ಮಂಗಳೂರು, ಫೆಬ್ರವರಿ 24 : ನಗರದ ಬಿಕರ್ನಕಟ್ಟೆಯಲ್ಲಿರುವ ಇನ್ಫಂಟ್ ಜೀಸಸ್ ಶ್ರೈನ್‌ನಲ್ಲಿ ಮುಂಬರುವ ವಾರ್ಷಿಕ ಪರೀಕ್ಷೆಗಳನ್ನು ಎದುರಿಸಲಿರುವ ವಿದ್ಯಾರ್ಥಿಗಳ ಯಶಸ್ಸಿಗಾಗಿ ಮತ್ತು ಅವರ ಉಜ್ವಲ ಭವಿಷ್ಯಕ್ಕಾಗಿ ವಿಶೇಷ ಪ್ರಾರ್ಥನಾ ವಿಧಿಯನ್ನು ಶನಿವಾರ ಆಯೋಜಿಸಲಾಗಿತ್ತು.
ಬಲಿಪೂಜೆಯ ನಂತರ ಪರಮಪ್ರಸಾದದ ಆರಾಧನೆ ನಡೆಯಿತು. ಈ ವೇಳೆ ಪರೀಕ್ಷಾರ್ಥಿಗಳು, ಅವರ ಪೋಷಕರು ಮತ್ತು ಮಾರ್ಗದರ್ಶನ ನೀಡುವ ಶಿಕ್ಷಕರಿಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ಬಳಿಕ ಶ್ರೈನ್‌ನ ಸಂಪ್ರದಾಯದಂತೆ ಮಕ್ಕಳಿಗೆ ಪವಿತ್ರ ತೈಲದಿಂದ ಅಭಿಷೇಕ ಮಾಡಿ ಆಶೀರ್ವಾದ ನೀಡಲಾಯಿತು.
ಮಂಗಳೂರು ಧರ್ಮಪ್ರಾಂತ್ಯವು ಈ ವರ್ಷವನ್ನು ‘ಮಕ್ಕಳ ವರ್ಷ’ ಎಂದು ಘೋಷಿಸಿರುವ ಹಿನ್ನೆಲೆಯಲ್ಲಿ ಈ ಪ್ರಾರ್ಥನಾ ಕೂಟಕ್ಕೆ ಹೆಚ್ಚಿನ ಮಹತ್ವ ಲಭಿಸಿದೆ. ಶ್ರೈನ್ ನಿರ್ದೇಶಕರಾದ ವಂ. ಸ್ಟಿಫನ್ ಪೆರೇರಾ, OCD ಅವರು ಮಾತನಾಡಿ, ವಿದ್ಯಾರ್ಥಿಗಳಿಗೆ ಧೈರ್ಯ ತುಂಬುತ್ತಾ ಅವರ ಪರೀಕ್ಷಾ ತಯಾರಿಗೆ ಶುಭ ಹಾರೈಸಿದರು.