನ್ ಗಳಿಸಿ ಔಟಾದರು.
ನಾಯಕ ಶ್ರೇಯಸ್ ಅಯ್ಯರ್ ಕೇವಲ 1 ರನ್ ಗಳಿಸಿ ರೊಮಾರಿಯೋ ಶೆಫರ್ಡ್ ಗೆ ವಿಕೆಟ್ ಒಪ್ಪಿಸಿದರು. ಆದರೆ ಈ ಹಂತದಲ್ಲಿ ಪಂಜಾಬ್ ಇನ್ನಿಂಗ್ಸ್ ಗೆ ಬಲ ನೀಡಿದ ಜಾಶ್ ಇಂಗ್ಲಿಸ್ 23 ಎಸೆತಗಳಲ್ಲಿ 39 ರನ್ ಗಳಿಸಿದರು. ಆದರೆ ಕೃನಾಲ್ ಪಾಂಡ್ಯಾಗೆ ವಿಕೆಟ್ ಒಪ್ಪಿಸಿದರು.
ಪಂಜಾಬ್ ಇನ್ನಿಂಗ್ಸ್ ಜೀವ ತುಂಬಿದ್ದು ನೇಹಲ್ ವಧೇರಾ (15). ಆದರೆ ಅವರ ರನ್ ಗಳಿಕೆ ಕೂಡ 15ಕ್ಕೇ ಸೀಮಿತವಾಯಿತು. ಅಪಾಯಕಾರಿ ಪರಿಣಮಿಸಿದ್ದ ವಧೇರಾರನ್ನು ಭುವನೇಶ್ವರ್ ಕುಮಾರ್ ಔಟ್ ಮಾಡಿದರು. ಬಳಿಕ ಕ್ರೀಸ್ ಗೆ ಬಂದ ಮಾರ್ಕಸ್ ಸ್ಟಾಯ್ನಿಸ್ ಸಿಕ್ಸರ್ ಭಾರಿಸಿ 2ನೇ ಎಸೆತದಲ್ಲೇ ಭುವನೇಶ್ವರ್ ಕುಮಾರ್ ಗೆ ವಿಕೆಟ್ ಒಪ್ಪಿಸಿದರು.
ಶಶಾಂಕ್ ಸಿಂಗ್ ಡೇಂಜರ್; ಕಪ್ ಗೆಲ್ಲೋದು ಜಸ್ಟ್ ಮಿಸ್:
ಇನ್ನು ಈ ಇನ್ನಿಂಗ್ಸ್ ನಲ್ಲಿ ಪಂಜಾಬ್ ಪರ ಅಂತಿಮ ಹಂತದಲ್ಲಿ ಹೋರಾಟ ನಡೆಸಿದ್ದು ಶಶಾಂಕ್ ಸಿಂಗ್, ಕೇವಲ 30 ಎಸೆತಗಳಲ್ಲಿ 6 ಸಿಕ್ಸರ್ ಮತ್ತು 3 ಬೌಂಡರಿ ನೆರವಿನಿಂದ ಅಜೇಯ 61 ರನ್ ಗಳಿಸಿದರೂ ತಂಡವನ್ನು ಸೋಲಿನಿಂದ ಪಾರು ಮಾಡಲು ಸಾಧ್ಯವಾಗಿಲಿಲ್ಲ. ಅಂತಿಮವಾಗಿ ಪಂಜಾಬ್ ನಿಗಧಿತ 20 ಓವರ್ ನಲ್ಲಿ 7 ವಿಕೆಟ್ ನಷ್ಟಕ್ಕೆ 184 ರನ್ ಗಳಿಸಿ ಕೇವಲ 6 ರನ್ ಅಂತರದಲ್ಲಿ ಸೋಲು ಕಂಡಿತು. ಅಂತಿಮ ಓವರ್ ನ ಮೊದಲ ಎರಡು ಎಸೆತಗಳು ಶಶಾಂಕ್ ಬ್ಯಾಟ್ ಗೆ ಕನೆಕ್ಟ್ ಅಗಿದ್ದರೆ, ಆರ್ ಸಿ ಬಿ ಕಪ್ ಗೆಲುವಿನ ಕನಸು ಭಗ್ನವಾಗುತ್ತಿತ್ತು.
ಆರ್ ಸಿಬಿ ಪರ ಭುವನೇಶ್ವರ್ ಕುಮಾರ್ ಮತ್ತು ಕೃನಾಲ್ ಪಾಂಡ್ಯ ತಲಾ 2 ವಿಕೆಟ್ ಪಡೆದರೆ, ಯಶ್ ದಯಾಳ್, ಜಾಶ್ ಹೇಜಲ್ ವುಡ್ ಮತ್ತು ರೊಮಾರಿಯೋ ಶೆಫರ್ಡ್ ತಲಾ 1 ವಿಕೆಟ್ ಪಡೆದರು.